ಕನ್ನಡಿಗರು ಈ ಪುಸ್ತಕವನ್ನು ಓದಲೇಬೇಕು.. ಕಾರಣ ಕೊಟ್ಟ ಪ್ರಿಯಾಂಕ್
ದಕ್ಷಿಣ vs ಉತ್ತರ ಪುಸ್ತಕವನ್ನು ಕನ್ನಡಿಗರು ಓದಬೇಕು, ನಮಗಾಗುತ್ತಿರುವ ಅನ್ಯಾಯವನ್ನು, ಹಿನ್ನಡೆಯನ್ನು ಅರ್ಥ ಮಾಡಿಕೊಂಡು ಚಳವಳಿಯನ್ನು ರೂಪಿಸಲು ಮುಂದಾಗಬೇಕು ಎಂದು ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಭಾರತದ ಪ್ರತಿ ಪ್ರದೇಶವೂ ಸಮಾನ ಅವಕಾಶಗಳನ್ನು ಪಡೆಯಬೇಕು, ಸಮಾನ ನ್ಯಾಯವನ್ನು ಪಡೆಯಬೇಕು, ಪ್ರದೇಶವಾರು ಸಂಸ್ಕೃತಿ, ಅಸ್ಮಿತೆಗಳನ್ನು ಗೌರವಿಸಬೇಕು, ಆಗ ಮಾತ್ರ ಜನರಲ್ಲಿ ಒಕ್ಕೂಟ ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವದ ಮೇಲಿನ ನಂಬಿಕೆ, ಗೌರವವನ್ನು ಉಳಿಸಿ, ಬೆಳೆಸಲು ಸಾಧ್ಯ ಎಂದರು.

ಕಳೆದ 10 ವರ್ಷಗಳಿಂದ ಆಳುತ್ತಿರುವ ಬಿಜೆಪಿಯ ಕೇಂದ್ರ ಸರ್ಕಾರವು ಭಾರತದ ಭಾಷೆ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ಮೇಲೆ ಬುಲ್ಡೋಜರ್ ಹರಿಸುತ್ತಿದೆ. ಇದೆಲ್ಲದಕ್ಕಿಂತ ಮುಖ್ಯವಾದ ಮತ್ತು ಸಹಿಸಲಾಗದ ವಿಷಯವೆಂದರೆ ಆರ್ಥಿಕ ಅನ್ಯಾಯ ಎಂದು ಖಂಡಿಸಿದ್ದಾರೆ.
ದಕ್ಷಿಣ ಭಾರತಕ್ಕೆ ಅದರಲ್ಲೂ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಎಸಗುತ್ತಿರುವ ಆರ್ಥಿಕ ದಬ್ಬಾಳಿಕೆಯನ್ನು ಕನ್ನಡಿಗರು ತೀವ್ರವಾಗಿ ಖಂಡಿಸುತ್ತಾ ಬಂದಿದ್ದಾರೆ, ನಮ್ಮ ಸರ್ಕಾರವೂ ಕಾನೂನಿನ ಚೌಕಟ್ಟಿನ ಒಳಗೆ ಮತ್ತು ಹೊರಗೆ ಹೋರಾಟವನ್ನು ದಾಖಲಿಸಿದೆ ಎಂದಿದ್ದಾರೆ. ದಕ್ಷಿಣ ಭಾರತ ಮತ್ತು ವಿಶೇಷವಾಗಿ ಕರ್ನಾಟಕವು ದೇಶದ ಸರ್ವಾಂಗೀಣ ಬೆಳವಣಿಗೆಯಲ್ಲಿ ಮಹತ್ವದ ಕೊಡುಗೆ ನೀಡುತ್ತಿದ್ದಾಗಿಯೂ ಕೇಂದ್ರ ಸರ್ಕಾರದ ಆರ್ಥಿಕ ಅನ್ಯಾಯವು ಓಡುವ ಕುದುರೆಯ ಕಾಲನ್ನು ಕಟ್ಟಿ ಹಾಕಿದಂತಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಪುಸ್ತಕ ಬಿಡುಗಡೆ: ಒಕ್ಕೂಟ ಸರ್ಕಾರದ ಆರ್ಥಿಕ ತಾರತಮ್ಯದ ಬಗ್ಗೆ ಸವಿಸ್ತಾರವಾಗಿ ಬೆಳಕು ಚೆಲ್ಲುವ ಆರ್.ಎಸ್.ನೀಲಕಂಠನ್ ಅವರ ಇಂಗ್ಲಿಷ್ ಕೃತಿಯನ್ನು "ದಕ್ಷಿಣ vs ಉತ್ತರ" ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದು, ಇಂದು ಸಚಿವ ಕೃಷ್ಣಬೈರೇಗೌಡ ಮತ್ತು ಸಿ.ಎಂ ಫೈಜ್ ಅವರೊಂದಿಗೆ ಈ ಪುಸ್ತಕವನ್ನು ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ದಕ್ಷಿಣ vs ಉತ್ತರ ಪುಸ್ತಕವನ್ನು ಜನಸಾಮಾನ್ಯರಿಗೆ ಸರಳವಾಗಿ ಅರ್ಥವಾಗುವ ಭಾಷೆಯಲ್ಲಿ ಅನುವಾದಿಸಿರುವ ಹಿರಿಯ ಚಿಂತಕ ಮತ್ತು ಬರಹಗಾರರಾದ ಕೆ.ಪಿ.ಸುರೇಶ್ ಅವರು ಅತ್ಯಂತ ಪರಿಣಾಮಕಾರಿಯಾಗಿ ಆರ್ಥಿಕ ಅನ್ಯಾಯದ ವಿಷಯಗಳನ್ನು ಸಾದರಪಡಿಸಿದ್ದಾರೆ ಎಂದು ಬಣ್ಣಿಸಿದರು.
ಸಚಿವ ಕೃಷ್ಣಬೈರೇಗೌಡ ಮಾತನಾಡಿ, ದಕ್ಷಿಣ VS ಉತ್ತರ ದೇಶದ ಬಹುದೊಡ್ಡ ಬಿಕ್ಕಟ್ಟು ಪುಸ್ತಕ ಬಹಳ ಅರ್ಥಪೂರ್ಣವಾಗಿದೆ. ಕೇಂದ್ರ ಸರ್ಕಾರದಿಂದ ತೆರಿಗೆ ಹಂಚಿಕೆ, ಡಿಲಿಮಿಟೇಶನ್ ಸೇರಿದಂತೆ ಹಲವು ವಿಚಾರಗಳಲ್ಲಿ ಕೇಂದ್ರ ಸರ್ಕಾರ ಇಡೀ ದಕ್ಷಿಣ ಭಾರತದ ಸ್ವಾಯತ್ತತೆಯ ಮೇಲೆ ಪ್ರತ್ಯಕ್ಷ ದಾಳಿ ನಡೆಸುತ್ತಿದೆ. ಈ ಬಗ್ಗೆ ಕನ್ನಡ ನಾಡಿನ ಜನ ಮತ್ತಷ್ಟು ಪ್ರಜ್ಞಾವಂತರಾಗಬೇಕು ಎಂದು ಹೇಳಿದರು.












Click it and Unblock the Notifications