ಶಿರಸಿ ಮಾರಿಕಾಂಬಾ ಜಾತ್ರೆಯ ಇತಿಹಾಸವೇನು?

By: ವಿನಾಯಕ ಭಟ್, ತದ್ದಲಸೆ.
Subscribe to Oneindia Kannada

ಶಿರಸಿ ಶ್ರೀ ಮಾರಿಕಾಂಬೆ ಕರ್ನಾಟಕದ ಶಕ್ತಿ ಪೀಠಗಳಲ್ಲಿ ಒಂದು. ಮಾರ್ಚ್ 22 ರಿಂದ ಒಂಭತ್ತು ದಿನಗಳ ಜಾತ್ರೆ ಆರಂಭವಾಗುತ್ತಿದೆ. ಕರ್ನಾಟಕದ ಅತಿ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಯನ್ನು ಶಿರಸಿ ಜಾತ್ರೆ ಹೊಂದಿದೆ.

ಮಾರಿಜಾತ್ರೆ ಎಂದು ಸ್ಥಳೀಯರಿಂದ ಕರೆಸಿಕೊಳ್ಳುವ ಈ ಜಾತ್ರೆ ಬೇರೆ ಕ್ಷೇತ್ರಗಳ ಜಾತ್ರೆ, ರಥೋತ್ಸವಗಳಿಗಿಂತ ವಿಭಿನ್ನ. ಬೇರೆಡೆ, ಮೂಲ ವಿಗ್ರಹ ದೇವಸ್ಥಾನದಲ್ಲೇ ಇದ್ದು ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನ ನಡೆಯುತ್ತದೆ. ಉತ್ಸವ ಮೂರ್ತಿಯನ್ನು ರಥ ಅಥವಾ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಲಾಗುತ್ತದೆ. [ಶಿರಸಿ ಮಾರಿಕಾಂಬಾ ಜಾತ್ರೆಗೆ ಎಲ್ಲರೂ ಬನ್ನಿ]

sirsi

ಆದರೆ ಶಿರಸಿ ಜಾತ್ರೆಯಲ್ಲಿ ಏಳಡಿ ಎತ್ತರದ ಮೂಲ ದೇವಿಯ ವಿಗ್ರಹವನ್ನೇ ಅಲಂಕಾರ ಸಮೇತ ಹೊರ ತಂದು, ಮದುವೆ ನೆರವೇರಿಸಿ, ಮೆರವಣಿಗೆಯಲ್ಲಿ `ಬಿಡಕಿ ಬಯಲಿ'ಗೆ( ಜಾತ್ರಾ ಗದ್ದುಗೆ ಇಡುವ ಸ್ಥಳ) ಕೊಂಡೊಯ್ಯಲಾಗುತ್ತದೆ. ಅಂದಿನಿಂದಲೇ ಜಾತ್ರೆ ಆರಂಭ. ಈ ಸಲ ಮಾರ್ಚ್ 22 ಮಂಗಳವಾರ ಈ ಮೆರವಣಿಗೆ. ಅದರ ಸೊಗಸಿಗೆ ಸಾಟಿಯಿಲ್ಲ. ಅಂದು ಲಕ್ಷಾಂತರ ಭಕ್ತರು ಆವೇಶಭರಿತರಾಗಿ ಭಾಗವಹಿಸುತ್ತಾರೆ. ಬಿಡಕಿ ಬಯಲಿನ ವಿಶೇಷ ಅಲಂಕೃತ ಗದ್ದುಗೆಯ ಮೇಲೆ ಶ್ರೀ ಮಾರಿಕಾಂಬೆ ವಿರಾಜಮಾನಳಾಗುತ್ತಾಳೆ.

ಅಲ್ಲಿಂದ ಒಂಭತ್ತು ದಿನಗಳ ಕಾಲ ಬಯಲಿನಲ್ಲೇ ನೆಲೆಸಿ ಭಕ್ತರಿಗೆ ಸಮೀಪ ದರ್ಶನ ನೀಡುತ್ತಾಳೆ. ಅಷ್ಟು ನಿಕಟ ದರ್ಶನ ಬೇರೆ ಯಾವ ಸಂದರ್ಭದಲ್ಲೂ ಸಾಧ್ಯವಾಗುವುದಿಲ್ಲ.

ಏಳು ಅಡಿ ಎತ್ತರದ ಭವ್ಯ ವಿಗ್ರಹ, ವಜ್ರ, ನವರತ್ನ ಖಚಿತ ಸ್ವರ್ಣ ಕಿರೀಟ, ಹಾರ, ನೂಪುರ, ಕಡಗಗಳು, ಬೆಳ್ಳಿ ಪ್ರಭಾವಳಿ, ಎಂಟು ಕೈಗಳು, ಒಂದೊಂದು ಕೈಲೂ ಒಂದೊಂದು ವಿಶಿಷ್ಟ ಸ್ವರ್ಣಖಚಿತ ಆಯುಧ ಹಿಡಿದ ಸಿಂಹವಾಹಿನಿ, ಮಹಿಷಮರ್ದಿನಿ, ಕೆಂಬಣ್ಣದ ಮುಖ, ಅರಳಿದ ಕಣ್ಣುಗಳ ಲಕ್ಷಣ ನೋಡಿದರೆ ಸಾಕ್ಷಾತ್ ದುರ್ಗೆಯೇ ನಿಂತಂತೆ ಭಾಸವಾಗುತ್ತದೆ. ಇದು ಭಾವುಕರಲ್ಲಿ ಭಕ್ತಿ, ಆವೇಶ ಉಕ್ಕಿಸುತ್ತದೆ.

sirsi

ಒಂಭತ್ತು ದಿನಗಳ ಜಾತ್ರಾ ಮಹೋತ್ಸವ, ಪೂಜೆ, ಧಾರ್ಮಿಕ ವಿಧಿ ವಿಧಾನಗಳ ನಂತರ ದೇವಿಯ ವಿಗ್ರಹವನ್ನು ವಾಪಸ್ಸು ಕೊಂಡೊಯ್ಯಲಾಗುತ್ತದೆ. ಅಂದು ಸಾಂಕೇತಿಕ ಬಲಿ ನಡೆದು ಚಪ್ಪರಕ್ಕೆ ಬೆಂಕಿ ಹಚ್ಚಲಾಗುತ್ತದೆ. ಇದರ ಹಿಂದಿನ ಕಥೆ ಹೀಗಿದೆ.

ಒಬ್ಬಳು ಅತಿ ಸುಂದರ ಬ್ರಾಹ್ಮಣ ಕನ್ಯೆ ಇದ್ದಳು. ಅವಳನನ್ನು ಮಾಂಸಾಹಾರಿ ಸಮುದಾಯದ ಪುರುಷನೊಬ್ಬ ಮೋಹಿಸಿದ. ಅವಳನ್ನು ಪಡೆಯುವ ಸಲುವಾಗಿ ಬ್ರಾಹ್ಮಣ ವೇಷ ಧರಿಸಿ, ವೇದ ಮಂತ್ರಗಳನ್ನು ಕಲಿತ. ಸಸ್ಯಾಹಾರ ಅನುಸರಿಸತೊಡಗಿದ. ತನ್ನ ಕುಲ ಗೋತ್ರ ಎಲ್ಲವನ್ನೂ ಗುಟ್ಟಾಗಿಯೇ ಇಟ್ಟು ಕನ್ಯೆಯನ್ನು ಮದುವೆಯಾಗಿದ.

ಒಮ್ಮೆ ಮಾಂಸಾಹಾರ ಕಣ್ಣಿಗೆ ಬಿದ್ದಾಗ ನಾಲಗೆ ಚಪಲ ತಡೆಯಲಾಗದೇ ಮಾಂಸ ಸೇವಿಸಿದ. ಇದು ಅವನ ಬ್ರಾಹ್ಮಣ ಪತ್ನಿಗೆ ಗೊತ್ತಾಗಿ ಅವಳು ಉಗ್ರರೂಪ ತಾಳಿದಳು. ಗಂಡನ ರುಂಡವನ್ನೇ ಚಂಡಾಡಿ ಸ್ವವಿಧವೆಯಾದಳು. ಆದರೂ ಕೋಪ ತಣಿಯದೇ ಮನೆಗೇ ಬೆಂಕಿ ಇಟ್ಟಳು. ಅವಳ ಅವತಾರ ಕಂಡು ಊರವರು ದಂಗಾದರು. ರೌದ್ರರೂಪಿ ಸ್ತ್ರೀ ಸಾಕ್ಷಾತ್ ದೇವಿಯೇ ಎಂದು ಅಡ್ಡಬಿದ್ದರು.

sirsi

ಇಂದಿನ ಕಾಲಘಟ್ಟದಲ್ಲಿ ಬ್ರಾಹ್ಮಣ-ಅಬ್ರಾಹ್ಮಣ, ಮೇಲು-ಕೀಳು ತಾರತಮ್ಯದಂತೆ ಮೇಲ್ನೋಟಕ್ಕೆ ಈ ಕಥೆ ಗೋಚರಿಸಿದರೂ ಅಂದಿನ ಕಾಲಘಟ್ಟದಲ್ಲಿ ಸ್ತ್ರೀಶಕ್ತಿಯ ಅಗಾಧತೆಯ ಸಂಕೇತವಾಗಿ ಮಾರಿಕಾಂಬೆ ನಿಲ್ಲುತ್ತಾಳೆ, ಆರಾಧ್ಯಳಾಗುತ್ತಾಳೆ.

ಹೀಗೆ ಗಂಡನ ಸಂಕೇತವಾಗಿ ದೇಗುಲದಲ್ಲಿ ಸಾಕಲಾಗುವ ಕೋಣವನ್ನು ಜಾತ್ರೆಯ ಕೊನೆಯ ದಿನ ಬಲಿ ಕೊಡಲಾಗುತ್ತಿತ್ತು. 1933 ರಲ್ಲಿ ಮಹಾತ್ಮಾ ಗಾಂಧೀಜಿಯವರು ಶಿರಸಿ ಭೇಟಿ ನೀಡಿದ ನಂತರ ಪ್ರಾಣಿ ಬಲಿ ನಿಲ್ಲಿಸಿದರು. ಅಂದಿನಿಂದ ಸಾಂಕೇತಿಕವಾಗಿ ಕೋಣದ ರಕ್ತವನ್ನು ಸಿರಿಂಜ್ ಮೂಲಕ ತೆಗೆದುಕೊಳ್ಳಲಾಗುತ್ತದೆ. ಇದು ಪ್ರಾಣಿ ಬಲಿ ತಡೆಯುವ ನಿಟ್ಟಿನಲ್ಲಿ ಮಾದರಿ ಕ್ರಮವಾಗಿದೆ. ವಿಶೇಷ ಎಂದರೆ ಶ್ರೀ ಕನಕದಾಸರು ಒಮ್ಮೆ ಇಲ್ಲಿಗೆ ಭೇಟಿ ನೀಡಿದ್ದಾಗಲೂ ಬಲಿಯನ್ನು ನಿಲ್ಲಿಸಲು ಆಗ್ರಹಿಸಿದ್ದರಂತೆ.

sirsi

ಜಾತ್ರೆ ಮುಗಿದ ಮೇಲೆ ಮುಂದಿನ 40 ದಿನಗಳ ಕಾಲ ಮಾರಿಕಾಂಬಾ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ. ದೇವಿ ಅಶೌಚಳಾದ್ದರಿಂದ ವಿಗ್ರಹವನ್ನು ಧಾರ್ಮಿಕ ವಿಧಿ ವಿಧಾನದ ಮೂಲಕ ನೀರಿನಲ್ಲಿ ಇಡಲಾಗುತ್ತದೆ. ಸೂತಕ ಕಳೆದ ನಂತರ ಪುನಃ ದೇಗುಲದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಯುಗಾದಿಯ ಸಮಯದಲ್ಲಿ ದೇವಿಯ ದರ್ಶನ ಆರಂಭವಾಗುತ್ತದೆ. ಅಂದರೆ, ದೇವಿ ಮತ್ತೆ ಕನ್ಯೆಯಾಗುತ್ತಾಳೆ. ಗಂಡನ ಸಂಕೇತವಾಗಿದ್ದ ಕೋಣವನ್ನು ಹರಾಜಿನಲ್ಲಿ ಮಾರಾಟ ಮಾಡಿ, ಹೊಸ ಕೋಣದ ಮರಿಯನ್ನು ಸಾಕಲಾಗುತ್ತದೆ.[ಅರೇಕಾ ಟೀ ಮಾರುಕಟ್ಟೆಗೆ, ನೀವು ಸ್ವಾದ ನೀಡಿದ್ರಾ!]

ಇನ್ನೊಂದ ವಿಶೇಷವೆಂದರೆ ಮಾರಿಜಾತ್ರೆ ಇರೋ ವರ್ಷ ಇಡೀ ಶಿರಸಿ ನಗರದಲ್ಲಿ ಹೋಳಿಹುಣ್ಣಿಮೆ ಹಬ್ಬವನ್ನು ಆಚರಿಸುವುದಿಲ್ಲ. ಎಲ್ಲಿಯೂ ಕಾಮನ ಮೂರ್ತಿ ಪ್ರತಿಷ್ಠಾಪಿಸಲ್ಲ. ಬಣ್ಣದಾಟವನ್ನೂ ಕೂಡ ಯಾರೂ ಆಡುವುದಿಲ್ಲ.

ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ರಾಜ್ಯದ ವಿವಿಧ ಪ್ರದೇಶಗಳಿಂದ, ಗೋವಾ, ಮಹಾರಾಷ್ಟ್ರ, ಆಂಧ್ರಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ದೇವಿಯ ಸಮೀಪ ದರ್ಶನದಿಂದ ಭಕ್ತರು ಪುಳಕಿತರಾಗುತ್ತಾರೆ. ಈ ಒಂಭತ್ತು ದಿನ ಶಿರಸಿಯ ಚಹರೆಯೇ ಬದಲಾಗಿಬಿಡುತ್ತದೆ. ಯಕ್ಷಗಾನ, ಬಯಲಾಟ, ನಾಟಕ, ಇಂದ್ರಜಾಲ, ಸರ್ಕಸ್, ಜೈಂಟ್ ವ್ಹೀಲ್ ಸೇರಿದಂತೆ ನಾನಾ ಆಟಗಳು, ಬಣ್ಣಬಣ್ಣದ ಬೆಳಕಿನಲಂಕಾರ ರಾತ್ರಿಹೊತ್ತು ಗಂಧರ್ವ ಲೋಕವನ್ನೇ ಸೃಷ್ಟಿಸಿಬಿಡುತ್ತದೆ.

ವಿಶೇಷ ಪೊಲೀಸ್ ಪಡೆ, ಪ್ಯಾರಾ ಮಿಲಿಟರಿ ಪಡೆಗಳನ್ನು ಕರೆಸಿಕೊಳ್ಳಲಾಗುತ್ತದೆ. ಬೆಲೆ ಕಟ್ಟಲಾಗದ ದೇವಿಯ ವಿಗ್ರಹ ಮತ್ತು ಚಿನ್ನಾಭರಣಗಳಿಗೆ ವಿಶೇಷ ಭದ್ರತೆ, ಸಿಸಿ ಕ್ಯಾಮರಾ ಇರುತ್ತದೆ.

ಪಕ್ಕದ ಜಿಲ್ಲೆಗಳು ಸೇರಿದಂತೆ ಇಡೀ ಉತ್ತರ ಕನ್ನಡದ ಚಿತ್ತ ಶಿರಸಿಯತ್ತ. ಶಿರಸಿ ತಾಲೂಕಿನ ಯಾವುದೇ ಊರಿನಲ್ಲೂ ಜಾತ್ರೆ ಮುಗಿಯುವ ತನಕ ಮದುವೆ-ಮುಂಜಿಗಳಂಥ ಕಾರ್ಯಕ್ರಮ ಹಮ್ಮಿಕೊಳ್ಳುವುದಿಲ್ಲ. ಸಾಂಪ್ರದಾಯಿಕ ಅಡಿಕೆ ವ್ಯಾಪಾರ ಜಾತ್ರೆಯಲ್ಲಿ ಬಂದ್. ಎಲ್ಲರಲ್ಲೂ ಜಾತ್ರೆಯ ಗುಂಗು. ಸ್ಥಳೀಯ ಮುಸ್ಲಿಮರಲ್ಲಿ ಸಾಕಷ್ಟು ಜನ ದೇವಿಯ ಭಕ್ತರಾಗಿದ್ದು, ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಜಾತ್ರೆ ವೇಳೆ ಸಾಕಷ್ಟು ವ್ಯಾಪಾರ, ಸಮೃದ್ಧಿ ಕಾಣುವುದು ದೇವಿಯ ಅನುಗ್ರಹ ಎಂದೇ ನಂಬಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Uttara Kannada District Sirsi is gearing up for the famous Marikamba Jatra. The religious festival will starts on 22 March 2016. Here is the History of Sirsi Marikamba Jatra.
Please Wait while comments are loading...