
ಕೇಂದ್ರದ ಟಿ-ಮನಸ್ ಯೋಜನೆಗೆ ಕರ್ನಾಟಕದ ಇ-ಮನಸ್ ಯೋಜನೆಯೇ ಮಾದರಿ: ಡಾ.ಕೆ.ಸುಧಾಕರ್
ಬೆಂಗಳೂರು, ಅ.11: ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ, ಕೇಂದ್ರ ಸರ್ಕಾರವು ಟಿ-ಮನಸ್ ಎಂಬ ಯೋಜನೆ ಜಾರಿ ಮಾಡಿದೆ. ಕರ್ನಾಟಕದ ಇ-ಮನಸ್ ಯೋಜನೆಯೇ ಇದಕ್ಕೆ ಪ್ರೇರಣೆಯಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ನಿಮ್ಹಾನ್ಸ್ ಸಂಸ್ಥೆಯಲ್ಲಿ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದ ಅವರು, "ರಾಜ್ಯದಲ್ಲಿ ಇ-ಮನಸ್ ಕಾರ್ಯಕ್ರಮದಡಿ, ತಂತ್ರಾಂಶ ಬಳಸಿ ಮಾನಸಿಕ ಆರೋಗ್ಯ ಚಟುವಟಿಕೆಗಳ ನಿರ್ವಹಣೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮ ಬಿಗ್ ಹಿಟ್ ಆಗಿದ್ದು, ಇಡೀ ದೇಶಕ್ಕೆ ಮಾದರಿಯಾಗಿದೆ. ನರರೋಗ ಸಂಬಂಧಿ ಸಮಸ್ಯೆಗಳು ದೇಶದ ಅಭಿವೃದ್ಧಿಗೆ ದೊಡ್ಡ ಅಡ್ಡಿಯಾಗಿವೆ. ಇದಕ್ಕಾಗಿ ಇದೇ ವರ್ಷ ರಾಜ್ಯದಲ್ಲಿ ಬ್ರೈನ್ ಹೆಲ್ತ್ ಇನೀಶಿಯೇಟಿವ್ ಜಾರಿ ಮಾಡಲಾಗಿದೆ. ಇದರಡಿ, ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಆಸ್ಪತ್ರೆಗಳಲ್ಲಿ ಮಾನಸಿಕ ಅನಾರೋಗ್ಯಕ್ಕೊಳಗಾದವರ ಆರೈಕೆಗಾಗಿ ವಾರಕ್ಕೆ ಒಂದು ದಿನ ಮೀಸಲಿಡಲಾಗುತ್ತಿದೆ. ಈ ಕಾರ್ಯಕ್ರಮಗಳ ಮೂಲಕ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಗೆ ಬಂದಿದೆ. ಈ ಎಲ್ಲಾ ಕಾರ್ಯಕ್ರಮಗಳನ್ನೇ ಮಾದರಿಯಾಗಿಸಿಕೊಂಡು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ, ಟಿ-ಮನಸ್ ಯೋಜನೆ ಜಾರಿ ಮಾಡಿ ಮಾನಸಿಕ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಿದೆ," ಎಂದರು.
ಮಾನಸಿಕ ಆರೋಗ್ಯದ ಬಗ್ಗೆ ಬಹಳ ಕಾಲದಿಂದ ನಮ್ಮ ಸಮಾಜದಲ್ಲಿ ಚರ್ಚೆ ನಡೆಯುತ್ತಿದೆ. ದೈಹಿಕ ಆರೋಗ್ಯ ಉತ್ತಮವಾಗಿರುವುದರ ಜೊತೆಗೆ ಮಾನಸಿಕ ಆರೋಗ್ಯ ಕೂಡ ಉತ್ತಮವಾಗಿರಬೇಕು. ಇತ್ತೀಚೆಗೆ ಜನರು ಈ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಈ ಎರಡೂ ಸಮತೋಲನದಲ್ಲಿದ್ದಾಗ ಮಾತ್ರ ಆರೋಗ್ಯ ವ್ಯವಸ್ಥೆ ಸದೃಢವಾಗಿರುತ್ತದೆ. ಸರ್ಕಾರ ಈ ಸಮತೋಲನ ಕಾಯ್ದುಕೊಳ್ಳಲು ಅನೇಕ ಕ್ರಮಗಳನ್ನು ವಹಿಸಿದೆ. ಕೋವಿಡ್ ಸಂದರ್ಭದಲ್ಲಿ ನಿಮ್ಹಾನ್ಸ್ ಸಂಸ್ಥೆ ಬಹಳ ಉತ್ತಮವಾಗಿ ಕಾರ್ಯ ನಿರ್ವಹಿಸಿತ್ತು ಎಂದು ಶ್ಲಾಘಿಸಿದರು.

ಟೆಲಿ ಮೆಂಟಲ್ ಹೆಲ್ತ್
ಕೋವಿಡ್ ಸಮಯದಲ್ಲಿ ಅನೇಕರು ಮಾನಸಿಕ ಒತ್ತಡಕ್ಕೆ ಒಳಗಾದರು. ಇದಕ್ಕಾಗಿ ನಿಮ್ಹಾನ್ಸ್ ಮತ್ತು ರಾಜ್ಯ ಸರ್ಕಾರದಿಂದ ಟೆಲಿ ಕೌನ್ಸಿಲಿಂಗ್ ಸೇವೆ ಆರಂಭಿಸಲಾಯಿತು. ಈವರೆಗೆ 23 ಲಕ್ಷ ಟೆಲಿ ಕನ್ಸಲ್ಟೇಶನ್‌ಗಳನ್ನು ನಡೆಸಲಾಗಿದೆ ಎಂಬುದು ಗಮನಾರ್ಹ. ಕ್ವಾರಂಟೈನ್‌ನಲ್ಲಿರುವವರಿಂದ ಆರಂಭವಾಗಿ ವಲಸೆ ಕಾರ್ಮಿಕರವರೆಗೂ ಎಲ್ಲರೂ ಈ ಸೇವೆ ಪಡೆದಿದ್ದಾರೆ ಎಂದರು.
ಮಾನಸಿಕ ಆರೋಗ್ಯ ಸೇವೆ ಕೋವಿಡ್ ಸಮಯಕ್ಕೆ ಮಾತ್ರ ಸೀಮಿತವಾಗಿಲ್ಲ. ಟೆಲಿ ಮೆಂಟಲ್ ಹೆಲ್ತ್ ಎಂಬ ಕಾರ್ಯಕ್ರಮವನ್ನೂ ಸರ್ಕಾರ ಆರಂಭಿಸಿದ್ದು, ಇದರಡಿ ನಿಮ್ಹಾನ್ಸ್ ಪ್ರತಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ಮಾನಸಿಕ ಆರೋಗ್ಯ ನಿರ್ವಹಣೆ ಕುರಿತು ತರಬೇತಿ ನೀಡುತ್ತಿದೆ. ಮಾನಸಧಾರ ಕಾರ್ಯಕ್ರಮದಡಿ, ಮಾನಸಿಕ ಅನಾರೋಗ್ಯಕ್ಕೊಳಗಾದವರಿಗೆ ಸೂಕ್ತ ಹಗಲು ಆರೈಕೆ ಸೇವೆ ನೀಡಲಾಗುತ್ತಿದೆ ಎಂದು ವಿವರಿಸಿದರು.

ಹೊಸ ಆಲೋಚನೆಗಳಿಗೆ ಸದಾ ಮನಸ್ಸನ್ನು ತೆರೆದಿಟ್ಟಿರಬೇಕು
ವೃತ್ತಿ ಜೀವನವು ವಿದ್ಯಾರ್ಥಿ ಜೀವನಕ್ಕಿಂತ ಬಹಳ ವಿಭಿನ್ನವಾದುದು. ಅನೇಕ ಸಂದರ್ಭದಲ್ಲಿ ನಾವು ವಿಫಲರಾಗಬಹುದು. ಆದರೆ ಸೋಲಿನಿಂದಲೇ ಕಲಿತು ಮುಂದೆ ಸಾಗಬೇಕು. ಹೊಸ ಆಲೋಚನೆಗಳಿಗೆ ಸದಾ ಮನಸ್ಸನ್ನು ತೆರೆದಿಟ್ಟಿರಬೇಕು. ರಾಜ್ಯದಲ್ಲಿ ಉತ್ತಮ ಮಾನಸಿಕ ಆರೋಗ್ಯ ಸೇವೆ ಪಡೆಯಲು ಎಲ್ಲರೂ ಕೊಡುಗೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಸಚಿವರು ಸಲಹೆ ನೀಡಿದರು.

ಮಾನಸಿಕ ಆರೋಗ್ಯ ತಜ್ಞರು ಲಭ್ಯವಿಲ್ಲ
ಪ್ರತಿಷ್ಠಿತ ನಿಮ್ಹಾನ್ಸ್ ಸಂಸ್ಥೆಯ 274 ವೈದ್ಯ ವಿದ್ಯಾರ್ಥಿಗಳು ವ್ಯಾಸಂಗ ಪೂರ್ಣಗೊಳಿಸಿ ವೈದ್ಯಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಜನಸಂಖ್ಯೆಗನುಗುಣವಾಗಿ ದೇಶದಲ್ಲಿ ಮಾನಸಿಕ ಆರೋಗ್ಯ ತಜ್ಞರು ಲಭ್ಯವಿಲ್ಲ. ಆದರೆ ಅನೇಕ ವಿದ್ಯಾರ್ಥಿಗಳು ಮಾನಸಿಕ ಆರೋಗ್ಯ ವೈದ್ಯರಾಗಲು ಬಯಸುತ್ತಿದ್ದಾರೆ ಎಂಬುದು ಆಶಾದಾಯಕ. ಅನೇಕ ಯುವ ವೈದ್ಯರು ಹೊರದೇಶಗಳಿಗೆ ಹೋಗಲು ಬಯಸುತ್ತಿದ್ದಾರೆ. ಭಾರತೀಯ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ಹೋದರೂ ಸೇವೆಯನ್ನು ದೇಶಕ್ಕೆ ನೀಡಬೇಕು ಎಂದು ಕೋರಿದರು.

ರಾಜ್ಯದಲ್ಲಿ ಯಾವುದೇ ಬಗೆಯ ಔಷಧಿಗಳ ಕೊರತೆ ಇಲ್ಲ
ಹೊಸ ಬಗೆಯ ಆಂಬ್ಯುಲೆನ್ಸ್ ಸೇವೆ ನೀಡಲು ತಜ್ಞರ ಸಮಿತಿ ರಚಿಸಿದ್ದು, ಬೈಕ್ ಆಂಬ್ಯುಲೆನ್ಸ್ ಅಗತ್ಯವಿಲ್ಲ ಎಂದು ಸಮಿತಿ ತಿಳಿಸಿತ್ತು. ಆದರೆ ಇದಕ್ಕೆ ಆರ್ಥಿಕ ಹೊರೆ ಖಂಡಿತ ಕಾರಣವಲ್ಲ. ಹಾಗೆಯೇ ಹೆಚ್ಚು ಖರ್ಚಾದರೂ ಏರ್ ಆಂಬ್ಯುಲೆನ್ಸ್ ಸೇವೆ ನೀಡಲು ಸಿದ್ಧತೆ ಮಾಡಲಾಗುತ್ತಿದೆ. ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ ಒಟ್ಟು ಎರಡು ಚಾಪರ್‌ಗಳ ಸೇವೆ ನೀಡಲು ಚರ್ಚೆಯಾಗಿದೆ. ದೇಶದಲ್ಲಿ ಮಾದರಿ ಆಂಬ್ಯುಲೆನ್ಸ್ ಸೇವೆ ದೊರೆಯಲಿದೆ ಎಂದರು.
ರಾಜ್ಯದಲ್ಲಿ ಯಾವುದೇ ಬಗೆಯ ಔಷಧಿಗಳ ಕೊರತೆ ಇಲ್ಲ. ಕಾರ್ಪೊರೇಶನ್ ಮಾದರಿಯಲ್ಲಿ ವ್ಯವಸ್ಥೆಯನ್ನು ಮಾಡಿ ಔಷಧಿ ಪೂರೈಸಲಾಗುತ್ತಿದೆ. ಔಷಧಿ ಕೊರತೆ ಬಂದರೆ ಡಿಎಚ್‌ಒ ಖಾತೆಗೆ ಹಣ ಹಾಕಿ ಕ್ರಮ ವಹಿಸಲಾಗುತ್ತದೆ. ನಕಲಿ/ಅವಧಿ ಮುಗಿದ ಔಷಧಿ ಪತ್ತೆಗೆ ಕ್ಯೂಆರ್ ಕೋಡ್ ಬಳಕೆ ಮಾಡುವ ಕೇಂದ್ರ ಸರ್ಕಾರದ ಕ್ರಮ ಸ್ವಾಗತಾರ್ಹ. ಇದು ಜಾರಿಯಾದರೆ, ಕರ್ನಾಟಕ ಕೂಡ ಇದನ್ನು ಅಳವಡಿಸಿಕೊಳ್ಳಲಿದೆ ಎಂದರು.
ರಾಜ್ಯದ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ, ವೈದ್ಯರ ನೇಮಕವಾಗುತ್ತಿದೆ. ಆದರೆ ನೂರಕ್ಕೆ ನೂರರಷ್ಟು ಆಗಿಲ್ಲ. ಕೊರತೆ ತುಂಬಲು ಕ್ರಮ ವಹಿಸಲಾಗುವುದು ಎಂದರು.