ರಾಜ್ಯದ ಮುಂದಿನ ಸಿಎಂ ಇವರೇ.. ಸ್ವಾಮೀಜಿ ಸ್ಫೋಟಕ ಭವಿಷ್ಯ!
ಬೆಂಗಳೂರು, ಆಗಸ್ಟ್ 23: ರಾಜ್ಯದಲ್ಲಿ ಸಿಎಂ ಬದಲಾವಣೆಯ ವಿಚಾರ ಜೋರಾಗಿರುವ ನಡುವೆ ಬೆನ್ನಲ್ಲೇ ಮುಂದಿನ ಸಿಎಂ ಯಾರು ಎನ್ನುವ ವಿಚಾರ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗೋನಾಲ ಗ್ರಾಮದ ಗಡೇ ದುರ್ಗಾದೇವಿ ದೇವಸ್ಥಾನದ ಅರ್ಚಕ ಮಹಾದೇವಪ್ಪ ಪೂಜಾರಿ ಭವಿಷ್ಯ ನುಡಿದಿದ್ದು, ಡಿ.ಕೆ.ಶಿವಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ ಎನ್ನುವ ಮೂಲಕ ಸಂಚಲನ ಮೂಡಿಸಿದ್ದಾರೆ.
ಅಲ್ಲದೆ, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ದೇಶದಲ್ಲಿ ಪಿಎಂ ನರೇಂದ್ರ ಮೋದಿ ಅವರು ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಮಹಾದೇವಪ್ಪ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಗಡೇ ದುರ್ಗಾದೇವಿ ಅಮ್ಮ ನನ್ನ ಕನಸಿನಲ್ಲಿ ಬಂದು ಒಂಬತ್ತು ಮಂದಿ ಸಿಎಂ ಸ್ಥಾನದ ಆಕಾಂಕ್ಷಿಗಳಿದ್ದಾರೆ ಎಂದು ಹೇಳಿದ್ದಳು. ಇಬ್ಬರಿಗೆ ಸಿಎಂ ಸ್ಥಾನ ನೀಡಲು ತಾಯಿ ಪ್ರೇರಣೆ ನೀಡಿದ್ದು, ನಾನು ಡಿ.ಕೆ.ಶಿವಕುಮಾರ್ ಅವರಿಗೆ ಹೂವಿನ ಹಾರ ಹಾಕುವಂತೆ ಕೇಳಿದ್ದೆ. ಆದರೆ, ಸಿಎಂ ಸಿದ್ದರಾಮಯ್ಯ ಅವರಿಗೆ ಹಾರ ಹಾಕಿದ್ದಳು. ಅದರಂತೆ ಮೊದಲನೇ ಅವಧಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ಇದೀಗ ಎರಡನೇ ಅವಧಿಗೆ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗುವ ಕಾಲ ಬಂದಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಡಿ.ಕೆ.ಶಿವಕುಮಾರ್ ಅವರು ಗಡೇ ದುರ್ಗಾದೇವಿಯ ಭಕ್ತರಾಗಿದ್ದು, ಈ ಹಿಂದೆ ವಿವಿಧ ಪ್ರಕರಣಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ದುರ್ಗಾದೇವಿ ಜಾತ್ರೆಗೆ ಆಗಮಿಸಿ ದೇವರ ದರ್ಶನ ಪಡೆದಿದ್ದರು. ಆಗ ದೇವಿಗೆ ಪತ್ರ ಬರೆದು ತನ್ನನ್ನು ಸಂಕಷ್ಟಗಳಿಂದ ಪಾರು ಮಾಡುವಂತೆ ಹಾಗು ರಾಜಕಾರಣದಲ್ಲಿ ಉನ್ನತ ಸ್ಥಾನ ಅಲಂಕರಿಸಲು ಕರುಣಿಸುವಂತೆ ಪ್ರಾರ್ಥಿಸಿದ್ದರು. ದೇವಿಯ ಕೃಪೆಯಿಂದಲೇ ಡಿ.ಕೆ.ಶಿವಕುಮಾರ್ ಇಂದು ಈ ಸ್ಥಾನಕ್ಕೆ ತಲುಪಿದ್ದಾರೆ ಎನ್ನುವ ಮಾತು ಅವರ ಬೆಂಬಲಿಗರಿಂದ ಆಗಾಗ ಕೇಳಿಬರುತ್ತದೆ.
ಅರ್ಚಕ ಮಹದೇವಪ್ಪ ಪೂಜಾರಿ ಅವರು ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದರು. ಅದರಂತೆಯೇ ಕಾಂಗ್ರೆಸ್ ಸರ್ಕಾರ ಕಳೆದ ವಿಧಾನಸಭೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೇರಿತ್ತು. ಸದ್ಯ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣವು ಸಿಎಂ ಸಿದ್ದರಾಮಯ್ಯ ಅವರಿಗೆ ಸುರುಳಿಯಂತೆ ಸುತ್ತಿಕೊಂಡಿದ್ದು, ಈ ಬಗ್ಗೆ ಸಿದ್ದರಾಮಯ್ಯ ವಿರುದ್ಧ ಕ್ರಮಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್ ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಕೂಗು ವಿರೋಧ ಪಕ್ಷಗಳಿಂದ ಎದ್ದಿದ್ದು, ಈ ನಡುವೆ ಡಿ.ಕೆ.ಶಿವಕುಮಾರ್ ಮುಂದಿನ ಸಿಎಂ ಆಗಲಿದ್ದಾರೆ ಎನ್ನುವ ವಿಚಾರ ರಾಜಕೀಯ ವಲಯದಲ್ಲಿ ಸದ್ದು ಮಾಡತೊಡಗಿದೆ.

ಸತೀಶ್ ಜಾರಕಿಹೊಳಿ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಸಿಎಂ ಸ್ಥಾನಕ್ಕೆ ಪೈಪೋಟಿ ಇದೆ. ಜಾರಕಿಹೊಳಿ ಸಹೋದರರಿಂದಲೇ ಸರ್ಕಾರ ಬೀಳುತ್ತದೆ ಎಂದು ಪೂಜಾರಿ ಭವಿಷ್ಯವಾಣಿ ನುಡಿದಿದ್ದು, ಕೇಂದ್ರದಲ್ಲಿ ಮೋದಿ ಸರ್ಕಾರಕ್ಕೂ ಉಳಿಗಾಲವಿಲ್ಲ ಎಂದು ಹೇಳಿದ್ದಾರೆ. ಈಗಾಗಲೇ ಪೂಜಾರಿ ನುಡಿದಿರುವ ಭವಿಷ್ಯಗಳು ನಿಜವಾಗಿದ್ದು, ಅದರಂತೆ ಡಿ.ಕೆ.ಶಿವಕುಮಾರ್ ಸಿಎಂ ಕುರ್ಚಿ ಅಲಂಕರಿಸುತ್ತಾರೆ ಎಂದೂ ಹೇಳಲಾಗುತ್ತಿದೆ.












Click it and Unblock the Notifications