ಸೂರ್ಯಗ್ರಹಣ 2023ರ ಪ್ರಭಾವ ಬೊಮ್ಮಾಯಿ, ಡಿಕೆಶಿ, ಎಚ್‌ಡಿಕೆ, ಸಿದ್ದರಾಮಯ್ಯ ಬೀರುತ್ತಾ? ಇಲ್ಲಿ ತಿಳಿಯಿರಿ
ಸೂರ್ಯಗ್ರಹಣ 2023ರ ಪ್ರಭಾವ: ವೈಶಾಖ ಅಮವಾಸ್ಯೆಯ ಸಮಯದಲ್ಲಿ ಸಂಭವಿಸಿದ 2023ನೇ ವರ್ಷದ ಮೊದಲ ಸೂರ್ಯಗ್ರಹಣ ಇಂದು ಪೂರ್ಣಗೊಂಡಿದೆ. ಸೂರ್ಯಗ್ರಹಣದ ವೇಳೆ ಭೂಮಿ ಮತ್ತು ಸೂರ್ಯನ ನಡುವೆ ಚಂದ್ರನು ಹಾದುಹೋಗುತ್ತಾನೆ. ಇದರಿಂದಾಗಿ ಸ್ವಲ್ಪ ಸಮಯ ಭೂಮಿಯಿಂದ ಸೂರ್ಯನ ಬೆಳಕು ಸಂಪೂರ್ಣವಾಗಿ ಅಥವಾ ಭಾಗಶಃ ಮರೆಯಾಗುತ್ತದೆ. ಸೂರ್ಯ ಗ್ರಹಣ ಆಕಾಶದಲ್ಲಿ ನಡೆಯುವ ಒಂದು ಅದ್ಭುತ ಘಟನೆಯಾಗಿದ್ದು, ದ್ವಾದಶಿ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ತಯಾರಿಯಲ್ಲಿರುವ ಜನಪ್ರಿಯ ನಾಯಕರ ಮೇಲೂ ಈ ಸೂರ್ಯಗ್ರಹಣ ಪ್ರಭಾವವನ್ನು ಬೀರುತ್ತದೆ. ಹಾಗಾದರೆ ಜ್ಯೋತಿಷಿಗಳ ಪ್ರಕಾರ ರಾಜ್ಯದಲ್ಲಿರುವ ಪ್ರಮುಖ ಮೂರು ಪಕ್ಷದ ನಾಯಕರ ಮೇಲೆ ವರ್ಷದ ಮೊದಲ ಸೂರ್ಯ ಗ್ರಹಣದ ಪ್ರಭಾವ ಯಾವ ರೀತಿ ಇದೆ ಎಂದು ತಿಳಿದುಕೊಳ್ಳೋಣ.

ಬಸವರಾಜ ಬೊಮ್ಮಾಯಿ ಮೇಲೆ ಸೂರ್ಯಗ್ರಹಣದ ಪ್ರಭಾವ
ಮೊದಲನೆಯದಾಗಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ವರ್ಷದ ಮೊದಲ ಹಾಗೂ ವೈಶಾಖ ಅಮವಾಸ್ಯೆಯಂದು ಸಂಭವಿಸಿದ ಸೂರ್ಯಗ್ರಹಣ ಯಾವ ರೀತಿ ಪರಿಣಾಮ ಬೀರಲಿದೆ ಎಂದು ನೋಡೋಣ. ಬಸವರಾಜ ಬೊಮ್ಮಾಯಿ ಅವರ ರಾಶಿ ಮೇಷ. ಮೇಷ ರಾಶಿಯ ಮೂರನೇ ಮನೆಯಲ್ಲಿ ಸೂರ್ಯಗ್ರಹಣ ಸಂಭವಿಸಿದೆ. ಈ ಮನೆಯಲ್ಲಿ ಸೂರ್ಯ, ರಾಹು, ಚಂದ್ರ, ಬುಧ ಗ್ರಹಗಳು ನೆಲೆಸಿವೆ. ಜೊತೆಗೆ ರಾಹು ಹಿಡಿತದಲ್ಲಿ ಸೂರ್ಯ ಮತ್ತು ಚಂದ್ರರಿದ್ದಾರೆ.
ಈ ಸಮಯ ಬಸವರಾಜ ಬೊಮ್ಮಾಯಿ ಅವರಿಗೆ ಹೆಚ್ಚು ಸೂಕ್ತವಾಗಿರುವುದಿಲ್ಲ. ಹೀಗಾಗಿ ಬಸವರಾಜ ಬೊಮ್ಮಾಯಿ ಅವರು ಈ ಸಂದರ್ಭದಲ್ಲಿ ಯಾವುದೇ ಗಂಭೀರ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಅವರು ಈ ಸಮಯದಲ್ಲಿ ಹಲವು ಆರೋಪಗಳಿಗೆ ಗುರಿಯಾಗಬಹುದು. ಯಾವುದೇ ವಿಷಯಗಳನ್ನ ನಿರ್ಧರಿಸುವಾಗ ಹೆಚ್ಚು ಅಳೆದು ತೂಗಿ ಮುನ್ನಡೆಯಬೇಕಾಗುತ್ತದೆ.

ಸೂರ್ಯಗ್ರಹಣದ ಪರಿಣಾಮವನ್ನು ತಪ್ಪಿಸಲು ಜ್ಯೋತಿಷ್ಯ ಸಾಸ್ತ್ರದಲ್ಲಿ ಪರಿಹಾರವೂ ಇದೆ. ಸೂರ್ಯಗ್ರಹಣದಿಂದಾಗುವ ಸಮಸ್ಯೆಗಳನ್ನು ತಪ್ಪಿಸಲು ಬಸವರಾಜ ಬೊಮ್ಮಾಯಿ ಅವರು 'ಪರಿಚಯ ಆದಿತ್ಯ ಹೃದಯ' ಮಂತ್ರವನ್ನು ಉಚ್ಚರಿಸಬೇಕು. ಇದರಿಂದ ಸೂರ್ಯಗ್ರಹಣದ ಪ್ರಭಾವದಿಂದು ಮುಕ್ತಿಯನ್ನು ಪಡೆಯಬಹುದು.
ಡಿಕೆ ಶಿವಕುಮಾರ್ ಮೇಲೆ ಸೂರ್ಯಗ್ರಹಣದ ಪ್ರಭಾವ
ಕನಕಪುರದ ಬಂಡೆ ಎಂದೇ ಹೆಸರಾಗಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಮೇಲೆ ವರ್ಷದ ಮೊದಲ ಸೂರ್ಯಗ್ರಹಣ ಯಾವ ರೀತಿ ಪರಿಣಾಮ ಬೀರಲಿದೆ ತಿಳಿಯೋಣ. ಡಿಕೆ ಶಿವಕುಮಾರ್ ಅವರ ರಾಶಿ ವೃಷಭ. ವೃಷಭ ರಾಶಿಯ 12ನೇ ಮನೆಯಲ್ಲಿ ಸೂರ್ಯಗ್ರಹಣ ಸಂಭವಿಸಿದೆ. ವೃಷಭ ರಾಶಿಯ 10ನೇ ಮನೆಯಲ್ಲಿ ಶನಿ ಇದೆ.
ಇದರಿಂದ ಸಣ್ಣಪುಟ್ಟ ಸಮಸ್ಯೆಗಳು ಡಿಕೆ ಶಿವಕುಮಾರ್ ಅವರಿಗೆ ಎದುರಾಗಬಹುದು. ಅಂದರೆ ಕಾನೂನು ಪ್ರಕರಣಗಳಲ್ಲಿ ಸಿಲುಕಿಕೊಳ್ಳಬಹುದು. ಯಾವುದೇ ವಿವಾದಗಳಲ್ಲಿ ಡಿಕೆ ಶಿವಕುಮಾರ್ ಸಿಕ್ಕಿಕೊಳ್ಳಬಹುದು. ಅಲ್ಲದೆ ಚುನಾವಣೆಯಲ್ಲಿ ನಾನಾ ಸಮಸ್ಯೆಗಳನ್ನು ಡಿಕೆ ಶಿವಕುಮಾರ್ ಎದುರಿಸಲಿದ್ದಾರೆ. ಆರೋಪಗಳಿಗೆ ಗುರಿಯಾಗಲಿದ್ದಾರೆ. ಜೊತೆಗೆ ಹಲವಾರು ವಿವಾದಗಳಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

ಗುರು ವೃಷಭ ರಾಶಿಯ ಲಾಭ ಸ್ಥಾನದಲ್ಲಿದ್ದಾನೆ. ಮುಂಬರುವ ಚುನಾವಣೆಯಲ್ಲಿ ಇದು ನಷ್ಟವನ್ನು ತರಲಿದೆ. ಇದರಿಂದ ಖರ್ಚು ಅಧಿಕವಾಗುತ್ತದೆ. ಜೊತೆಗೆ ಕೆಟ್ಟ ಹೆಸರು ಬರಬಹುದು. ಹೀಗಾಗಿ ಜಾಗರೂಕರಾಗಿರುವುದು ಒಳ್ಳೆಯದು. ಜೊತೆಗೆ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ.
ಸಿದ್ದರಾಮಯ್ಯ ಮೇಲೆ ಸೂರ್ಯಗ್ರಹಣದ ಪ್ರಭಾವ
ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ವರ್ಷದ ಮೊದಲ ಸೂರ್ಯಗ್ರಹಣ ಯಾವ ರೀತಿ ಪರಿಣಾಮ ಬೀರಲಿದೆ ತಿಳಿಯೋಣ. ಸಿದ್ದರಾಮಯ್ಯ ಅವರ ರಾಶಿ ಕನ್ಯಾ ರಾಶಿ. ಕನ್ಯಾ ರಾಶಿಯ ಮೂರನೇ ಮನೆಯಲ್ಲಿ ಸೂರ್ಯಗ್ರಹಣ ಸಂಭವಿಸಿದೆ.
ಈ ಮನೆಯಲ್ಲಿ ರಾಹು ಇದ್ದಾನೆ. ಇದು ಸಿದ್ದರಾಮಯ್ಯ ಅವರ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಹೀಗಾಗಿ ಪೋಸ್ಟಿಂಗ್ ವಿಚಾರದಲ್ಲಿ ಕೆಲ ಸಮಸ್ಯೆಗಳನ್ನು ಅವರು ಅನುಭವಿಸುತ್ತಾರೆ. ಜೊತೆಗೆ ಕನ್ಯಾ ರಾಶಿಯ ವಕ್ರ ಸ್ಥಾನದಲ್ಲಿ ಬುಧ ಹೋಗುತ್ತಿದೆ. ಹೀಗಾಗಿ ಚುನಾವಣೆಯಲ್ಲಿ ಸಿದ್ದರಾಮಯ್ಯ ಹಲವಾರು ತೊಂದರೆಗಳನ್ನು ಅನುಭವಿಸಲಿದ್ದಾರೆ.

ಮಾತ್ರವಲ್ಲದೆ ಧಿಡೀರ್ ಬದಲಾವಣೆಗಳು ಆಗಬಹುದು. ಅಥವಾ ಧಿಡೀರ್ ನಾಯಕ ಕೂಡ ಆಗಬಹುದು. ಶತ್ರುಗಳ ಕಾಟ, ಗಲಾಟೆ ನಡೆಯುತ್ತವೆ. ಜೊತೆಗೆ ಇವರೇ ತಪ್ಪು ಮಾಡುವ ಸಾಧ್ಯತೆಗಳು ಇರುತ್ತವೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.
ಹೆಚ್.ಡಿ ಕುಮಾರಸ್ವಾಮಿ ಸೂರ್ಯಗ್ರಹಣದ ಪ್ರಭಾವ
ಇನ್ನು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರ ಮೇಲೆ ವರ್ಷದ ಮೊದಲ ಸೂರ್ಯಗ್ರಹಣ ಯಾವ ರೀತಿ ಪರಿಣಾಮ ಬೀರಲಿದೆ ತಿಳಿಯೋಣ. ಹೆಚ್‌ಡಿ ಕುಮಾರಸ್ವಾಮಿ ಅವರ ರಾಶಿ ಮಿಥುನ. ಮಿಥುನ ರಾಶಿಯಲ್ಲಿ ಶನಿ ಮತ್ತು ಗುರು ಉತ್ತಮ ಸ್ಥಾನದಲ್ಲಿದೆ. ಶನಿಯ ಈ ಸ್ಥಾನ ಭಾಗ್ಯದ ಸ್ಥಾನವಾಗಿದೆ. ಇದು ಒಳ್ಳೆದು ಸ್ಥಾನ ಕೂಡ ಹೌದು. ವಿಶೇಷವಾಗಿ ರಾಜಕೀಯದಲ್ಲಿ ಕುಮಾರಸ್ವಾಮಿಯವರಿಗೆ ಶುಭವಾಗಲಿದೆ. ಯಾಕೆಂದರೆ ಇವರ ರಾಶಿಯ ಲಾಭದ ಸ್ಥಾನದಲ್ಲಿ ಗುರು ಇದ್ದಾನೆ.
ಸೂರ್ಯಗ್ರಹಣ ಲಾಭದ ಸ್ಥಾನದಲ್ಲಿ ಸಂಭವಿಸಿದೆ. ಇವರ 11ನೇ ಮನೆಯ ಲಾಭದ ಸ್ಥಾನದಲ್ಲಿ ನಾಲ್ಕು ಗ್ರಹಗಳು ಇದೆ. ಹೀಗಾಗಿ ಒತ್ತಮ ಯೋಗ ಸಿಗುವ ಸಾಧ್ಯತೆ ಇದೆ. ಗುರು ಮಿಥುನ ರಾಶಿಯ ಏಳನೇ ಮನೆಯನ್ನು ನೋಡುತ್ತಾನೆ. ಇದು ರಾಜಕೀಯಕ್ಕೆ ಉತ್ತಮ ಫಲವನ್ನು ನೀಡಲಿದೆ. ಹೀಗಾಗಿ ಕುಮಾರಸ್ವಾಮಿ ಅವರು ಈ ಬಾರಿ ಕಿಂಗ್ ಮೇಕರ್ ಆದರೂ ಆಶ್ಚರ್ಯವಿಲ್ಲ.

ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಏಪ್ರಿಲ್ 13 ರಂದು ಚುನಾವಣೆಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ. ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಇನ್ನು ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.












Click it and Unblock the Notifications