ಕೋವಿಡ್ 3ನೇ ಅಲೆ; ರೈಲ್ವೆ ಇಲಾಖೆಗೆ ಕರ್ನಾಟಕದ ಮನವಿ ಏನು?
ಬೆಂಗಳೂರು, ಆಗಸ್ಟ್ 10; ಕೇರಳ ಮತ್ತು ಮಹಾರಾಷ್ಟ್ರದಿಂದ ಆಗಮಿಸುವ ಜನರನ್ನು ನಿಯಂತ್ರಿಸುವುದು ಕರ್ನಾಟಕ ಸರ್ಕಾರಕ್ಕೆ ದೊಡ್ಡ ಸವಾಲು ಆಗಿದೆ. ಜನರು ರೈಲು ಹತ್ತುವ ಮೊದಲು ಕೋವಿಡ್ ನೆಗೆಟಿವ್ ವರದಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕರ್ನಾಟಕ ಸರ್ಕಾರ ರೈಲ್ವೆ ಇಲಾಖೆಗೆ ಒತ್ತಾಯಿಸಿದೆ.
ಕೇರಳ, ಮಹಾರಾಷ್ಟ್ರ ರಾಜ್ಯಗಳ ಗಡಿ ಜಿಲ್ಲೆಗಳಲ್ಲಿ ಈಗಾಗಲೇ ಕರ್ನಾಟಕ ಸರ್ಕಾರ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿದೆ. ಗಡಿಯಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದ್ದು, 72 ಗಂಟೆಗಳ ಮೊದಲ ಕೋವಿಡ್ ಪರೀಕ್ಷೆ ಆರ್‌ಟಿಪಿಸಿಆರ್ ವರದಿ ಇದ್ದವರಿಗೆ ಮಾತ್ರ ರಾಜ್ಯ ಪ್ರವೇಶಿಸಲು ಅನುಮತಿ ನೀಡಲಾಗಿದೆ.
ಆದರೆ ರೈಲು ಪ್ರಯಾಣಿಕರನ್ನು ನಿಯಂತ್ರಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ರೈಲು ಹತ್ತುವ ಮೊದಲು ಜನರು ಕೋವಿಡ್ ನೆಗೆಟಿವ್ ವರದಿ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ರೈಲ್ವೆ ಇಲಾಖೆಗೆ ಹೇಳಿದೆ. ಆದರೆ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

ರೈಲಿನ ಮೂಲಕ ಬೆಂಗಳೂರಿಗೆ ಮಹಾರಾಷ್ಟ್ರ, ಕೇರಳದಿಂದ ಸಾವಿರಾರು ಜನರು ಆಗಮಿಸುತ್ತಾರೆ. ಇದರಿಂದಾಗಿ ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ನೆಗೆಟಿವ್ ವರದಿ ಇಲ್ಲದ ಜನರ ಸ್ವ್ಯಾಬ್ ಸಂಗ್ರಹಕ್ಕೆ ರೈಲು ನಿಲ್ದಾಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೆ ಇದರ ನಿರ್ವಹಣೆ ಕಷ್ಟವಾಗುತ್ತಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ಮಾತನಾಡಿದ್ದಾರೆ. "ಮುಖ್ಯಕಾರ್ಯದರ್ಶಿಗಳು ರೈಲ್ವೆ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿದ್ದಾರೆ. ರೈಲು ಪ್ರಯಾಣಿಕರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ನಡೆಸಲು ಸಲಹೆ ನೀಡಲಾಗಿದೆ. ಅವರು ಇನ್ನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ" ಎಂದು ಹೇಳಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಇಲ್ಲದ ಪ್ರಯಾಣಿಕರ ಸ್ವ್ಯಾಬ್ ಮಾದರಿ ಸಂಗ್ರಹಕ್ಕೆ ಮುಂದಾಗಿದೆ. ವರದಿ ಬರುವ ತನಕ ಪ್ರಯಾಣಿಕರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ಮಾಡಲು ಚಿಂತನೆ ನಡೆಸಲಾಗಿದೆ. ಆದರೆ ಪ್ರತಿದಿನ ಬರುವ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡುವುದು ಕಷ್ಟವಾಗಿದೆ.
ಕೇರಳ ಮತ್ತು ಮಹಾರಾಷ್ಟ್ರ ಜೊತೆ ಗಡಿ ಹಂಚಿಕೊಂಡಿರುವ 8 ಜಿಲ್ಲೆಗಳಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿದೆ. ಅಲ್ಲಿ ಖಾಸಗಿ ವಾಹನ, ಸರ್ಕಾರಿ ಬಸ್‌ಗಳಲ್ಲಿ ಬರುವ ಪ್ರಯಾಣಿಕರ ನೆಗೆಟಿವ್ ವರದಿಯನ್ನು ಪರಿಶೀಲಿಸಿ ರಾಜ್ಯಕ್ಕೆ ಬಿಡಲಾಗುತ್ತಿದೆ. ಆದರೆ ರೈಲು ಪ್ರಯಾಣಿಕರ ಮೇಲೆ ಕಣ್ಗಾವಲು ಇಡುವುದು ಸುಲಭವಲ್ಲ.
ಅದರಲ್ಲೂ ರೈಲಿನ ಮೂಲಕ ಬೆಂಗಳೂರು ನಗರಕ್ಕೆ ಬರುವ ಪ್ರಯಾಣಿಕರು ಕರ್ನಾಟಕ ಸರ್ಕಾರಕ್ಕೆ ಆತಂಕ ತಂದಿದ್ದಾರೆ. ಬೆಂಗಳೂರು ನಗರದಲ್ಲಿ ಸೋಮವಾರ 296 ಹೊಸ ಕೋವಿಡ್ ಪ್ರಕರಣ ದಾಖಲಾಗಿದ್ದು, ನಗರದಲ್ಲಿ ಸೋಂಕು ನಿಯಂತ್ರಣದಲ್ಲಿದೆ. ಹೊರ ರಾಜ್ಯದವರ ಮೂಲಕ ಸೋಂಕು ನಗರದಲ್ಲಿ ಹರಡಬಹುದುದ ಎಂಬ ಆತಂಕವಿದೆ.
ಸೋಮವಾರ ಕೇರಳದಲ್ಲಿ 13,049 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 20,004 ಜನರು ಗುಣಮುಖಗೊಂಡಿದ್ದಾರೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ1,69,512 ಆಗಿದೆ. ರಾಜ್ಯದಲ್ಲಿ 4,57,494 ಜನರು ಹೋಂ ಕ್ವಾರಂಟೈನ್‌ನಲ್ಲಿ, 29,342 ಜನರು ಆಸ್ಪತ್ರೆಗಳಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ.
ಮಹಾರಾಷ್ಟ್ರದಲ್ಲಿ ಸೋಮವಾರ 4,505 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. 68 ಜನರು ಮೃತಪಟ್ಟಿದ್ದಾರೆ. 7,568 ಜನರು ಗುಣಮುಖಗೊಂಡಿದ್ದಾರೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 68,375 ಆಗಿದೆ.
ಕರ್ನಾಟಕ ಸರ್ಕಾರ ಕೋವಿಡ್ 3ನೇ ಅಲೆ ಹರಡುವಿಕೆ ತಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ರಾಜ್ಯಾದ್ಯಂತ ರಾತ್ರಿ 9ರಿಂದ ಬೆಳಗ್ಗೆ 5 ಗಂಟೆಯ ತನಕ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಅಂದಹಾಗೆ ಕರ್ನಾಟಕದಲ್ಲಿ ಸೋಮವಾರ 1186 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 23316. 24 ಗಂಟೆಗಳಲ್ಲಿ ರಾಜ್ಯದಲ್ಲಿ 24 ಜನರು ಸಾವನ್ನಪ್ಪಿದ್ದಾರೆ.












Click it and Unblock the Notifications