ಬಳ್ಳಾರಿಯಲ್ಲಿ ಮಾ. 3 ರಿಂದ ಕಾಲೇಜು ವಿದ್ಯಾರ್ಥಿ ನಾಟಕೋತ್ಸವ
ಹುಬ್ಬಳ್ಳಿ, ಫೆಬ್ರವರಿ, 9: 'ರಂಗತೋರಣ ಸಂಘಟನೆ'ಯು 12ನೇ ರಾಜ್ಯ ಮಟ್ಟದ ವಿದ್ಯಾರ್ಥಿ ನಾಟಕೋತ್ಸವವನ್ನು ಬಳ್ಳಾರಿಯಲ್ಲಿ ಹಮ್ಮಿಕೊಂಡಿದ್ದು ಮಾರ್ಚ್ 3 ರಿಂದ 5 ವರೆಗೆ ನಡೆಯಲಿದೆ ಎಂದು ರಂಗತೋರಣದ ರಾಜ್ಯ ಕಾರ್ಯದರ್ಶಿ ಕಪ್ಪಗಲ್ಲು ಪ್ರಭುದೇವ ತಿಳಿಸಿದರು.
ಹುಬ್ಬಳ್ಳಿ ಪತ್ರಕರ್ತ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಬಳ್ಳಾರಿಯ ಡಾ. ಜೋಳದ ರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಾಟಕೋತ್ಸವ ನಡೆಯಲಿದ್ದು, ಪ್ರತಿ ಗಂಟೆಗೊಂದರಂತೆ 3 ದಿನ ನಿರಂತರ ನಾಟಕಗಳ ಪ್ರದರ್ಶನ ನಡೆಯಲಿದೆ," ಎಂದರು.

ಪ್ರತಿ ವರ್ಷವೂ ರಂಗತೋರಣದಿಂದ ನಾಟಕೋತ್ಸವ ಹಮ್ಮಿಕೊಳ್ಳಲಾಗುತ್ತಿದೆ. ನಾಟಕೋತ್ಸವದಲ್ಲಿ ಮನೋವಿಕಾಸಕ್ಕಾಗಿ ನಾಟಕಗಳ ಪ್ರದರ್ಶನ ನಡೆಯುತ್ತದೆ, ಮನರಂಜನೆಗಾಗಿ ಅಲ್ಲ. ವಿದ್ಯಾರ್ಥಿಗಳು ಮತ್ತು ಕಲಾವಿದರಿಗೆ ಇಲ್ಲಿ ವಿವಿಧ ಸ್ಪರ್ಧೆಗಳನ್ನೂ ಏರ್ಪಡಿಸಲಾಗಿದೆ. ಆಸಕ್ತರು ಫೆಬ್ರವರಿ 22 ರೊಳಗಾಗಿ ತಮ್ಮನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಈ ನಾಟಕೋತ್ಸವದಲ್ಲಿ ದಸರಾ ರೀತಿಯ ವೈಭವಯುತ ಮೆರವಣಿಗೆ ಇರಲಿದ್ದು, ರಂಗತೋರಣ ಪ್ರಶಸ್ತಿ ಪುರಸ್ಕಾರ ಇದೇ ಸಂದರ್ಭದಲ್ಲಿ ನೀಡಲಾಗುತ್ತದೆ. ವಿದ್ಯಾರ್ಥಿ ನಾಟಕೋತ್ಸವಕ್ಕೆ ಖ್ಯಾತ ಕಲಾ ನಿರ್ದೇಶಕ ಶಶಿಧರ ಅಡಪ ಅಧ್ಯಕ್ಷರಾಗಿ ಆಗಮಿಸಲಿದ್ದಾರೆ.
(ಸಾಂದರ್ಭಿಕ ಚಿತ್ರ)












Click it and Unblock the Notifications