ಟಿಇಟಿ ಪರೀಕ್ಷೆ ಹಾಲ್ ಟಿಕೆಟ್‌ನಲ್ಲಿ ಸನ್ನಿ ಲಿಯೋನ್ ಫೋಟೋ
ಬೆಂಗಳೂರು, ನವೆಂಬರ್ 9: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) 2022ಗೆ ಹಾಜರಾದ ಅಭ್ಯರ್ಥಿಯ ಪರೀಕ್ಷಾ ಹಾಲ್ ಟಿಕೆಟ್‌ನಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ ಫೋಟೋವನ್ನು ಮುದ್ರಿಸಲಾಗಿದ್ದು ಪ್ರವೇಶ ಪತ್ರದ ಸ್ಕ್ರೀನ್ ಶಾಟ್ ಇದೀಗ ವೈರಲ್ ಆಗಿದೆ.
ಶಿವಮೊಗ್ಗದ ರುದ್ರಪ್ಪ ಕಾಲೇಜಿನಲ್ಲಿ ಅಭ್ಯರ್ಥಿಯೊಬ್ಬರು ನಟಿಯ ಚಿತ್ರವಿರುವ ಹಾಲ್ ಟಿಕೆಟ್ ಅನ್ನು ಹಾಜರುಪಡಿಸಿದಾಗ ಅವ್ಯವಹಾರ ಬೆಳಕಿಗೆ ಬಂದಿದ್ದು, ನಂತರ ಸಂಸ್ಥೆಯ ಪ್ರಾಂಶುಪಾಲರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಮಾದವು ಅನೇಕ ಜನರನ್ನು ಆಕ್ರೋಶಗೊಳಿಸಿದ್ದು, ಇದು ವೈರಲ್ ಆದ ನಂತರ ಶಿಕ್ಷಣ ಇಲಾಖೆಯಿಂದ ತನಿಖೆಗೆ ಒಳಪಟ್ಟಿದೆ.
ಆನ್‌ಲೈನ್‌ನಲ್ಲಿ ಅರ್ಜಿಯನ್ನು ಭರ್ತಿ ಮಾಡುವಾಗ ಮತ್ತು ಸಲ್ಲಿಸುವಾಗ ಛಾಯಾಚಿತ್ರವನ್ನು ಅಪ್‌ಲೋಡ್ ಮಾಡುವ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಅಭ್ಯರ್ಥಿಯು ತಾನು ಆನ್‌ಲೈನ್‌ನಲ್ಲಿ ಅರ್ಜಿಯನ್ನು ಭರ್ತಿ ಮಾಡಿಲ್ಲ. ಆದರೆ ತನ್ನ ಪರವಾಗಿ ಅದನ್ನು ಮಾಡಲು ಇತರರನ್ನು ಕೇಳಿಕೊಂಡಿದ್ದೇನೆ ಎಂದು ಹೇಳಿದರು.

ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿಯನ್ನು ತಾವೇ ಭರ್ತಿ ಮಾಡಬೇಕು, ಇದಕ್ಕಾಗಿ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ರಚಿಸಲಾಗಿದೆ. ಇದು ಅಭ್ಯರ್ಥಿಗೆ ಪ್ರತ್ಯೇಕವಾಗಿದೆ ಮತ್ತು ಬೇರೆ ಯಾರೂ ಅದರಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಅಭ್ಯರ್ಥಿಯು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದವರಾಗಿದ್ದು, ಶಿವಮೊಗ್ಗದಲ್ಲಿ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು.
ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ಕರ್ನಾಟಕ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಅಧ್ಯಕ್ಷ ಬಿಆರ್ ನಾಯ್ಡು ಅವರು ಮಂಗಳವಾರ ರಾಜ್ಯ ಶಿಕ್ಷಣ ಇಲಾಖೆಯು ಅಭ್ಯರ್ಥಿಯ ಫೋಟೋದ ಬದಲಿಗೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ ಫೋಟೋವನ್ನು ಹಾಲ್ ಟಿಕೆಟ್‌ನಲ್ಲಿ ಮುದ್ರಿಸಿದೆ ಎಂದು ಆರೋಪಿಸಿದ್ದಾರೆ. ನಾಯ್ಡು ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿ.ಸಿ.ನಾಗೇಶ್ ಅವರ ಕಚೇರಿ, ಅಭ್ಯರ್ಥಿ ಫೋಟೋವನ್ನು ಅಪ್‌ಲೋಡ್ ಮಾಡಬೇಕು. ಅವರು ಫೈಲ್‌ಗೆ ಲಗತ್ತಿಸುವ ಯಾವುದೇ ಫೋಟೋವನ್ನು ಸಿಸ್ಟಮ್ ತೆಗೆದುಕೊಳ್ಳುತ್ತದೆ ಎಂದು ಹೇಳಿದೆ.
ಪರೀಕ್ಷಾ ಕೇಂದ್ರದ ಉಸ್ತುವಾರಿ ಚನ್ನಪ್ಪ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದು, ಕೂಲಂಕುಷವಾಗಿ ತನಿಖೆ ನಡೆಸುತ್ತೇವೆ ಎಂದರು.












Click it and Unblock the Notifications