ಡಿ ಕೆ ಶಿವಕುಮಾರ್ ಅವರ ರಕ್ಷಣೆಗೆ ಸರ್ಕಾರ ನಿಂತಿಲ್ಲವೇ? : ಸಚಿವ ಪ್ರಿಯಾಂಕ್ ಖರ್ಗೆ ಕೊಟ್ಟ ಉತ್ತರವೇನು?
ಬೆಂಗಳೂರು, ನವೆಂಬರ್28: ಶಿವಕುಮಾರ್ ಅವರ ರಕ್ಷಣೆಗೆ ಸರ್ಕಾರ ನಿಂತಿಲ್ಲವೇ ಎಂಬ ಪ್ರಶ್ನೆಗೆ ನಾವು ಕಾನೂನು ಪಾಲನೆ ಮಾಡಿ ತೀರ್ಮಾನ ಮಾಡಿರುವ ಬಗ್ಗೆ ಇಷ್ಟು ಪ್ರಶ್ನೆ ಮಾಡುತ್ತಿದ್ದೀರಿ. ಬಿಜೆಪಿ ಸರ್ಕಾರ ಕಾನೂನು ಬಾಹೀರವಾಗಿ ತೀರ್ಮಾನ ಮಾಡಿದ್ದರ ಬಗ್ಗೆ ಪ್ರಶ್ನೆ ಕೇಳುತ್ತಲೇ ಇಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಈ ಕುರಿತು ಇಂದಿನ ಅಡ್ವಕೇಟ್ ಜೆನರಲ್ ಶಿವಕುಮಾರ್ ಅವರ ಆಪ್ತ ಕಾನೂನು ಸಲಹೆಗಾರರಿರಬಹುದು ಎಂಬ ಯತ್ನಾಳ್ ಅವರ ಅನುಮಾನದ ಬಗ್ಗೆ ಕೇಳಿದಾಗ, ಅಡ್ವಕೇಟ್ ಜೆನರಲ್ ಯಾರೇ ಆಗಿರಲಿ, ಕಾನೂನು ಒಂದೇ ಅಲ್ಲವೇ? ಯತ್ನಾಳ್ ಅವರು ಆಗ ಏಕೆ ಸುಮ್ನಿದ್ದರು? ಬಿಜೆಪಿ ಅವಧಿಯಲ್ಲಿ ಪಿಎಸ್ಐ ಹಗರಣ, ಗಂಗಾ ಕಲ್ಯಾಣ ಹಗರಣ ಯಾರು ಮಾಡಿದ್ದಾರೆ ಎಂದು ಗೊತ್ತಿದೆಯಲ್ಲವೇ? ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ ಅಲ್ಲವೇ? ಆಗ ಸಾರ್ವಜನಿಕರ ಹಿತಾಸಕ್ತಿ ಆಧಾರದ ಮೇಲೆ ಯಾಕೆ ಪ್ರಕರಣ ದಾಖಲಿಸಿಲ್ಲ? ಆಗಿನ ಅಡ್ವಕೇಟ್ ಜೆನರಲ್ ಯಾರ ಸಂಬಂಧಿಕರಾಗಿದ್ದರು? ಬಿಜೆಪಿ ಈ ಪ್ರಕರಣದ ತನಿಖೆಯನ್ನು ಕಾನೂನು ಬಾಹೀರವಾಗಿ ಸಿಬಿಐ ವಿಚಾರಣೆಗೆ ನೀಡಿದೆ ಎಂಬುದಷ್ಟೇ ನಮ್ಮ ವಾದ" ಎಂದರು.

ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರ ಶಿವಕುಮಾರ್ ಅವರ ರಕ್ಷಣೆಗೆ ಪ್ರಯತ್ನಿಸುತ್ತಿದೆ ಎಂಬ ಆರೋಪದ ಬಗ್ಗೆ ಕೇಳಿದಾಗ, "ಕೇಂದ್ರ ಬಿಜೆಪಿ ಸರ್ಕಾರ ಅಷ್ಟು ಪ್ರಾಮಾಣಿಕವಾಗಿದ್ದರೆ, ಯಡಿಯೂರಪ್ಪ, ವಿಜಯೇಂದ್ರ ಅವರ ಪ್ರಕರಣ ಹಾಗೂ ಬಿಟ್ ಕಾಯಿನ್ ಹಗರಣವನ್ನು ಸಿಬಿಐ ತನಿಖೆಗೆ ಯಾಕೆ ನೀಡುತ್ತಿಲ್ಲ? ಎಂದು ಪ್ರಶ್ನಿಸಿದರು.
ನ್ಯಾಯಾಲಯದಲ್ಲಿ ಇರುವ ಪ್ರಕರಣ ಆರೋಪಪಟ್ಟಿ ಸಲ್ಲಿಕೆ ಹಂತದಲ್ಲಿರುವಾಗ ಈ ತೀರ್ಮಾನ ಯಾಕೆ ಎಂದು ಕೇಳಿದಾಗ, "ನಮಗೆ ಯಾವುದೇ ಭಯವಿಲ್ಲ. ಉಪ್ಪು ತಿಂದವರು ನೀರು ಕುಡಿಯುತ್ತಾರೆ. ಆದರೆ ಇಲ್ಲಿ ಉಪ್ಪು ತಿಂದಿಲ್ಲವಲ್ಲ. ನಾವು ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಮಾಡಬಹುದಾಗಿತ್ತು. ಈಗ ಆದ್ಯತೆ ಮೇರೆಗೆ ಇದನ್ನು ಮಾಡಿದ್ದೇವೆ. ನಾವು ಶಿವಕುಮಾರ್ ಅವರ ಬಗ್ಗೆ ಮಾತನಾಡುತ್ತಿಲ್ಲ. ಅವರು ತಪ್ಪು ಮಾಡಿದ್ದಾರೋ ಇಲ್ಲವೋ ಎಂದು ನ್ಯಾಯಲಯ ತೀರ್ಮಾನ ಮಾಡಲಿದೆ. ಅದರ ಬಗ್ಗೆ ನಾವು ನೀವು ತೀರ್ಮಾನ ಮಾಡಲು ಆಗುವುದಿಲ್ಲ. ನಾವು ಸಿಬಿಐಗೆ ವಿಚಾರಣೆಗೆ ಅನುಮತಿ ನೀಡಿರುವ ಬಗ್ಗೆ ಮಾತ್ರ ನಾವು ಚರ್ಚೆ ಮಾಡುತ್ತಿದ್ದೇವೆ" ಎಂದು ಸ್ಪಷ್ಟಪಡಿಸಿದರು.
ನಿಮ್ಮ ನಾಯಕರು ಯಾವುದೇ ತಪ್ಪು ಮಾಡಿಲ್ಲವಾದರೆ ಸಿಬಿಐ ತನಿಖೆಗೆ ಹೆದರುತ್ತಿರುವುದೇಕೆ "ನಾವು ಹೆದರುತ್ತಿಲ್ಲ. ನಾವು ದಾಖಲೆ ಸಮೇತ ಇಟ್ಟಿರುವ ಪ್ರಶ್ನೆಗಳಿಗೆ ಸಿಬಿಐ ಉತ್ತರಿಸಲಿ. ನ್ಯಾಯಾಲಯದಲ್ಲಿ ಶಿವಕುಮಾರ್ ಅವರು ಹೋರಾಟ ಮಾಡುತ್ತಿದ್ದು, ನ್ಯಾಯಲಯ ತನ್ನ ತೀರ್ಮಾನ ಮಾಡಲಿ. ಇಲ್ಲಿ ನಮ್ಮ ಪ್ರಶ್ನೆ ಸಿಬಿಐ ವಿಚಾರಣೆಗೆ ಅನುಮತಿ ನೀಡಿರುವ ಮಾನ್ಯತೆ ಬಗ್ಗೆ ಮಾತ್ರ. ಅದರ ಹೊರತಾಗಿ ಕಾನೂನು ಹೋರಾಟ ಮುಂದುವರಿಯಲಿದೆ" ಎಂದು ತಿಳಿಸಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕಳೆದ 9-10 ವರ್ಷಗಳಿಂದ ವಿರೋಧ ಪಕ್ಷಗಳನ್ನು ಮುಗಿಸುವ ಸಂಚು ನಡೆಸುತ್ತಿದೆ. ವಿರೋಧ ಪಕ್ಷಗಳ ಧ್ವನಿ ಅಡಗಿಸಲು, ವಿರೋಧ ಪಕ್ಷದ ನಾಯಕರಿಂದ ಎದುರಾಗುವ ತೊಂದರೆ ದಮನಿಸಲು ಆಪರೇಷನ್ ಕಮಲ ಹಾಗೂ ಐಟಿ, ಇಡಿ, ಸಿಬಿಐ ಬೆದರಿಕೆ ಮೂಲಕ ಪ್ರಯತ್ನ ಮಾಡಲಾಗುತ್ತಿದೆ.
ನಮ್ಮ ಮಾಜಿ ಎಐಸಿಸಿ ಅಧ್ಯಕ್ಷರಿಂದ ನಮ್ಮ ಪಿಸಿಸಿ ಅಧ್ಯಕ್ಷರವರೆಗೂ ಯಂಗ್ ಇಂಡಿಯಾ, ನ್ಯಾಷನಲ್ ಹೆರಾಲ್ಡ್ ಹಾಗೂ ಆಕ್ರಮ ಆಸ್ತಿ ಪ್ರಕರಣಗಳನ್ನು ಬಳಸುತ್ತಿದೆ. ಇದರಲ್ಲಿ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಪ್ರಕರಣದಲ್ಲಿ ನಮ್ಮ ನಾಯಕರಾದ ಡಿ.ಕೆ. ಶಿವಕುಮಾರ್ ಅವರಿಗೆ ಎಲ್ಲಾ ರೀತಿಯ ಕಿರುಕುಳ ನೀಡಿದರು. ಚುನಾವಣೆ ಬಂದಾಕ್ಷಣ ವಿರೋಧ ಪಕ್ಷಗಳ ನಾಯಕರ ಮೇಲೆ ಮಾತ್ರ ಐಟಿ, ಇಡಿ ದಾಳಿಗಳಾಗುತ್ತವೆ. ಬಿಜೆಪಿಯ ಯಾವುದೇ ನಾಯಕರ ಮೇಲೆ ನಡೆಯುವುದಿಲ್ಲ. ಬಿಜೆಪಿ ನಾಯಕರು ಹಗಲು ದರೋಡೆ, ಕೊಲೆ ಮಾಡಿದರೂ ತನಿಖೆ ಮಾಡುವುದಿಲ್ಲ.
ನಿನ್ನೆ ನಮ್ಮ ಸರ್ಕಾರ, ಡಿ.ಕೆ. ಶಿವಕುಮಾರ್ ಅವರ ಮೇಲಿನ ಪ್ರಕರಣವನ್ನು ಸಿಬಿಐ ವಿಚಾರಣೆಯಿಂದ ಹಿಂಪಡೆಯುವ ರಾಜ್ಯ ಸರ್ಕಾರದ ತೀರ್ಮಾನದ ಬಗ್ಗೆ ನಿನ್ನೆ ರಾತ್ರಿಯಿಂದ ಮಾಧ್ಯಮ ಹಾಗೂ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಚರ್ಚೆಯಾಗುತ್ತಿದೆ. ಕಾನೂನು ವಿಚಾರವಾಗಿ ಸಾಕಷ್ಟು ಗೊಂದಲವಿದೆ. ಈ ಮಧ್ಯೆ ಬಿಜೆಪಿ ಹಲವು ತಪ್ಪು ಮಾಹಿತಿ ನೀಡುತ್ತಿದೆ.
ಕಳೆದ ಬಿಜೆಪಿ ರಾಜ್ಯ ಸರ್ಕಾರ ಡಿ.ಕೆ. ಶಿವಕುಮಾರ್ ಅವರ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದ್ದು ಕಾನೂನು ಬಾಹೀರ. ಇದೊಂದು ರಾಜಕೀಯ ಪ್ರೇರಿತ ಸಂಚು. ವಿರೋಧ ಪಕ್ಷಗಳನ್ನು ಕಟ್ಟಿಹಾಕುವ ಪ್ರಯತ್ನವಾಗಿತ್ತು. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಕಟ್ಟಿಹಾಕಲು ಬಿಜೆಪಿ ಮಾಡಿದ ಷಡ್ಯಂತ್ರ.












Click it and Unblock the Notifications