ಫೆ. 23ರಂದು ತೋವಿನಕೆರೆಯಲ್ಲಿ 'ವಿಶೇಷ ಹುಣಸೆ ಕಾರ್ಯಾಗಾರ': ಮಹತ್ವದ ಸಂವಾದ, ಕಿರು ಹೊತ್ತಿಗೆ ಬಿಡುಗಡೆ
ಬೆಂಗಳೂರು: ವರ್ಷ ಪೂರ್ತಿ ಬಳಕೆಗೆ ಬರುವ, ಯುಗಾದಿಗೆ ಬೆಳೆಗಾರರಿಗೆ ಆದಾಯ ತಂದು ಕೊಡುವ ವಾಣಿಜ್ಯ ಬೆಳೆ 'ಹುಣಸೆ'. ಮಳೆ ಬಾರದಿದ್ದರೂ ವರ್ಷ ವರ್ಷ ಫಸಲು ಕೊಡುವ ಸಾಮರ್ಥ್ಯ ಈ ಹುಣಸೆಗಿದೆ. ಅಂತಹ ಶಕ್ತಿ ಇರುವ ಈ ಬೆಳೆಯು ಯುಗಾದಿಗೆ ಬೆಳೆಗಾರರ ಆರ್ಥಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಉತ್ತರ ಕರ್ನಾಟಕ ಭಾಗಗಳಲ್ಲಿ ಈ ಬೆಳೆ ಹೆಚ್ಚು ಬೆಳೆಯಲಾಗುತ್ತಿದೆ. ಇದೇ ನಾಳೆ ಫೆಬ್ರವರಿ 23 ರಂದು ಸೋಮವಾರ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತೋವಿನಕೆರೆಯಲ್ಲಿ 'ವಿಶೇಷ ಹುಣಸೆ ಕಾರ್ಯಾಗಾರ' ನಡೆಯಲಿದೆ. ವಿವಿಧ ಜಿಲ್ಲೆಗಳ ಹುಣಸೆ ಬೆಳೆಗಾರರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಂಗಳೂರಿನ ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರ (IIHR), ಸಾಂಬಾರ ಮಂಡಳಿ ಸಕಲೇಶಪುರ ಅವರ ಸಹಕಾರದಲ್ಲಿ ತೋವಿನಕೆರೆಯಲ್ಲಿರುವ ಚಂದ್ರನಾಥ ಸ್ವಾಮಿ ಜೈನ ದಿಗಂಬರ ಮಂದಿರದ ಭವನದಲ್ಲಿ ಕಾರ್ಯಾಗಾರ ನಡೆಯಲಿದೆ. ಸ್ಥಳೀಯ ಶ್ರಮಿಕ ಸಿರಿ, ಸ್ನೇಹ ಸಿರಿ, ಮಹಿಳಾ ಸಿರಿ, ಮತ್ತು ಸನ್ಮಿತ್ರ ಸಹಕಾರ ವೇದಿಕೆಯವರು ಈ ಹುಣಸೆ ಬೆಳೆಗಾರರ ಸಮಾಗಮಕ್ಕೆ ಕೈ ಜೋಡಿಸಿದ್ದಾರೆ. ಮಾತ್ರವಲ್ಲದೇ ಸ್ಥಳಿಯ ಹಲವು ಸಂಘ ಸಂಸ್ಥೆಗಳು, ವ್ಯಕ್ತಿಗಳು ವಿಶಿಷ್ಟ ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದಾರೆ.

ಹುಣಸೆ ಬಗೆಗಿನ 'ಕಿರು ಹೊತ್ತಿಗೆ' ಬಿಡುಗಡೆ
ಸದರಿ 'ಹುಣಸೆ ಕಾರ್ಯಾಗಾರ'ದಲ್ಲಿ ಪತ್ರಕರ್ತರಾದ ಗಾಣಧಾಳು ಶ್ರೀಕಂಠ ಅವರ ಸಂಪಾದಿಸಿರುವ ಹುಣಸೆ ಕೃಷಿ ಕುರಿತ ಮಾಹಿತಿಗಳ 'ಕಿರು ಹೊತ್ತಿಗೆ'ಯನ್ನು ಬಿಡುಗಡೆ ಮಾಡಲಾಗುತ್ತದೆ. ಇದು ಬೆಳೆಗಾರರಿಗೆ ಹೆಚ್ಚಿನ ಅನುಕೂಲ, ಇತರ ಮಾಹಿತಿ ತಿಳಿಯಲು ಸಹಾಯವಾಗಬಹುದು.
ರಾಜ್ಯದ ಸುಮಾರು 10ಕ್ಕೂ ಅಧಿಕ ಜಿಲ್ಲೆಗಳಿಂದ ಹುಣಸೆ ಬೆಳೆಗಾರರು, ಮೌಲ್ಯ ವರ್ಧನೆ ಮಾರಾಟ ಮಾಡುತ್ತಿರುವವರು, ಸಂಸ್ಕರಣೆಗೆ ಯಂತ್ರಗಳ ಸಂಶೋಧನೆ ಮಾಡುತ್ತಿರುವವರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ತಮ್ಮ ವ್ಯಾಪಾರ ವಹಿವಾಟು, ತಾವು ಎದುರಿಸುತ್ತಿರುವ ಸವಾಲುಗಳು, ಬೆಂಬಲ ಅಗತ್ಯತೆ ಸೇರಿ ಮಹತ್ವದ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ.
ಕಾರ್ಯಾಗಾರದ ವಿಶೇಷತೆಗಳು
ಹುಣಸೆ ಹಣ್ಣು ಬಡಿಯುವ, ಹುಣಸೆ ಹಣ್ಣು ಮತ್ತು ಬೀಜ ಬಿಡಿಸುವ ಯಂತ್ರಗಳ ಪ್ರಾತ್ಯಕ್ಷಿಕೆ, ವಿವಿಧ ತಳಿ ಹುಣಸೆ, ಹತ್ತಾರೆ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಇರಲಿದೆ. ಮುಖ್ಯವಾಗಿ 'ತಳಿ ಸಂರಕ್ಷಣೆ, ಯಂತ್ರಗಳು, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸಂಪರ್ಕ ಕುರಿತು' ಸಂವಾದ ನಡೆಯಲಿದೆ. ಇನ್ನೂ ಅಮೆರಿಕಾದಲ್ಲಿರುವ ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆಯವರು ಹುಣಸೆ ಕಾರ್ಯಗಾರದ ಬಗ್ಗೆ ಹಾಡು ಬರೆದುಕೊಟ್ಟಿದ್ದು, ಅದೂ ಈಗಾಗಲೇ ಬೆಳೆಗಾರರನ್ನು ತಲುಪಿದ್ದು ಗುನುಗುವಂತೆ ಮಾಡಿದೆ. 'ಕಣ್ಮರೆಯಾಗುವ ಭಯದ ಅಂಚಿಗೆ ಬಂದಿರುವ ಹುಣಸೆ ಉಳಿಸಿ ಬೆಳಸಿ ಉಪಯೋಗಕ್ಕೆ ತರಬೇಕು' ಮಹದಾಶಯದಲ್ಲಿ ಹಾಡುಗಳು ವಿಶಿಷ್ಟವಾಗಿ ಮೂಡಿ ಬಂದಿವೆ.
ಹುಣಸೆ ಬೆಳೆಗಾರರ ಸವಾಲುಗಳಿಗೆ ಪರಿಹಾರ
ಹುಣಸೆ ಬೆಳೆಗಾರರು ಒಂದಷ್ಟು ಸಮಸ್ಯೆ, ಸವಾಲು ಎದುರಿಸುತ್ತಿದ್ದಾರೆ. ಅಡಿಕೆ ಅಬ್ಬರ, ಕೃಷಿ ಕಾರ್ಮಿಕರ ಕೊರತೆ, ಸಂಸ್ಕರಣೆಗೆ ಸಂಶೋಧನೆಯಾಗದ ಯಂತ್ರಗಳು, ಮರದಿಂದ ಬಿದ್ದು ನಿಧನರಾಗುತ್ತಿರುವ ಕೃಷಿ ಕಾರ್ಮಿಕರು, ಅವರುಗಳಿಗೆ ನೀಡಲೇ ಬೇಕಾದ ಪರಿಹಾರ, ಅನುಭವಿ ಕೃಷಿ ಕಾರ್ಮಿಕರ ಕೊರತೆ, ದಿನೇ ದಿನೇ ಕುಸಿಯುತ್ತಿರುವ ಹುಣಸೆ ಬೆಲೆ ಹೀಗೆ ಸಾಲು ಸಾಲು ಸವಾಲುಗಳು ಇವರ ಮುಂದಿವೆ. ಇವುಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸಗಳು ಈ ಕಾರ್ಯಾಗಾರದಲ್ಲಿ ಆಗಲಿವೆ.
ಕಣ್ಮರೆಯ ಅಂಚಿಗೆ ಬಂದಿರುವ 'ಹುಣಸೆ' ಉಳಿಸಿ ಬೆಳೆಸಿ ವಿಶಿಷ್ಟ ಹಾಡು ಇಲ್ಲಿದೆ....
— oneindiakannada (@OneindiaKannada) February 22, 2026
ಸಾಹಿತಿ : ಕೃಷ್ಣಮೂರ್ತಿ ಬಿಳಿಗೆರೆ.#SaveHunaseTree #KannadaFolkSong #tamarind #Savetamarindtree #OIKannada #Oneindia pic.twitter.com/Zdp4oKYOwp
ಹುಣಸೆಗೆ ಗರಿಷ್ಠ ಬೆಲೆ
ಬರಗಾಲದಲ್ಲೂ ಕೈ ಹಿಡಿಯುವ ಈ ಹುಣಸೆ ಬೆಳೆಯು ಕೆಲವು ವರ್ಷಗಳ ಹಿಂದೆ ಹುಣಸೆ ಹಣ್ಣಿನ ಬೆಲೆ ನೂರು ಕೆ.ಜಿಗೆ 20 ರಿಂದ 40 ಸಾವಿರ ರೂಪಾಯಿ ಗಡಿ ಮೀರಿತ್ತು. ಆ ವರ್ಷ ತೋವಿನಕೆರೆ ಪಂಚಾಯತಿ ವ್ಯಾಪ್ತಿ ಹಾಗೂ ಅಕ್ಕ ಪಕ್ಕದ ಹಳ್ಳಿಗಳ ರೈತರುಗಳಿಗೆ ಬಂದ ಹಣ ನೂರು ಕೋಟಿ ಮುಟ್ಟಿತು. ಮಧುಗಿರಿ ತಾಲ್ಲೂಕು ದೊಡ್ಡೇರಿ ಯಲ್ಲಿ ಬೆಳೆದಿದ್ದ ಹುಣಸೆ ಸಸಿಗಳ ಒಟ್ಟು ಮಾರಾಟವೇ ಸುಮಾರು 6 ಲಕ್ಷ ರೂಪಾಯಿ ದಾಟಿತ್ತು. ನಂತರ ವರ್ಷದಿಂದ ವರ್ಷ ಹುಣಸೆ ಬೆಳೆ ಕಡಿಮೆ ಆಗುತ್ತಿದೆ. ಇದಕ್ಕೆ ಬೆಲೆ, ಆಳುಗಳ ಕೊರತೆ, ಮರಗಳ ಕಡಿಮೆ ಆಗುತ್ತಿರುವುದು ಸೇರಿ ಹಲವು ಕಾರಣಗಳು ಇವೆ.












Click it and Unblock the Notifications