SWR: ರಾಜ್ಯದ ಈ ಮಾರ್ಗದ ರೈಲುಗಳ ಸಂಚಾರ ರದ್ದು: ಯಶವಂತಪುರದಿಂದ ಚಲಿಸುವ ಎಕ್ಸ್‌ಪ್ರೆಸ್ ಸೇವೆ ವಿಸ್ತರಣೆ
ಬೆಂಗಳೂರು, ಜುಲೈ 08: ಬೆಂಗಳೂರಿನ ಯಶವಂತಪುರದಿಂದ ತೆರಳುವ ಪ್ರಯಾಣಿಕರಿಗೆ ಸಿಹಿ ಸುದ್ದಿ ಹಾಗೂ ಅರಸಿಕೆರೆ-ನರಸಾಪುರ ಮಾರ್ಗವಾಗಿ ಓಡಾಡುವವರಿಗೆ ರೈಲ್ವೆ ಅಧಿಕಾರಿಗಳು ಕಹಿ ಸುದ್ದಿ ನೀಡಿದ್ದಾರೆ. ನರಸಾಪುರ ಮತ್ತು ಅರಸೀಕೆರೆ ನಡುವೆ ಸಂಚರಿಸಬೇಕಿದ್ದ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಪ್ರಯಾಣಿಕರ ಕೊರತೆಯಿಂದಾಗಿ ರದ್ದುಗೊಳಿಸಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ತಿಳಿಸಿದೆ.
* ನರಸಾಪುರ - ಅರಸೀಕೆರೆ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 07201) ಜುಲೈ 13 ರಿಂದ ಆಗಸ್ಟ್ 31, 2025 ರವರೆಗೆ ಪ್ರತಿ ಭಾನುವಾರ ಸಂಚರಿಸಬೇಕಿತ್ತು. ಆದರೆ, ಇದನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

* ಅರಸೀಕೆರೆ - ನರಸಾಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 07202) ಜುಲೈ 14 ರಿಂದ ಸೆಪ್ಟೆಂಬರ್ 01, 2025 ತನಕ ಪ್ರತಿ ಸೋಮವಾರ ಸಂಚರಿಸಬೇಕಿತ್ತು. ಈ ರೈಲನ್ನೂ ಸಹ ಪ್ರಯಾಣಿಕರ ಕೊರತೆಯಿಂದಾಗಿ ರದ್ದುಗೊಳಿಸಲಾಗಿದೆ ಎಂದು ಮಂಗಳವಾರ ರೈಲ್ವೆ ವಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸೇವೆ ವಿಸ್ತರಣೆ
ರೈಲ್ವೆ ಪ್ರಯಾಣಿಕರಿಗೆ ಖುಷಿ ವಿಷಯ ಏನೆಂದರೆ, ಬೆಂಗಳೂರಿನ ಯಶವಂತಪುರ - ಸಂತ್ರಾಗಾಚಿ- ಯಶವಂತಪುರ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸೇವಾ ಅವಧಿ ವಿಸ್ತರಣೆ ಮಾಡಲಾಗಿದೆ. ಈ ಸಂಖ್ಯೆಯ 02863/02864 ರೈಲುಗಳ ಸೇವೆ ಕೊನೆಗೊಳ್ಳದೆ ಮುಂದಿನ ಆದೇಶದವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಆಗ್ನೆಯ ರೈಲ್ವೆಯು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
* ರೈಲು ಸಂಖ್ಯೆ 02863 ಸಂತ್ರಾಗಾಚಿ - ಯಶವಂತಪುರ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ಜೂನ್ 26 ರವರೆಗೆ ಮಾತ್ರವೇ ಕಾರ್ಯಾಚರಣೆ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿತ್ತು. ಇದೀಗ ಜುಲೈ 10 ರಿಂದ ಆಗಸ್ಟ್ 28, 2025 ರವರೆಗೆ ಪ್ರತಿ ಗುರುವಾರ ಸಂಚರಿಸಲಿದೆ.
* ರೈಲು ಸಂಖ್ಯೆ 02864 ಯಶವಂತಪುರ - ಸಂತ್ರಾಗಾಚಿ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ಜೂನ್ 28 ರವರೆಗೆ ಸಂಚಾರ ಮಾಡಿ ಸೇವೆ ಪೂರ್ಣಗೊಳಿಸಿತ್ತು. ರೈಲ್ವೆ ಪ್ರಯಾಣಿಕರ ಅಗತ್ಯತೆ ನೋಡಿಕೊಂಡು ಈ ರೈಲನ್ನು ಇದೇ ಜುಲೈ 12 ರಿಂದ ಆಗಸ್ಟ್ 30, 2025 ರವರೆಗೆ ಪ್ರತಿ ಶನಿವಾರ ಸಂಚರಿಸುವಂತೆ ಸೇವೆ ವಿಸ್ತರಿಸಲಾಗಿದೆ.
ಈ ರೈಲುಗಳಲ್ಲಿ ಈಗಾಗಲೇ ಅಸ್ತಿತ್ವದಲ್ಲಿದ್ದ ವೇಳಾಪಟ್ಟಿ, ನಿಲುಗಡೆ ನಿಲ್ದಾಣಗಳು ಮತ್ತು ಯಾವೆಲ್ಲ ವರ್ಗದ ಬೋಗಿ ಸಂಯೋಜನೆ ಇತ್ತು. ಅದೇ ರೀತಿಯಲ್ಲೇ ಸೇವೆ ಸಿಗಲಿದ್ದು, ಯಾವುದೇ ಬದಲಾವಣೆ ಇಲ್ಲ ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications