ರಾಜ್ಯದ ಅಂತರ್ಜಾಲ ಸಂಪರ್ಕ ಸುಧಾರಣೆಗೆ ಕೇಂದ್ರ ಕಾರ್ಯಪಡೆ ರಚನೆ
ನವದೆಹಲಿ, ಸೆಪ್ಟೆಂಬರ್ 8: ಕರ್ನಾಟಕದಲ್ಲಿ ಅಂತರ್ಜಾಲ ಸಂಪರ್ಕ ಸುಧಾರಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕಾರ್ಯಪಡೆ ರಚಿಸಿದೆ ಎಂದು ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ.
ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಸೂಚನೆ ಮೇರೆಗೆ ಕರ್ನಾಟಕಕ್ಕೆ ಕಾರ್ಯಪಡೆ ಕಳುಹಿಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ನ್ಯಾಷನಲ್ ಇಂಟರ್ನೆಟ್ ಎಕ್ಸ್‌ಚೇಂಜ್ ಆಫ್ ಇಂಡಿಯಾ (NIXI) ಹಾಗೂ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾದ (STPI) ಅಧಿಕಾರಿಗಳನ್ನೊಳಗೊಂಡ ಸಚಿವಾಲಯದ ಕಾರ್ಯಪಡೆ ಶೀಘ್ರವೇ ತಮ್ಮ ಕೆಲಸ ಆರಂಭಿಸಲಿದೆ. ಈ ತಂಡ ಪ್ರತಿ ಜಿಲ್ಲೆಗೆ ಭೇಟಿ ನೀಡಲಿದೆ, ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಭೇಟಿ ಮಾಡಿ ಸಚಿವರಿಗೆ ವರದಿ ಸಲ್ಲಿಸಲಿದ್ದಾರೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಕರ್ನಾಟಕದ ಆರು ಜಿಲ್ಲೆಗಳಲ್ಲಿ ಈಚೆಗೆ ನಡೆಸಿದ ಜನಾಶೀರ್ವಾದ ಯಾತ್ರೆ ಸಂದರ್ಭ, ಅಂತರ್ಜಾಲ ಸಂಪರ್ಕ ವೇಗ ಸುಧಾರಣೆ ಸಂಬಂಧ ರಾಜೀವ್ ಚಂದ್ರಶೇಖರ್ ಅವರಿಗೆ ಮನವಿಗಳು ಬಂದಿದ್ದವು. ಈ ಸಂಬಂಧ ಪ್ರತಿ ಜಿಲ್ಲೆಯಲ್ಲಿಯೂ ಅಧ್ಯಯನ ನಡೆಸಲು ಕಾರ್ಯಪಡೆ ಕಳುಹಿಸಲಾಗುವುದು ಎಂದು ಸಚಿವರು ಆಗ ಭರವಸೆ ನೀಡಿದ್ದರು.
Task force constituted to improve internet connectivity in Karnataka districts by @GoI_MeitY @AshwiniVaishnaw @Rajeev_GoI @PIBBengaluru
— PIB_India MeitY (@MeityPib) September 8, 2021
Details: https://t.co/YStfvGRfon pic.twitter.com/vGL15IIZCy
ಇದೇ ಸಂದರ್ಭ, ಭಾರತ ಹಾಗೂ ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ತಂತ್ರಜ್ಞಾನ ವಲಯದ ಸಂಸ್ಥೆಗಳು ವರ್ಕ್ ಫ್ರಂ ಹೋಂನತ್ತ ಒಲವು ಹೊಂದಿವೆ. ಕರ್ನಾಟಕದ ಎರಡನೇ ವರ್ಗದ ನಗರಗಳಲ್ಲಿ ಅಂತರ್ಜಾಲ ಸಂಪರ್ಕ ಸೇವೆ ಬಲಪಡಿಸುವತ್ತ ಆಲೋಚನೆ ನಡೆಸುವೆವು ಎಂದು ಹೇಳಿದ್ದರು. ಈ ನಗರಗಳಲ್ಲಿ ಐಟಿ ಪಾರ್ಕ್‌ಗಳನ್ನು ಸ್ಥಾಪನೆ ಮಾಡಿ ಅಂತರ್ಜಾಲ ಸಂಪರ್ಕ ಬಲಪಡಿಸುವುದು ಹಾಗೂ ಕ್ಲೌಡ್ ಸ್ಟೋರೇಜ್ ಸಾಮರ್ಥ್ಯ ಹೆಚ್ಚಳ ಮಾಡುವುದರ ಕುರಿತು ಗಮನ ನೀಡಲಾಗುತ್ತದೆ ಎಂದಿದ್ದರು.
ಅದರಂತೆ ಇದೀಗ ಕೇಂದ್ರದ ಕಾರ್ಯಪಡೆ ರಚಿಸಿ ಕರ್ನಾಟಕಕ್ಕೆ ಕಳುಹಿಸಿಕೊಡುತ್ತಿರುವುದಾಗಿ ಸಚಿವಾಲಯ ಮಾಹಿತಿ ನೀಡಿದೆ.

ಭಾರತ್ ನೆಟ್ ಯೋಜನೆಯಡಿ ಕಾರ್ಯನಿರ್ವಹಣೆ
ದೇಶದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸಿ ಆರು ಲಕ್ಷಕ್ಕೂ ಅಧಿಕ ಹಳ್ಳಿಗಳಿಗೆ ವೈಫೈ ಸೇವೆ ಒದಗಿಸಬೇಕೆಂಬ ಪ್ರಧಾನಿ ಮೋದಿಯವರ ಕನಸಿನ "ಭಾರತ್ ನೆಟ್" ಯೋಜನೆಗೆ ಪೂರಕವಾಗಿ ಕಾರ್ಯನಿರ್ವಹಿಸಲಾಗುವುದು. ಡಿಜಿಟಲ್ ಇಂಡಿಯಾ ಯೋಜನೆಯಡಿ ಎಲ್ಲ ಭಾರತೀಯರಿಗೆ ನೇರ ಸಂಪರ್ಕ ಸಾಧಿಸುವುದು ನಮ್ಮ ಸಚಿವಾಲಯದ ಗುರಿ. ಈ ಗುರಿಗೆ ಪೂರಕವಾಗಿ ಕೆಲಸ ನಿರ್ವಹಿಸುವೆವು ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದರು.
ಪ್ರತಿ ಜಿಲ್ಲೆಯ ಒಂದು ಹಳ್ಳಿಯಂತೆ ಒಟ್ಟು ಐದು ಸಾವಿರ ಹಳ್ಳಿಗಳಿಗೆ ಅಂತರ್ಜಾಲ ಸೌಲಭ್ಯ ಒದಗಿಸಲು ಮುಂದಾಗಿದೆ. ಕಳೆದ ಐದು ವರ್ಷಗಳಲ್ಲಿ ಕೌಶಲ ಭಾರತ್ ಮಿಷನ್ ಅಡಿಯಲ್ಲಿ ಪ್ರತಿ ಜಿಲ್ಲೆಗೊಂದರಂತೆ ಎಂಟು ನೂರಕ್ಕೂ ಅಧಿಕ ಕೌಶಲ ಕೇಂದ್ರಗಳನ್ನು ತೆರೆಯಲಾಗಿದೆ. 20 ಸಾವಿರಕ್ಕೂ ಹೆಚ್ಚು ತರಬೇತಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಹೇಳಿದ್ದರು.
ಡಿಜಿಟಲ್ ವಿಲೇಜ್ ಪರಿಕಲ್ಪನೆ: ಆಗಸ್ಟ್ ತಿಂಗಳಿನಲ್ಲಿ ನಡೆದ ಜನಾಶೀರ್ವಾದ ಸಂದರ್ಭ ಶಿವಮೊಗ್ಗದಲ್ಲಿ ಮಾತನಾಡಿದ್ದ ರಾಜೀವ್ ಚಂದ್ರಶೇಖರ್, 'ಡಿಜಿಟಲ್ ವಿಲೇಜ್ ಪರಿಕಲ್ಪನೆಯೂ ಜಾರಿಯಲ್ಲಿದೆ. 5 ಸಾವಿರ ಗ್ರಾಮಗಳ ಪ್ರತಿ ಮನೆಗೆ ಕಡಿಮೆ ಬೆಲೆಯ ಉಪಕರಣದ ಮೂಲಕ ಮಾದರಿ ಯೋಜನೆ ಜಾರಿಗೊಳ್ಳುತ್ತಿದೆ. ಕರ್ನಾಟಕದಲ್ಲಿ ಪ್ರತಿ ಜಿಲ್ಲೆಗೊಂದು ಡಿಜಿಟಲ್ ವಿಲೇಜ್ ಇರುತ್ತದೆ. ಬಳಕೆದಾರರ ರಕ್ಷಣೆ-ಹಿತಾಸಕ್ತಿ ಕಾಪಾಡುವ ಹೊಸ ಕಾಯಿದೆಗಳನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾರಿಗೊಳಿಸಲಾಗುತ್ತಿದೆ. ತಂತ್ರಜ್ಞಾನ ಕೌಶಲದ ಶಿಕ್ಷಣ ಇಂದಿನ ಅಗತ್ಯವಾಗಿದೆ. ನೂತನ ಶಿಕ್ಷಣ ನೀತಿಯು (ಎನ್‍ಇಪಿ) ಉದ್ಯೋಗಾವಕಾಶಗಳನ್ನು ನೀಡಲಿದೆ ಎಂದು ರಾಜೀವ್ ಚಂದ್ರಶೇಖರ್ ವಿವರಿಸಿದರು.












Click it and Unblock the Notifications