ಲೋಕಸಭೆ ನಂತರ ಗ್ಯಾರಂಟಿ ಯೋಜನೆಗಳು ಬಂದ್ ಆಗುತ್ತೆ ಎಂದ ಬಿಜೆಪಿ: ಡಿ ಕೆ ಶಿವಕುಮಾರ್ ಉತ್ತರ ಕೊಟ್ಟಿದ್ದು ಹೀಗೆ
ಬೆಂಗಳೂರು, ಜನವರಿ 27: ಲೋಕಸಭೆ ನಂತರ ಗ್ಯಾರಂಟಿ ಯೋಜನೆಗಳು ಬಂದ್ ಆಗುತ್ತವೆ ಎಂಬ ಬಿಜೆಪಿ ಆರೋಪದ ಕುರಿತು ಚರ್ಚೆಯಾಗುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಉತ್ತರಿಸಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಇದನ್ನು ಬಂದ್ ಮಾಡುತ್ತಾರೆ. ಕಾಂಗ್ರೆಸ್ ಸರ್ಕಾರ ಇದನ್ನು ಬಂದ್ ಮಾಡುವುದಿಲ್ಲ. ಬದಲಿಗೆ ಇದಕ್ಕೆ ಶಕ್ತಿ ತುಂಬುತ್ತೇವೆ. ಅವರು ಭಾವನೆ ಮೇಲೆ ರಾಜಕಾರಣ ಮಾಡಿದರೆ, ನಾವು ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತಿದ್ದೇವೆ ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.

ಕಳೆದ ಬಿಜೆಪಿ ಸರ್ಕಾರ ಗವಿ ಮಠಕ್ಕೆ 10 ಕೋಟಿ ರೂ. ಅನುದಾನ ಘೋಷಣೆ ಮಾಡಿತ್ತು. ಈಗ ಅದರ ಬಗ್ಗೆ ನಿಮ್ಮ ಸರ್ಕಾರ ಆಲೋಚನೆ ಮಾಡಿದೆಯೇ ಎಂದು ಕೇಳಿದಾಗ, "ಕೇವಲ ಮಾತಾಡಿದರೆ ಸಾಲದು. ನಿಮ್ಮ ಜೇಬಿಗೆ ಹಣ ಬಂದಾಗಷ್ಟೆ ಅದು ಬಂತು ಎಂದು ಹೇಳಬಹುದು. ನಾವು ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಇದಕ್ಕಾಗಿ 60 ಸಾವಿರ ಕೋಟಿ ಅನುದಾನ ಮೀಸಲಿಟ್ಟಿದ್ದೇವೆ. ಆ ಸರ್ಕಾರ ಕೇವಲ ಘೋಷಣೆ ಮಾಡಿತ್ತು, ಹಣ ನೀಡಿರಲಿಲ್ಲ. ಈ ವಿಚಾರವಾಗಿ ನೀವು ಗಮನ ಸೇಳೆದಿದ್ದೀರಿ. ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ಶೆಟ್ಟರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಬಿಜೆಪಿ ತಮಗೆ ಅನ್ಯಾಯ ಮಾಡಿದೆ ಎಂದು ಹೇಳಿ ಶೆಟ್ಟರ್ ಅವರು ನಮ್ಮ ಪಕ್ಷಕ್ಕೆ ಸೇರಿಕೊಂಡರು. ನಾವು ಅವರನ್ನು ಗೌರವಯುತವಾಗಿ ನಡೆಸಿಕೊಂಡು ಟಿಕೆಟ್ ನೀಡಿದೆವು. ಅವರನ್ನು ಜನ ದೊಡ್ಡ ಅಂತರದಲ್ಲಿ ಮಣಿಸಿದರು. ಆದರೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಪಕ್ಷಕ್ಕೆ ಬಂದಿದ್ದಾರೆ ಎಂದು ಅವರನ್ನು ಪರಿಷತ್ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದೆವು. ಬಿಜೆಪಿ ನಾಯಕರ ವಿರುದ್ಧ ಅವರು ಆಡಿದ ನುಡಿಮುತ್ತುಗಳನ್ನು ಕೇಳಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡೆವು.
ನನ್ನನ್ನು ಸಿಎಂ ಹಾಗೂ ಡಿ.ಕೆ. ಶಿವಕುಮಾರ್ ಅವರು ಗೌರವಯುತವಾಗಿ ನಡೆಸಿಕೊಂಡಿದ್ದಾರೆ. ನಾನು ನನ್ನ ಮನೆಗೆ ಮರಳಿದ್ದೇನೆ ಎಂದು ಹೇಳಿದ್ದಾರೆ. ಅವರು ನಮ್ಮ ಪಕ್ಷದ ನಾಯಕತ್ವ, ಸಿದ್ಧಾಂತ ಒಪ್ಪಿ ಬಂದ ಕಾರಣ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡೆವು. ಅವರು ಈ ಹಿಂದೆ ಬಿಜೆಪಿ ವಿರುದ್ಧ ಕೊಟ್ಟ ಹೇಳಿಕೆಗಳಿಗೆ ಈಗ ಅವರೇ ಉತ್ತರ ನೀಡಲಿ ಎಂದು ತಿಳಿಸಿದರು.

ಬಸವನಗೌಡ ಪಾಟೀಲ್ ಯತ್ನಾಳ್ ಅವರ ಕಾರ್ಖಾನೆ ಬಂದ್ ಮಾಡುತ್ತಿರುವುದರ ಬಗ್ಗೆ ಕೇಳಿದಾಗ, "ಮಾಲಿನ್ಯ ನಿಯಂತ್ರಣ ಮಂಡಳಿ ಮಾನದಂಡ ಹಾಗೂ ಕ್ರಮಗಳ ಬಗ್ಗೆ ನನಗೆ ಗೊತ್ತಿಲ್ಲ. ನಾವು ಅವರ ವಿರುದ್ಧ ಯಾಕೆ ದ್ವೇಷ ಮಾಡೋಣ ಎಂದು ತಿಳಿಸಿದರು.
ಮುಖ್ಯಮಂತ್ರಿ ಐದು ವರ್ಷ ಅಧಿಕಾರದಲ್ಲಿ ಇರುತ್ತಾರ ಎಂದು ಕೇಳಿದಾಗ, "ಈಗ ಅವರೇ ಮುಖ್ಯಮಂತ್ರಿ ಆಗಿದ್ದಾರಲ್ಲ. ನಿಮಗೆ ಯಾಕೆ ಅದರ ಬಗ್ಗೆ ಚಿಂತೆ ಎಂದು ಪ್ರಶ್ನಿಸಿದರು. ಇನ್ನೂ ಶಾಮನೂರು ಶಿವಶಂಕರಪ್ಪ ಅವರಿಗೆ ಕಾಂಗ್ರೆಸ್ ಗಿಂತ ಬಿಜೆಪಿ ಮೇಲೆ ಒಲವು ಹೆಚ್ಚುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಅವರು ಹಿರಿಯ ಶಾಸಕರಾಗಿದ್ದು, ಅವರ ಹೇಳಿಕೆಯನ್ನು ನಾನು ಗಮನಿಸಿಲ್ಲ. ಅದನ್ನು ನೋಡಿ ಮುಂದೆ ಮಾತನಾಡುತ್ತೇನೆ ಎಂದು ತಿಳಿಸಿದರು.
ರಾಜಕಾರಣದಲ್ಲಿ ಪಕ್ಷ ಬಿಡುವುದು, ಮತ್ತೆ ಸೇರುವುದು ಸಹಜ ಎಂದು ಶೆಟ್ಟರ್ ಹೇಳಿರುವ ಬಗ್ಗೆ ಕೇಳಿದಾಗ, "ನಾವು ಸಹಜ ಅಂತಾ ಹೇಳುತ್ತಿದ್ದೇವೆ. ರಾಜಕಾರಣ ನಿಂತ ನೀರಲ್ಲ, ಸಮುದ್ರ ಇದ್ದಂತೆ. ಎಷ್ಟೋ ಜನ ಬರುತ್ತಾರೆ, ಹೋಗುತ್ತಾರೆ" ಎಂದು ತಿಳಿಸಿದರು. ಇನ್ನೂ ತುಂಗಾಭದ್ರಾ ನದಿಗೆ ನವಲಿ ಸಮಾನಾಂತರ ಜಲಾಶಯ ಸ್ಥಾಪಿಸಲು ನಮ್ಮ ಸರ್ಕಾರ ಬದ್ಧವಾಗಿದ್ದು, ಈ ಬಗ್ಗೆ ಚರ್ಚೆ ಮಾಡಲು ಸಮಯ ಕೇಳಿ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಜಿಲ್ಲಾ ಮಂತ್ರಿಗಳು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ಶಾಸಕರು ನನ್ನ ಬಳಿ ಬಂದು ನವಲಿ ಸಮಾನಾಂತರ ಜಲಾಶಯ ಸ್ಥಾಪಿಸಲು ಒತ್ತಾಯಿಸಿದ್ದಾರೆ. ಈ ಬಗ್ಗೆ ಮೂರು ರಾಜ್ಯಗಳ ಸಚಿವರು ಚರ್ಚೆ ಮಾಡಬೇಕು ಎಂದು ಪತ್ರ ಬರೆದಿದ್ದೇನೆ. ಆಂಧ್ರ ಪ್ರದೇಶದವರು ಚುನಾವಣೆಯಲ್ಲಿ ನಿರತರಾಗಿರಬೇಕು. ಹೀಗಾಗಿ ಚರ್ಚೆ ಮಾಡಲು ಅವರು ಸಮಯ ನೀಡಿಲ್ಲ.
ಮೂರು ರಾಜ್ಯಗಳ ಸಚಿವರು ಕೂತು ಚರ್ಚೆ ಮಾಡಿ, ಪೋಲಾಗುತ್ತಿರುವ 30 ಟಿಎಂಸಿ ನೀರನ್ನು ಬಳಸಿಕೊಳ್ಳಲು ಮುಂದಾಗುತ್ತೇವೆ. ಇದರಿಂದ ಮೂರು ರಾಜ್ಯಗಳಿಗೆ ಅನುಕೂಲವಾಗಲಿದೆ. ಹೂಳು ತೆಗೆಯುವುದಕ್ಕಿಂತ ಹೊಸ ಸಮತೋಲಿತ ಜಲಾಶಯ ನಿರ್ಮಾಣ ಉತ್ತಮ ಆಯ್ಕೆಯಾಗಿದೆ. ಈ ಭಾಗದ ಜನರ ಅನುಕೂಲಕ್ಕಾಗಿ ನಾವು ಜಲಾಶಯ ನಿರ್ಮಾಣಕ್ಕೆ ಬದ್ಧವಾಗಿದ್ದೇವೆ. ಮುಖ್ಯಮಂತ್ರಿಗಳು ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡಿದ್ದಾರೆ. ನಾನು ಈ ಹಿಂದೆ ಜಲಸಂಪನ್ಮೂಲ ಸಚಿವನಾಗಿದ್ದಾಗ ಈ ಬಗ್ಗೆ ಚರ್ಚೆ ಆಗಿತ್ತು. ಈಗ ಅದನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದರು.












Click it and Unblock the Notifications