ಶಿಕ್ಷಕರ ಪರವಾಗಿ ಪ್ರಧಾನಿ ಮೋದಿ ಎದುರು ಮಹತ್ವದ ಬೇಡಿಕೆ ಇಟ್ಟ ಶಿಕ್ಷಣ ಸಚಿವ ಸುರೇಶ್ ಕುಮಾರ್!
ಬೆಂಗಳೂರು, ಜ. 29: ಶಿಕ್ಷಕರ ಪರವಾಗಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಕೇಂದ್ರ ಸರ್ಕಾರದ ಎದುರು ಮಹತ್ವದ ಬೇಡಿಕೆ ಇಟ್ಟಿದ್ದಾರೆ. ದೇಶಕ್ಕೆ ಮಾದರಿಯಾಗಿ ವಿದ್ಯಾಗಮ ಕಾರ್ಯಕ್ರಮ ಜಾರಿಗೆ ತರುವ ಮೂಲಕ ರಾಜ್ಯ ಶಿಕ್ಷಣ ಇಲಾಖೆ ಗಮನ ಸೆಳೆದಿತ್ತು. ಕೊರೊನಾ ವೈರಸ್‌ನಿಂದಾಗಿ ಇಡೀ ದೇಶದಲ್ಲಿ ಶಾಲಾ-ಕಾಲೇಜುಗಳು ಮುಚ್ಚಿದ್ದರೂ, ನಮ್ಮ ರಾಜ್ಯದಲ್ಲಿ ಮಾತ್ರ ಶೈಕ್ಷಣಿಕ ಚಟುವಟಿಕೆಗಳು ಸಂಪೂರ್ಣವಾಗಿ ಕುಂಠಿತವಾಗದಂತೆ ಸಚಿವ ಸುರೇಶ್ ಕುಮಾರ್ ಅವರು ನೋಡಿಕೊಂಡಿದ್ದರು.
ಜೊತೆಗೆ ದೇಶಕ್ಕೆ ಮಾದರಿಯಾಗಿ ದ್ವಿತೀಯ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸಿದ್ದರು. ಅದಕ್ಕೆಲ್ಲ ಶಿಕ್ಷಣ ಸಚಿವರಿಗೆ ಹೆಗಲು ಕೊಟ್ಟಿದ್ದು ಶಾಲಾ ಶಿಕ್ಷಕರು ಹಾಗೂ ಉಪನ್ಯಾಸಕರುಗಳು. ಹೀಗಾಗಿ ಶಾಲಾ ಶಿಕ್ಷಕರ ಕುರಿತು ಕೇಂದ್ರ ಸರ್ಕಾರ ಎದುರು ಸಚಿವ ಸುರೇಶ್ ಕುಮಾರ್ ಮಹತ್ವದ ಬೇಡಿಕೆ ಇಟ್ಟಿದ್ದಾರೆ. ಇದೇ ಹಿನ್ನೆಲೆಯಲ್ಲಿ ಪ್ರಧಾನಿ ಹಾಗೂ ಡಾ. ಹರ್ಷವರ್ಧನ್ ಅವರಿಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.

ಸಚಿವ ಸುರೇಶ್ ಕುಮಾರ್ ಬೇಡಿಕೆ
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗುಹಾ ಅವರಿಗೆ ಪ್ರಸ್ತಾವನೆ ಸಲ್ಲಿಸಿ ಶಿಕ್ಷಣ ಇಲಾಖೆಯ ನೌಕರರನ್ನೂ ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಲು ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ. ಶಾಲಾ ಶಿಕ್ಷಕರು ಕೋವಿಡ್ ವಾರಿಯರ್ಸ್ ಆಗಿ ಕಂಟೈನ್ಮೆಂಟ್ ವಲಯಗಳಲ್ಲಿ ಕೆಲಸ ಮಾಡುವ ಮೂಲಕ ಕೋವಿಡ್ ತಡೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ಶಿಕ್ಷಕರು ಮನೆಮನೆಗೆ ಭೇಟಿ ನೀಡಿ ಅಂಕಿ ಅಂಶ ಸಂಗ್ರಹಣೆ, ಸಾಮಾಜಿಕ ಅಂತರದ ಮಹತ್ವದ ತಿಳಿವಳಿಕೆ ಮೂಡಿಸಿದ್ದಾರೆ ಎಂದು ಸಚಿವ ಎಸ್. ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.

ಮಕ್ಕಳ ಸಂಪರ್ಕಕ್ಕೆ ಶಿಕ್ಷಕರು
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಶಾಲಾ ಶಿಕ್ಷಕರು ಆರೋಗ್ಯ ಕಾರ್ಯಕರ್ತರಿಗೆ ಹೆಗಲೆಣೆಯಾಗಿ ದುಡಿದಿದ್ದಾರೆ. ಈಗ ಶಾಲೆಗಳು ಆರಂಭವಾಗಿದ್ದು, ಅವರೆಲ್ಲ ತರಗತಿಗಳಲ್ಲಿ ಮಕ್ಕಳ ಸಮೂಹದ ಸಂಪರ್ಕಕ್ಕೆ ಬರುತ್ತಿರುವುದರಿಂದ ಮಕ್ಕಳ ಮತ್ತು ಅವರ ಹಿತದೃಷ್ಟಿಯಿಂದ ಶಿಕ್ಷಕರಿಗೆ ಲಸಿಕೆ ನೀಡುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ. ಲಸಿಕೆ ನೀಡಲು ಆದ್ಯತೆ ನೀಡಬೇಕೆಂದು ಸುರೇಶ್ ಕುಮಾರ್ ಅವರು ಆಗ್ರಹಿಸಿದ್ದಾರೆ.

ಶಿಕ್ಷಕರು ಕೂಡ ಕೊರೋನಾ ವಾರಿಯರ್ಸ್
ರಾಜ್ಯದ ಎಲ್ಲಾ ಶಾಲೆಗಳ ಶಿಕ್ಷಕರನ್ನು ಕೊರೋನಾ ವಾರಿಯರ್ಸ್ ಎಂದು ಪರಿಗಣಿಸಿ ಅವರಿಗೆ ಕೋವಿಡ್ ಲಸಿಕೆ ನೀಡಲು ಆದ್ಯತೆ ನೀಡಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಶುಕ್ರವಾರ ಪ್ರಧಾನಿ ಮತ್ತು ಆರೋಗ್ಯ ಸಚಿವರಿಗೆ ಪ್ರತ್ಯೇಕ ಪತ್ರ ಬರೆದಿರುವ ಅವರು, ಕೋವಿಡ್ ವಾರಿಯರ್ಸ್ ಗೆ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡುತ್ತಿರುವುದು ಅತ್ಯಂತ ಸಮಂಜಸವಾದ ವಿಚಾರವಾಗಿದೆ. ಅದೇ ರೀತಿ ಶಿಕ್ಷಕರನ್ನೂ ಸಹ ಕೊರೋನಾ ವಾರಿಯರ್ಸ್ ಎಂದು ಪರಿಗಣಿಸಿ ಅವರಿಗೂ ಲಸಿಕೆ ನೀಡಲು ಆದ್ಯತೆ ನೀಡಬೇಕೆಂದು ಮನವಿ ಮಾಡಿದ್ದಾರೆ.

ಅನುಮೋದನೆ ಕೊಡಿ
ಶಿಕ್ಷಕರು ವ್ಯಾಕ್ಸಿನ್ ಪಡೆಯಲು ಅನುವಾಗುವಂತೆ ಶಿಕ್ಷಕರನ್ನು ಕೋವಿಡ್-19 ವಾರಿಯರ್ಸ್ ಎಂದು ಪರಿಗಣಿಸಬೇಕೆಂದು ಕೋರಿ ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿಯವರು ಸಲ್ಲಿಸಿರುವ ಪ್ರಸ್ತಾವನೆಗೆ ಅನುಮೋದನೆ ನೀಡಬೇಕೆಂದು ಸುರೇಶ್ ಕುಮಾರ್ ಕೋರಿದ್ದಾರೆ.












Click it and Unblock the Notifications