ಬಿಎಸ್‌ವೈ ಪೋಕ್ಸೋ ಕೇಸ್: ಕರ್ನಾಟಕ ಹೈಕೋರ್ಟ್ ಹೇಳಿದ್ದೇನು?
ಬಿಜೆಪಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿದ್ದ ಪೋಕ್ಸೋ ಕೇಸ್‌ನಲ್ಲಿ ಕರ್ನಾಟಕ ಹೈಕೋರ್ಟ್ ಮತ್ತೆ ರಿಲೀಫ್ ನೀಡಿದೆ. ಇನ್ನು ಈ ಕೇಸ್ ರದ್ದು ಮಾಡುವಂತೆ ಯಡಿಯೂರಪ್ಪ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‍ನ ವಿಭಾಗೀಯ ಪೀಠವು ಸೆಪ್ಟೆಂಬರ್ 19ಕ್ಕೆ ಮುಂದೂಡಿದೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಅಪ್ರಾಪ್ತೆಯಾಗಿರುವ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಇನ್ನು ಇದಕ್ಕೆ ಸಂಬಂಧಿಸಿದ್ದು ಎನ್ನಲಾದ ವಿಡಿಯೋ ಕೂಡ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು.

ಇನ್ನು ಮಹಿಳೆ ನೀಡಿದ ದೂರಿನ ಮೇರೆಗೆ ಸದಾಶಿವನಗರ ಪೊಲೀಸ್ ಸ್ಟೇಷನ್‌ನಲ್ಲಿ ಎಫ್‌ಐಆರ್ ಕೂಡ ದಾಖಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರವು ತನಿಖೆ ನಡೆಸುವಂತೆ ಸಿಐಡಿಗೆ ಸೂಚಿಸಿತ್ತು. ತನಿಖೆ ಚುರುಕುಗೊಳಿಸಿದ್ದ ಸಿಐಡಿ ಅಧಿಕಾರಿಗಳು ಯಡಿಯೂರಪ್ಪ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರು. ಅದರಂತೆ ಯಡಿಯೂರಪ್ಪ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆಗಳನ್ನು ಸಿಐಡಿ ಅಧಿಕಾರಿಗಳ ಮುಂದೆ ನೀಡಿದ್ದರು.
ಬಳಿಕ ಈ ಕೇಸ್ ರದ್ದು ಮಾಡುವಂತೆ ಹಾಗೂ ಜಾಮೀನು ಮಂಜೂರು ಮಾಡುವಂತೆ ಯಡಿಯೂರಪ್ಪ ಅವರು ಕೋರ್ಟ್ ಮೊರೆ ಹೋಗಿದ್ದರು. ಈ ಸಂಬಂಧ ಅವರನ್ನು ಬಂಧಿಸಲು ನಿರ್ಬಂಧ ವಿಧಿಸಿ, ಹೈಕೋರ್ಟ್ ಆದೇಶವನ್ನು ಆಗಸ್ಟ್ 30ರವರೆಗೆ ವಿಸ್ತರಣೆ ಮಾಡಿತ್ತು. ಬಳಿಕ ವಿಚಾರಣೆ ನಡೆಸಿ, ಇಂದಿಗೆ ಮುಂದಿನ ವಿಚಾರಣೆಯನ್ನು ನಿಗದಿ ಮಾಡಿತ್ತು. ಇದೀಗ ಮತ್ತೆ ವಿಚಾರಣೆ ಮುಂದೂಡಿದೆ. ಯಡಿಯೂರಪ್ಪ ಅವರ ಪಾಲಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಇದೇ ಕೇಸ್ ಸಂಬಂಧ ಜೂನ್ನಲ್ಲಿ ಯಡಿಯೂರಪ್ಪ ಅವರ ವಿರುದ್ಧ ಆರೋಪಪಟ್ಟಿ ಕೂಡ ಸಲ್ಲಿಕೆ ಮಾಡಲಾಗಿತ್ತು. ಅದರಲ್ಲಿ ಯಡಿಯೂರಪ್ಪ ಅವರು ಅಪ್ರಾಪ್ತ ಬಾಲಕಿಯನ್ನು ಕೋಣೆಗೆ ಕರೆದೊಯ್ದು, ಅನುಚಿತವಾಗಿ ವರ್ತಿಸಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಬಾಲಕಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ಹಣ ನೀಡಿ ವಾಪಸ್ ಕಳುಹಿಸಲಾಗಿದೆ ಎಂಬ ಆರೋಪಗಳನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಹಿಳಾ ಆಯೋಗವೂ ಈ ಕೇಸ್‌ಗೆ ಎಂಟ್ರಿ: ಈ ಕೇಸ್ ಸಂಬಂಧ ಮತ್ತೊಂದು ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ. ಈ ಕೇಸ್‌ಗೆ ರಾಜ್ಯ ಮಹಿಳಾ ಆಯೋಗ ಎಂಟ್ರಿ ನೀಡಿದ್ದು, ಈ ಪ್ರಕರಣದಲ್ಲಿ ತಪ್ಪು ಯಾರೇ ಮಾಡಿರಲಿ, ಅದು ಮಾಜಿ ಸಿಎಂ ಆದರೂ ಬಿಡುವ ಮಾತೇ ಇಲ್ಲ ಎಂದು ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಔಧರಿ ಖಡಕ್ ಆಗಿ ಹೇಳಿದ್ದಾರೆ.
ಮಹಿಳೆಯೊಬ್ಬರು ನೀಡಿದ್ದ ದೂರಿನ ಮೇರೆಗೆ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು. ಆದರೆ, ಇತ್ತೀಚೆಗಷ್ಟೇ ಆ ಮಹಿಳೆ ಸಾವನ್ನಪ್ಪಿದ್ದರು. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮಹಿಳಾ ಆಯೋಗ ಈ ಬಗ್ಗೆ ಬೆಂಗಳೂರು ಪೊಲೀಸರ ಬಳಿ ವರದಿ ಕೇಳಿದೆ. ಅಲ್ಲದೆ ಈ ಸಂಬಂಧ ವಿಶೇಷ ತನಿಖೆ ನಡೆಸುವಂತೆ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಅವರು ಗೃಹ ಇಲಾಖೆಗೆ ಪತ್ರ ಕೂಡ ಬರೆದಿದ್ದಾರೆ.
ಈ ಕೇಸ್‌ನಲ್ಲಿ ಸಂತ್ರಸ್ತೆಯಾಗಿರುವ ಬಾಲಕಿಯ ತಾಯಿಯ ಸಾವು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಕುಟುಂಬದವರು ಕೂಡ ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಅವರನ್ನು ನಾನು ಕೂಡ ಭೇಟಿ ಮಾಡಿದೆ. ಕ್ಯಾನ್ಸರ್‌ನಿಂದ ದಿಢೀರನೆ ಸಾವು ಬರಲು ಹೇಗೆ ಸಾಧ್ಯ? ಎನ್ನುವುದೇ ನಮಗೆಲ್ಲ ಕಾಡುತ್ತಿರುವ ಪ್ರಶ್ನೆ. ಅಲ್ಲದೆ, ದೂರುದಾರ ಮಹಿಳೆಯ ಶವ ಹಸ್ತಾಂತರಿಸುವ ವೇಳೆ ಎಡವಟ್ಟುಗಳು ನಡೆದಿವೆ. ಮಹಿಳೆ ಸಾವಿನ ಬಗ್ಗೆ ಕುಟುಂಬದವರು ಹುಳಿಮಾವು ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಿಸಿದ್ದಾರೆ. ಹಾಗಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications