Data Park: ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಸುಸ್ಥಿರ ಡೇಟಾ ಪಾರ್ಕ್ ಸ್ಥಾಪನೆ
ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ ಸುಸ್ಥಿರ ಡೇಟಾ ಕೇಂದ್ರಗಳು (ಸಸ್ಟೇನಬಲ್ ಡೇಟಾ ಸೆಂಟರ್ಸ್) ಅಗತ್ಯವಿದ್ದು ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಡೇಟಾ ಪಾರ್ಕ್ ಸ್ಥಾಪಿಸಲು ಗುರುವಾರ ನಡೆದ ವಿವಿಧ ಇಲಾಖೆಗಳ ಸಚಿವರು ಚರ್ಚಿಸಿ ತೀರ್ಮಾನಿಸಿದ್ದಾರೆ. ಈ ಮೂಲಕ ಇಂಟರ್‍ನೆಟ್ ಯುಗದಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಬೆಂಗಳೂರಿನಲ್ಲಿ ಶಕ್ತಿ ಭವನದಲ್ಲಿ ಗುರುವಾರ ನಡೆದ ಈ ಪ್ರಾಥಮಿಕ ಸಭೆಯಲ್ಲಿ ಇಂಧನ ಸಚಿವ ಕೆ ಜೆ ಜಾರ್ಜ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮತ್ತು ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಡೇಟಾ ಪಾರ್ಕ್ ಕುರಿತು ಮಹತ್ವದ ವಿಚಾರಗಳನ್ನು ಚರ್ಚಿಸಿದರು.

500 ಎಂವಿ ಡೇಟಾ ಕೇಂದ್ರ
ಬೆಂಗಳೂರಿನಲ್ಲಿ ಹೊಸಕೋಟೆಯ ಸಮೀಪ 500 ಮೆಗಾವ್ಯಾಟ್ ಸಾಮರ್ಥ್ಯದ ಸುಸ್ಥಿರ ಡೇಟಾ ಕೇಂದ್ರ ಪಾರ್ಕ್ ಸ್ಥಾಪಿಸಲಾಗುವುದು. ಪಾವಗಡದಿಂದ ಪೂರೈಕೆಯಾಗುವ ಸೌರ ವಿದ್ಯುತ್ ನೇರವಾಗಿ ಇಲ್ಲಿಗೆ ತಲುಪುತ್ತದೆ. ಜತೆಗೆ ಬೆಂಗಳೂರು ಜಲ ಮಂಡಳಿಯು ಎರಡು ಹಂತಗಳಲ್ಲಿ ಸಂಸ್ಕರಿಸಿದ 60 ಎಂ.ಎಲ್.ಡಿ ನೀರು ಪೂರೈಕೆಗೆ ತೊಂದರೆ ಇಲ್ಲ ಎಂದು ತಿಳಿಸಿದೆ. ಸ್ವತಃ ಉದ್ಯಮಗಳೇ ಈ ನೀರಿನ ಮೂರನೇ ಹಂತದ ಶುದ್ಧೀಕರಣ ಮಾಡಿಕೊಳ್ಳುತ್ತವೆ. ಈ ಮೂರೂ ಪಾರ್ಕುಗಳ ಒಟ್ಟು ಸಾಮರ್ಥ್ಯ 1,000 ಮೆಗಾವ್ಯಾಟ್ ಇರಲಿದೆ ಎಂದು ಸಚಿವರು ವಿವರಿಸಿದರು.
ಮಂಗಳೂರಿನಲ್ಲಿ ಕೂಡ ಡೇಟಾ ಪಾರ್ಕ್ ಸ್ಥಾಪನೆಗೆ ಭೂಮಿಯು ಲಭ್ಯವಿದೆ. ಅಲ್ಲಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಕೆಐಎಡಿಬಿಗೆ ಸೇರಿದ 350 ಎಕರೆ ಇದೆ. ಮೈಸೂರಿನಲ್ಲಿ ಈ ಉದ್ದೇಶಕ್ಕೆ ಸೂಕ್ತ ಜಾಗ ಗುರುತಿಸಲಾಗುವುದು ಎಂದು ಹೇಳಿದರು.
ಯಾವುದೇ ಕಂಪನಿಗಳು, ಹೂಡಿಕೆದಾರರು ಈ ಪಾರ್ಕ್ ಗಳಲ್ಲಿ ಡಾಟಾ ಸೆಂಟರ್ ಸ್ಥಾಪನೆಗೆ ಹೂಡಿಕೆ ಮಾಡಿದರೆ ಅವರಿಗೆ ವಿದ್ಯುತ್ ಮತ್ತು ನೀರು ನೀಡಲಾಗುವುದು. ಇದಕ್ಕೆ ಪೂರಕವಾದ ಸಿದ್ಧತೆ ಮಾಡಿಕೊಳ್ಳಲು ಮೂವರು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಸದ್ಯದಲ್ಲೇ ಹೂಡಿಕೆದಾರರ ಜತೆಗೂ ಸಭೆ ಮಾಡಲು ಸಚಿವರು ಸಲಹೆ ನೀಡಿದರು.
ಉನ್ನತ ಅಧಿಕಾರಿಗಳ ತಂಡ ರಚನೆ
ಮುಂದಿನ ಹಂತದಲ್ಲಿ ಜಲ ಸಂಪನ್ಮೂಲ ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೂ ಇರುವ ಸಚಿವರ ತಂಡವನ್ನೂ ಮತ್ತು ಉನ್ನತ ಅಧಿಕಾರಿಗಳ ತಂಡವನ್ನೂ ಈ ಸಂಬಂಧ ರಚಿಸಲಾಗುವುದು. ಒಟ್ಟಿನಲ್ಲಿ ತ್ವರಿತವಾಗಿ ಈ ಡೇಟಾ ಪಾರ್ಕುಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು. ಸಭೆಯಲ್ಲಿ ಮೂರು ಇಲಾಖೆಗಳ ಆಯುಕ್ತರು, ಅಧಕಾರಿಗಳು ಪಾಲ್ಗೊಂಡಿದ್ದರು.
KSDL ವಹಿವಾಟಿನಲ್ಲಿ ಸಾಧನೆ: ಸಚಿವರಿಗೆ ಅಭಿನಂದನೆ
ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು (ಕೆ.ಎಸ್.ಡಿ.ಎಲ್) 2025-26ನೇ ಸಾಲಿನಲ್ಲಿ ಇದೇ ಮೊಟ್ಟಮೊದಲ ಬಾರಿಗೆ 2,016 ಕೋಟಿ ರೂ. ವಹಿವಾಟು ನಡೆಸಿದೆ. 507 ಕೋಟಿ ರೂ. ನಿವ್ವಳ ಲಾಭ ದಾಖಲಿದೆ. ಇದೊಂದು ಅಭೂತಪೂರ್ವ ಸಾಧನೆಯಾಗಿದ್ದು, ಇದರ ಶ್ರೇಯಸ್ಸು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರ ದೂರಗಾಮಿ ಚಿಂತನೆಗಳಿಗೆ ಸಲ್ಲುತ್ತದೆ. ಇದಕ್ಕಾಗಿ ಅವರು ಅಭಿನಂದನಾರ್ಹರು ಎಂದು ಸರ್ಕಾರಿ ಸಾಬೂನು ಕಾರ್ಖಾನೆ ಕಾರ್ಮಿಕರ ಸಂಘವು ಹೇಳಿದೆ.
ಸಂಘದ ಅಧ್ಯಕ್ಷ ಮೈಕೇಲ್ ಫರ್ನಾಂಡಿಸ್ ನೇತೃತ್ವದಲ್ಲಿ ಸದಸ್ಯರು ಗುರುವಾರ ಸಚಿವ ಎಂಬಿ ಪಾಟೀಲ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಅಭಿನಂದಿಸಿದರು.













Click it and Unblock the Notifications