BJP Mlas Suspended: ಪೇಪರ್ ಹರಿದು ಹಾಕಿದ ಚಿಕ್ಕ ಘಟನೆಗೆ ಅಮಾನತಿನ ಶಿಕ್ಷೆ ಸರಿಯಲ್ಲ: ವಿಶ್ವೇಶ್ವರ ಹೆಗಡೆ ಕಾಗೇರಿ
ಬೆಂಗಳೂರು, ಆಗಸ್ಟ್ 03: ಕಾಂಗ್ರೆಸ್ ಪಕ್ಷ 50-60 ವರ್ಷ ಆಡಳಿತ ಮಾಡಿದೆ. ಪೇಪರ್ ಹರಿದು ಹಾಕಿದ ಚಿಕ್ಕ ಘಟನೆಗೆ ಅಮಾನತಿನ ಶಿಕ್ಷೆ ಕೊಡುವುದು ಸರಿಯಲ್ಲ. ಇದು ವ್ಯವಸ್ಥೆಗೆ ಹೊಡೆತ ನೀಡುತ್ತದೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಬೆಂಗಳೂರಿನ 'ಸಿಟಿಜನ್ಸ್ ಫಾರ್ ಡೆಮಾಕ್ರೆಸಿ' ವತಿಯಿಂದ ನಗರದ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ಶಾಸಕರ ಅಮಾನತು ಒಂದು ಚರ್ಚೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿಕ್ಕ ವಿಷಯವನ್ನೇ ದೊಡ್ಡ ವಿಷಯ ಮಾಡಿ ಸ್ಪೀಕರ್ ಮತ್ತು ಸರಕಾರ ಶಾಸಕರನ್ನು ಅಮಾನತು ಮಾಡಿದ್ದು ಅದು ಅಕ್ಷಮ್ಯ. ಇದರಲ್ಲಿ ಮುಖ್ಯಮಂತ್ರಿ, ಸಂಸದೀಯ ವ್ಯವಹಾರ ಸಚಿವರ ಪ್ರಮುಖ ಪಾತ್ರವೂ ಇದೆ ಎಂದರು. ಸದನದ ರಾಜಕೀಯ ದುರ್ಬಳಕೆಗೆ ಇದು ಸ್ಪಷ್ಟ ಉದಾಹರಣೆ ಎಂದು ತಿಳಿಸಿದರು.

ಕರ್ನಾಟಕದ ಸದನದಲ್ಲಿ ಬಹಳ ಕಡಿಮೆ ಬಾರಿ ಅಮಾನತುಗಳಾಗಿವೆ. ಮೊನ್ನೆ ದುರ್ಬೀನು ಹಾಕಿಕೊಂಡು ಹುಡುಕಿದರೆ ಸಿಗುವಷ್ಟು ಚಿಕ್ಕ ವಿಷಯಕ್ಕೆ 10 ಬಿಜೆಪಿ ಶಾಸಕರ ಅಮಾನತು ಘಟನೆ ನಡೆದಿದೆ. ಇದು ಅಕ್ಷಮ್ಯ ಕ್ರಮ. ಊಟಕ್ಕೆ ವಿರಾಮ ಕೊಟ್ಟಿದ್ದರೆ ಘಟನೆಯೇ ನಡೆಯುತ್ತಿರಲಿಲ್ಲ. ಯೋಗೀಶ್ ಭಟ್ ಅವರು ಡೆಪ್ಯುಟಿ ಸ್ಪೀಕರ್ ಇದ್ದಾಗ ಪೇಪರ್ ವೆಯ್ಟನ್ನೇ ಅವರತ್ತ ಒಗೆದಿದ್ದರು. ಫೈಲುಗಳನ್ನೇ ಕಿತ್ತೆಸೆದಿದ್ದರು. ಆಗೆಲ್ಲ ಸಸ್ಪೆಂಡ್ ಮಾಡಿದ್ದರೇ? ಇದು ಕ್ಷಮಾರ್ಹವಲ್ಲ ಎಂದು ತಿಳಿಸಿದರು.
ಹಿರಿಯ ಸಚಿವರು ವಿಪಕ್ಷದವರಿಗೂ ಮಾತಿನ ಅವಕಾಶ ಕೊಡಬೇಕೆಂದು ತಿಳಿಸಬೇಕಿತ್ತು. ಉಗುರು ತುದಿಯಲ್ಲಿ ಹೋಗುವುದನ್ನು ಖಡ್ಗ ತೆಗೆದುಕೊಂಡು ಕತ್ತರಿಸುವುದು ಶೋಭೆ ತರುವ ವಿಚಾರವಲ್ಲ ಎಂದು ಹೇಳಿದರು.
ಪಶ್ಚಿಮ ಬಂಗಾಲ, ಕೇರಳದಲ್ಲಿ ರಾಜ್ಯಪಾಲರನ್ನು ಸಹಿಸದ, ಅವರನ್ನು ಮಾತನಾಡಲು ಬಿಡದ ಸ್ಥಿತಿ ಬಂದಿದೆ. ಲೋಕಸಭೆಯಲ್ಲಿ ಏನಾಗುತ್ತಿದೆ? ವಂಶಪಾರಂಪರ್ಯ ಆಡಳಿತದ ಮನಸ್ಥಿತಿಯನ್ನು ಒಪ್ಪಿಕೊಂಡ ಜನರು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬಲಪಡಿಸಲು ಅಸಾಧ್ಯ. ಕರ್ನಾಟಕದಲ್ಲಿ ಒಳ್ಳೊಳ್ಳೆಯ ಮುಖ್ಯಮಂತ್ರಿ, ಸ್ಪೀಕರ್, ಪ್ರತಿಪಕ್ಷಗಳ ನಾಯಕರು ಕೆಲಸ ಮಾಡಿದ್ದಾರೆ. ಉತ್ತಮ ಕೊಡುಗೆಯನ್ನೂ ಕೊಟ್ಟಿದ್ದಾರೆ.
10 ಜನ ಬಿಜೆಪಿ ಶಾಸಕರನ್ನು ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಅಮಾನತು ಮಾಡಿದ್ದರು. ಸದನದ ಒಳಗೆ ಅಂಗಿ ಬಿಚ್ಚಿ ಅದನ್ನು ತೂರಾಡಿಕೊಂಡು ಓಡಾಡಿದರೆ ನಮ್ಮ ಸದನದ ಘನತೆ ಹೆಚ್ಚಲು ಸಾಧ್ಯವಿದೆಯೇ? ಅಂಥ ಸಂದರ್ಭದಲ್ಲಿ ನಾನೂ ಅವರನ್ನು ಸಸ್ಪೆಂಡ್ ಮಾಡಿದ್ದೇನೆ. ಮತದಾನ ಮಾಡುವ ನಾವೆಲ್ಲರೂ ವ್ಯವಸ್ಥೆಯನ್ನು ಸರಿದಾರಿಗೆ ತರುವ ಜವಾಬ್ದಾರಿ ಹೊಂದಿದ್ದೇವೆ. ಸಂವಿಧಾನದ ಆಶಯದಂತೆ ಸಿಟಿಜನ್ಸ್ ಫಾರ್ ಡೆಮಾಕ್ರೆಸಿ ಸಂಸ್ಥೆ ಈ ಮುಕ್ತ ಚರ್ಚೆ ಏರ್ಪಡಿಸಿದೆ ಎಂದು ಅವರು ತಿಳಿಸಿದರು.
ಸಮಾಜದಲ್ಲಿ ಸಮಾನತೆಗೆ ಸಂವಿಧಾನವೇ ಕಾರಣ. ಸಂವಿಧಾನಕ್ಕೆ ಗೌರವ ನೀಡಬೇಕು. ಅದಕ್ಕೆ ಕಾರಣಕರ್ತರಾದ ಡಾ. ಅಂಬೇಡ್ಕರರನ್ನು ನಾವೆಲ್ಲ ಗೌರವಿಸಿ ಅಭಿನಂದಿಸಬೇಕು ಎಂದ ಅವರು, ಅವರ ಕೊಡುಗೆ ಅದ್ಭುತ ಎಂದರು. ಇವತ್ತು ಮೋದಿಯವರು ಜಗತ್ತಿನ ನಾಯಕರಾಗಿದ್ದಾರೆ. ಅದಕ್ಕೆ ಈ ಸಂವಿಧಾನದ ಕೊಡುಗೆ ಅನನ್ಯ ಎಂದರು.
ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ, ಪತ್ರಿಕಾರಂಗದ ಸದುಪಯೋಗ ಆಗಿದೆ. ಆದರೆ, ನ್ಯೂನತೆಗಳು, ದೋಷಗಳು ಬೆಳೆಯುತ್ತಿವೆ. ಅವನ್ನು ಸರಿಪಡಿಸುವ ಜವಾಬ್ದಾರಿ ನಮ್ಮದು. ಚುನಾವಣೆ ಸುಧಾರಣೆ ವ್ಯವಸ್ಥೆಗಾಗಿ ನಾನು ಸ್ಪೀಕರ್ ಆಗಿ ಶ್ರಮಿಸಿದ್ದೆ ಎಂದು ತಿಳಿಸಿದರು. ಸಮಾಜದಲ್ಲಿ ಜಾಗೃತ ಸ್ಥಿತಿಯಿಂದ ವಿಷವರ್ತುಲದಿಂದ ಹೊರಬರಲು ಸಾಧ್ಯವಿದೆ. ಯುವಕರು ನನ್ನ ಮತ ಮಾರಾಟಕ್ಕಿಲ್ಲ ಎಂಬ ಮಾತನ್ನು ನಂಬಿಕೆಯಿಂದ ಪ್ರತಿಜ್ಞೆಯಾಗಿ ಸ್ವೀಕರಿಸಿ ಅನುಷ್ಠಾನಕ್ಕೆ ತರಬೇಕೆಂದು ತಿಳಿಸಿದ್ದೆ ಎಂದರು.












Click it and Unblock the Notifications