ಬೆಂಗಳೂರು: ಪೆಟ್ರೋಲ್‌ಬಂಕ್‌ನಲ್ಲಿ ಬಾಲಕಾರ್ಮಿಕನ ವಿವರ ಕೇಳಿದ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿತ
ಬೆಂಗಳೂರು, ಮೇ31: ಶಿಕ್ಷಕನೆಂದರೆ ಸಾಮಾಜಿಕ ಜವಾಬ್ದಾರಿಯನ್ನು ಉಳ್ಳವನು. ಶಿಕ್ಷಣದ ಜೊತೆಗೆ ಜೀವನದ ಪಾಠವನ್ನು ಹೇಳಿಕೊಡುವವನು. ಶಿಕ್ಷಕನೆಂದರೆ ಶಿಕ್ಷಣವನ್ನು ಕ್ಷಮಗುಣಗಳಿಂದ ಕಂಡು ಕಲಿಸುವವನು ಹೀಗೆ ಶಿಕ್ಷಕನಿಗೆ ಸಮಾಜದಲ್ಲಿ ಬಹುದೊಡ್ಡ ಗೌರವವಿರುತ್ತದೆ. ಆದರೆ ಬಾಲ ಕಾರ್ಮಿಕನೊಬ್ಬನ್ನು ಕಂಡು ಆತನ ವಿವರವನ್ನು ಕೇಳಿದ ಶಿಕ್ಷಕನಿಗೆೆ ಥಳಿಸಿರುವ ಘಟನೆ ಬೆಂಗಳೂರಿನ ಬ್ಯಾಟರಾಯನ ಪುರದಲ್ಲಿ ನಡೆದಿದೆ.
ಸಣ್ಣ ಕತೆಯೊಂದನ್ನು ಉಲ್ಲೇಖ ಮಾಡಬಹುದು, ಅದೇನೆಂದರೆ ಬಹುದೊಡ್ಡ ಸಮಾರಂಭವೊಂದು ನಡೆಯುತ್ತಿರುತ್ತದೆ. ಆ ಸಮಾರಂಭಕ್ಕೆ ಪ್ರಧಾನಮಂತ್ರಿಯು ಆಗಮಿಸಿರುತ್ತಾರೆ. ವಿವಿಧ ಕ್ಷೇತ್ತ್ರಗಳಲ್ಲಿ ಸಾಧನೆಯನ್ನು ಮಾಡಿದ ಗಣ್ಯರಿರುತ್ತಾರೆ. ಗಣ್ಯರನ್ನೆಲ್ಲಾ ವೇದಿಯ ಮೇಲೆ ಕೂರಿಸಿ ಸನ್ಮಾನ ಮಾಡಲಾಗುತ್ತದೆ. ಅದೇ ಸಮಾರಂಭದ ಮುಂದಿನ ಸಾಲಿನಲ್ಲಿ ವಯಸ್ಸಾದ ಶಿಕ್ಷಕರು ಕುಳಿತಿರುತ್ತಾರೆ. ಪ್ರಶಸ್ತಿಯನ್ನು ಸ್ವೀಕಾರ ಮಾಡಿ ಪ್ರಧಾನಿ, ವೈದ್ಯ, ಇಂಜಿನಿಯರ್ ಆದಿಯಾಗಿ ಎಲ್ಲರೂ ಶಿಕ್ಷಕರ ಸಮೀಪಕ್ಕೆ ಬಂದು ಕಾಲಿಗೆರಗುತ್ತಾರೆ.
ಅಲ್ಲೇ ಮೂಲೆಯಲ್ಲಿ ನಿಂತಿದ್ದ ಕೂಲಿ ಕಾರ್ಮಿಕನೊಬ್ಬ ಓಡಿ ಬಂದು ಶಿಕ್ಷಕರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾನೆ. ಸಮಾರಂಭದಲ್ಲಿದ್ದವಿಗೆಲ್ಲಾ ಅಚ್ಚರಿಯಾಗುತ್ತೆ ಯಾರು ಈ ಮುದುಕ ಯಾಕೆ ಎಲ್ಲರೂ ನಮಸ್ಕರಿಸುತ್ತಿದ್ದಾರೆ ಎಂದು ಕೊನೆಗೆ ಶಿಕ್ಷಕನನ್ನು ಸ್ವತಃ ಪ್ರಧಾನಿ ವೇದಿಕೆಗೆ ಕರೆತರುತ್ತಾರೆ. ಆಗ ಶಿಕ್ಷಕರ ಮಹತ್ವವನ್ನು ತಿಳಿಸುತ್ತಾರೆ. ಶಿಕ್ಷಕ ಶಿಕ್ಷಕನಾಗಿಯೇ ಉಳಿದಿದ್ದಾರೆ. ಅವರ ಬಳಿಯಲ್ಲಿ ಪಾಠ ಕಲಿತ ನಾವೆಲ್ಲರೂ ದೊಡ್ಡ ದೊಡ್ಡ ಹುದ್ದೆಗೇರಿದ್ದೇವೆ. ನಾವು ಈ ಹುದ್ದೆಗೆ ಬರಲು ಶಿಕ್ಷಕರ ಬೇರು ಮಟ್ಟದ ಶಿಕ್ಷಣ ಅತ್ಯಮೂಲ್ಯವಾದದ್ದು. ಶಿಕ್ಷಕರನ್ನು ಗೌರವಿಸಿದರೇ ಪ್ರಧಾನಿಯಾಗಬಹುದು ದೊಡ್ಡ ಹುದ್ದೆಗೇರಬಹುದು ಶಿಕ್ಷಕರನ್ನು ಅವಮಾನಿದರೇ ದಾರಿ ಕಾಣದ ವಿವೇಕವಿಲ್ಲದ ಕುರುಡನಾಗಬಹುದು ಎನ್ನುತ್ತಾರೆ. ಈ ಕಥೆಯ ಅರ್ಥವಿಷ್ಟೇ ಶಿಕ್ಷಕನಾದವನು ಮನಸ್ಸಿನ ಅಂಕುಡೊಂಕಿನ ಜೊತೆಗೆ ಸಮಾಜ ಅಂಕುಡೊಂಕುಗಳನ್ನು ತಿದ್ದುತ್ತಾನೆ. ಸಮಾಜಮುಖಿಯಾಗಿ ಬದುಕುತ್ತಾನೆ ಎಂಬುದು. ದುರಂತವೆಂದರೇ ಇಲ್ಲೋಬ್ಬ ಶಿಕ್ಷಕ ಸಮಾಜದ ಅಂಕುಡೊಂಕು ತಿದ್ದಲು ಹೋಗಿ ಥಳಿಸಿಕೊಂಡಿದ್ದಾನೆ.

ಹೀಗೆ ಸಮಾಜದಲ್ಲಿ ಇಂತಹ ಉನ್ನತ ಸ್ಥಾನ ಹೊಂದಿರವ ಶಿಕ್ಷಕರು ಕೆಲವೊಮ್ಮೆ ಸಾಮಾಜಿಕ ಜವಾಬ್ದಾರಿಗಳನ್ನೂ ನಿಭಾಯಿಸಬೇಕಾಗುತ್ತದೆ. ಅದೇ ರೀತಿ ಬೆಂಗಳೂರಿನ ಶಿಕ್ಷಕರೊಬ್ಬರು ಪೆಟ್ರೋಲ್‌ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಬಾಲಕಾರ್ಮಿಕನ ಬಗ್ಗೆ ಪ್ರಶ್ನಿಸಿ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಹಲ್ಲೆಗೆ ಒಳಗಾಗಿದ್ದಾರೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಪೂಜಿ ನಗರ ನಿವಾಸಿ ಶಿಕ್ಷಕರಾಗಿರುವ ಚಿಕ್ಕತಿಮ್ಮಯ್ಯ ಎಂಬುವರು ನೀಡಿದ ದೂರಿನ ಮೇರೆಗೆ ಮಾದೇಶ್ ಹಾಗೂ ದೇವರಾಜ್ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಪೆಟ್ರೊಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಸಿಬ್ಬಂದಿಗೂ ವಿಚಾರಣೆ ಹಾಜರಾಗುವಂತೆ ನೊಟೀಸ್ ಜಾರಿ ಮಾಡಲಾಗಿದೆ.
ಸಮಾಜಮುಖಿ ಕೆಲಸ ಮಾಡಲು ಏಟು ತಿಂದ ಶಿಕ್ಷಕ
ಜೈನ್ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಚಿಕ್ಕ ತಿಮ್ಮಯ್ಯ ಮೇ 27 ರಂದು ತಮ್ಮ ಬೈಕಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಸಮೀಪದ ರಚನಾ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ಗೆ ಹೋಗಿದ್ದರು. ಪೆಟ್ರೋಲ್ ಹಾಕುತ್ತಿದ್ದ ಸಿಬ್ಬಂದಿ ಬಾಲಕನಂತೆ ಕಂಡು ಬಂದಿದ್ದರಿಂದ ಆತನಿಂದ ವಿವರ ಪಡೆದಿದ್ದ. ಅನುಮಾನಗೊಂಡು ವಯೋಮಿತಿ ದೃಢೀಕರಿಸಲು ಬಂಕ್ ಮ್ಯಾನೇಜರ್ ಮಾದೇಶ್‌ಗೆ ಬಾಲಕನ ಆಧಾರ್ ಕಾರ್ಡ್ ಹಾಗೂ ಮಾರ್ಕ್ಸ್ ಕಾರ್ಡ್ ನೀಡುವಂತೆ ಪ್ರಶ್ನಿಸಿದ್ದಾರೆ. ಇದಕ್ಕೆ ಕೆರಳಿದ ಮಾದೇಶ್ ಗುಂಪು ಸೇರಿಸಿ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾನೆ.

ಬಂಕ್‌ನ ಮಾಲೀಕ ದೇವರಾಜ್ ಬರುವವರೆಗೂ ಬೈಕ್ ಬಿಡೋದಿಲ್ಲ ಮ್ಯಾನೇಜರ್ ಮಾದೇಶ್ ಮತ್ತು ಇತರೆ ಶಿಕ್ಷಕನನ್ನು ಅಲ್ಲಿಯೇ ಕೂಡಿಹಾಕಿದ್ದಾರೆ. ಬಳಿಕ ಮಾಲೀಕ ದೇವರಾಜ್ ಬಂದು ಶಿಕ್ಷಕನ ಮೇಲೆ ಏಕಾಏಕಿ ಥಳಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಮಾರಾಣಾಂತಿಕ ಹಲ್ಲೆ ನಡೆಸಿದ್ದಾನೆ. ಸ್ಥಳದಿಂದ ಹೇಗೊ ತಪ್ಪಿಸಿಕೊಂಡು ಶಿಕ್ಷಕ ಬ್ಯಾಟರಾಯನಪುರ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಶಿಕ್ಷಕ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.












Click it and Unblock the Notifications