ಮದ್ದೂರಿನಲ್ಲಿ ಅಭಿಷೇಕ್ ಅಂಬರೀಷ್? ಮಗನ ಭವಿಷ್ಯಕ್ಕಾಗಿ ಬಿಜೆಪಿಯತ್ತ ಹೊರಟರಾ ಸಮಲತಾ?
ಮಂಡ್ಯ ಏ. 27: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿಯಿದೆ. ಅದಾಗಲೇ ಮಂಡ್ಯ ಜಿಲ್ಲೆಯ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಚಟುವಟಿಕೆ ಶುರುವಾಗಿದೆ.
ಎಸ್.ಎಂ. ಕೃಷ್ಣ ಅವರ ಸಹೋದರನ ಪುತ್ರನನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಮಣಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಣತಂತ್ರ ರೂಪಿಸಿದ್ದಾರೆ. ಇದೇ ಕ್ಷೇತ್ರದಿಂದ ತಮ್ಮ ಮಗ ಅಭಿಷೇಕ್ ಅಂಬರೀಶ್‌ಗೆ ಬಿಜೆಪಿ ಟಿಕೆಟ್ ಕೊಡಿಸಲು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ. ಮಗನಿಗೆ ಮದ್ದೂರಿನಲ್ಲಿ ಟಿಕೆಟ್ ಕೊಡಿ ಎಂಬ ಬೇಡಿಕೆ ಇಟ್ಟು ಬಿಜೆಪಿ ಸೇರಲು ಸಂಸದೆ ಸುಮಲತಾ ಅಂಬರೀಶ್ ಮುಂದಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಸುಮಲತಾ ಬಿಜೆಪಿ ಕದ ತಟ್ಟಿದ್ರಾ?
ನಟ ಅಂಬರೀಷ್ ನಿಧನದ ಬಳಿಕ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಸುಮಲತಾ ಅಂಬರೀಷ್ ರಾಷ್ಟ್ರೀಯ ಪಕ್ಷಗಳಿಗೆ ಮಣ್ಣು ಮುಕ್ಕಿಸಿ ಸಂಸದೆಯಾಗಿ ಆಯ್ಕೆಯಾಗಿದ್ದರು. ಮಂಡ್ಯದ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಮಟ್ಟದಲ್ಲಿ ಪ್ರಭಾವ ಬೀರುವ ಮೂಲಕ ಸುದ್ದಿಯಾಗಿದ್ದರು. ಮಂಡ್ಯದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಬಗ್ಗೆ ಧ್ವನಿಯೆತ್ತಿ ಸುದ್ದಿಯಾಗಿದ್ದರು. ಇದೀಗ ತನ್ನ ಮಗನಿಗೆ ರಾಜಕೀಯ ಭವಿಷ್ಯವನ್ನು ಕಟ್ಟಿಕೊಡುವ ಉದ್ದೇಶದಿಂದ ಸುಮಲತಾ ಅಂಬರೀಶ್ ಬಿಜೆಪಿ ಪಕ್ಷ ಸೇರಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಮದ್ದೂರಿನಲ್ಲಿ ಅಭಿಷೇಕ್ ಅಂಬರೀಷ್ ನನ್ನು ಪಕ್ಷದಿಂದ ಕಣಕ್ಕೆ ಇಳಿಸಿ ರಾಜಕೀಯ ಭವಿಷ್ಯದ ಅಗ್ನಿ ಪರೀಕ್ಷೆಗೆ ಒಳಪಡಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಮಂಡ್ಯ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಬಿಜೆಪಿ ನಾಯಕರ ಜತೆ ನೇರ ಒಡನಾಟ ಹೊಂದಿರುವ ಸುಮಲತಾ ಅವರು ತಮ್ಮ ಮಗನನ್ನು ಮದ್ದೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಣಕ್ಕೆ ಇಳಿಸುವ ಷರತ್ತು ವಿಧಿಸಿದ್ದು, ಇದಕ್ಕೆ ಹಸಿರು ನಿಶಾನೆ ಸಿಕ್ಕ ಕೂಡಲೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಪ್ರತಿಕಾರ ತೀರಿಸಿಕೊಳ್ಳಲು ಕಾಂಗ್ರೆಸ್ ಅದಾಗಲೇ ರಣ ತಂತ್ರ ರೂಪಿಸಿದೆ. ಮದ್ದೂರು ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದ, ಬೆಂಗಳೂರನ್ನು ಐಟಿ ಸಿಟಿಯನ್ನಾಗಿ ರೂಪಿಸಿದ ಖ್ಯಾತಿ ಹೊಂದಿರುವ ಮಾಜಿ ಸಿಎಂ ಎಸ್. ಎಂ. ಕೃಷ್ಣ ಅವರದ್ದು. ಎಸ್. ಎಂ. ಕೃಷ್ಣ ಅವರ ಪ್ರಭಾವ ಕ್ಷೇತ್ರದಲ್ಲಿ ಈಗಲೂ ಇದೆ. ಹೀಗಾಗಿ ಎಸ್.ಎಂ. ಕೃಷ್ಣ ಅವರ ಸಹೋದರನ ಪುತ್ರ ಗುರುಚರಣ್ ಅವರನ್ನು ಕಣಕ್ಕೆ ಇಳಿಸಲು ಕೆಪಿಸಿಸಿ ಅಧ್ಯಕ್ಷರು ಪ್ಲಾನ್ ರೂಪಿಸಿದ್ದಾರೆ. ಎಸ್.ಎಂ. ಕೃಷ್ಣ ಅವರೇ ಬಿಜೆಪಿಯಲ್ಲಿದ್ದರೂ ಸಹೋದರನ ವಿಚಾರ ಬಂದಾಗ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ. ಹೀಗಾಗಿ ಕ್ಷೇತ್ರವನ್ನು ವಾಪಸು ಪಡೆಯಲು ಕೈ ರಣ ತಂತ್ರ ರೂಪಿಸಿದೆ.

ಸುಮಲತಾ ಪ್ಲಾನ್ ಬೇರೆ:
ಸಂಸದೆ ಸುಮಲತಾ ಅವರು ಅನಿವಾರ್ಯ ಕಾರಣದಿಂದ ರಾಜಕೀಯಕ್ಕೆ ಪ್ರವೇಶ ಮಾಡಿ ಮೊದಲ ಸಲವೇ ಸಂಸದೆಯಾಗಿ ಗೆದ್ದಿದ್ದರು. ಅದರಲ್ಲೂ ಮದ್ದೂರು ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳು ಬಿದ್ದಿದ್ದವು. ಹೀಗಾಗಿ ಅಭಿಷೇಕ್ ಅಂಬರೀಷ್ ಅವರನನ್ನು ಕಣಕ್ಕೆ ಇಳಿಸಿದರೆ ಬಹುತೇಕ ಗೆಲುವು ಕಟ್ಟಿಟ್ಟ ಬುತ್ತಿ. ಆದರೆ ಇವತ್ತಿನ ರಾಜಕೀಯ ಪರಿಸ್ಥಿತಿ ನೋಡಿದ್ರೆ, ಯಾವುದಾದ್ರೂ ಪಕ್ಷದಿಂದಲೇ ಪ್ರತಿನಿಧಿಸಬೇಕು. ಜೆಡಿಎಸ್ - ಕಾಂಗ್ರೆಸ್ ವಿರುದ್ಧ ಸೆಟೆದು ನಿಂತು ಇದೀಗ ಅವರ ಬಳಿ ಟಿಕೆಟ್ ಕೇಳುವುದರಲ್ಲಿ ಅರ್ಥವಿಲ್ಲ. ಇರುವ ಏಕೈಕ ಪಕ್ಷ ಬಿಜೆಪಿ. ರಾಜ್ಯದಲ್ಲಿ ಬಿಜೆಪಿ ಪರ ಜನರ ಒಲವು ಜಾಸ್ತಿಯಿದ್ದು, ಬಿಜೆಪಿಯಿಂದಲೇ ಕಣಕ್ಕೆ ಇಳಿಸುವ ಲೆಕ್ಕಾಚಾರ ಮಾಡಿದ್ದಾರೆ.ಈ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಸುಮಲತಾ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆ ಆರಂಭವಾಗಿದೆ.

ಮದುವೆ ಕಾರ್ಯಕ್ರಮದಲ್ಲಿ ಸುಮಲತಾ ತಮ್ಮ ಬೆಂಬಲಿಗರೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದಾರೆ.ಇದಕ್ಕೂ ಮೊದಲು ಬಿಜೆಪಿ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಜೆಡಿಎಸ್ ಕಥೆ ಏನು?
ಸದ್ಯ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನ ಡಿ.ಸಿ. ತಮ್ಮಣ್ಣ ಶಾಸಕರಾಗಿದ್ದಾರೆ. ಈ ಹಿಂದೆಯೂ ಸಹ ಈ ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದು, ಸಿದ್ದರಾಜು ಶಾಸಕರಾಗಿದ್ದರು. ಜೆಡಿಎಸ್ ಗೆ ಅತಿ ಬೆಂಬಲ ಇರುವ ಕ್ಷೇತ್ರ ಮದ್ದೂರು. ಕಾಂಗ್ರೆಸ್ ಹಾಗೂ ಬಿಜೆಪಿ ರಣ ತಂತ್ರಕ್ಕೆ ಜೆಡಿಎಸ್ ಈ ಕ್ಷೇತ್ರವನ್ನು ಬಿಟ್ಟು ಕೊಡಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಕೊನೆ ಕ್ಷಣದಲ್ಲಿ ಜೆಡಿಎಸ್ ಯಾವ ತಂತ್ರ ರೂಪಿಸುತ್ತೋ ಕಾದು ನೋಡಬೇಕು.












Click it and Unblock the Notifications