545 PSI Exam Results: ರಕ್ತದಲ್ಲಿ ಸಿಎಂ ಸಿದ್ದರಾಮಯ್ಯಗೆ ಪತ್ರ: ಬಿವೈ ವಿಜಯೇಂದ್ರ.....
ಬೆಂಗಳೂರು, ಅಕ್ಟೋಬರ್ 14: ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿದ್ದ ಪಿಎಸ್ಐ ನೇಮಕಾತಿ ಅಕ್ರಮ ಹಿನ್ನೆಲೆಯಲ್ಲಿ ಸರ್ಕಾರ ಮರು ಪರೀಕ್ಷೆ ನಡೆಸಿತ್ತು. ಅದರೆ ಇದುವರೆಗೂ ಫಲಿತಾಂಶ ಮಾತ್ರ ಪ್ರಕಟವಾಗಿಲ್ಲ. ''ಮರುಪರೀಕ್ಷೆ ಮಾಡುವಾಗ ಇದ್ದಂತಹ ಉತ್ಸಾಹ ಫಲಿತಾಂಶ ಪ್ರಕಟಿಸುವಾಗ ಯಾಕಿಲ್ಲ. ಕೇವಲ ವಿದ್ಯಾರ್ಥಿಗಳನ್ನು ನಿಮ್ಮ ರಾಜಕೀಯ ಹಿತಾಸಕ್ತಿಗೆ ಬಳಸಿದ್ದೀರಿ ಅಷ್ಟೆ... ನಿಮ್ಮ ಸರ್ಕಾರ ಅಭ್ಯರ್ಥಿಗಳಿಗೆ ನೀಡಿದ ಭರವಸೆಯನ್ನು ಮೊದಲು ಉಳಿಸಿಕೊಳ್ಳಿ, PSI 545 ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿ ಎಂದು ಸಿಎಂ ಸಿದ್ದರಾಮಯ್ಯರ ಮೇಲೆ ಒತ್ತಡ ಹೇರಲಾಗಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ 545 ಪಿಎಸ್‌ಐ ಹುದ್ದೆಗಳಿಗೆ ಮರು ಪರೀಕ್ಷೆ ಬರೆದ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಈ ಮಧ್ಯೆ ಹೊಸ ಅಭಿಯಾನ ಆರಂಭಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ನೇರವಾಗಿ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಫಲಿತಾಂಶ ಪ್ರಕಟಿಸುವಂತೆ ಒತ್ತಾಯಿಸಿದ್ದಾರೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಸಹ ಸರ್ಕಾರ ನಡೆಯನ್ನು ಪ್ರಶ್ನೆ ಮಾಡಿದ್ದಾರೆ.

''ಮಾನ್ಯ ಮುಖ್ಯ ಮಂತ್ರಿಗಳಿಗೆ ವಿದ್ಯಾರ್ಥಿಗಳ ಆಕ್ರಂದನ ಏಕೆ ಕೇಳುತ್ತಿಲ್ಲ... ಸುಮಾರು 4 ವರ್ಷಗಳ ಕಾಲ ಕಳೆದರೂ 545 ಪಿಎಸ್ಐ ಫಲಿತಾಂಶ ಬಿಡುಗಡೆ ಮಾಡದೇ ನಿಮ್ಮ ಸರ್ಕಾರ ಮೀನಮೇಷ ಎಣಿಸುತ್ತಿದೆ. ಈ ವಿಷಯ ನಿಮ್ಮ ಗಮನಕ್ಕೆ ಬಂದಿದ್ದರೆ ಆದಷ್ಟು ಬೇಗನೆ ಪಿಎಸ್ಐ ಫಲಿತಾಂಶವನ್ನು ನೀಡಿ ಪುಣ್ಯ ಕಟ್ಟಿಕೊಳ್ಳಿ'' ಎಂದು ಅಭ್ಯರ್ಥಿಗಳು ಪ್ರತಿಭಟಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ರಕ್ತದಲ್ಲಿ ಪತ್ರ ಬರೆದ ನಾಫಲಕ ಹಿಡಿದು ಮನವಿ ಮಾಡಿಕೊಂಡಿದ್ದಾರೆ.
ಪಿಎಸ್‌ಐ ಫಲಿತಾಂಶ ಬಗ್ಗೆ ಬಿವೈ ವಿಜಯೇಂದ್ರ ಹೇಳಿದ್ದೇನು?
ಇತ್ತೀಚೆಗಷ್ಟೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಉಚ್ಛ ನ್ಯಾಯಾಲಯದ ಆದೇಶದಂತೆ 545 ಪಿಎಸ್ಐ ಹುದ್ದೆಗಳ ಮರು ಪರೀಕ್ಷೆ ನಡೆಸಲಾಗಿದೆ. 2024 ರ ಮಾರ್ಚ್ 28 ರಂದು ಅಂತಿಮ ಪಟ್ಟಿ ಪ್ರಕಟಿಸಿದ್ದು, ಮುಂದಿನ ಪ್ರಕ್ರಿಯೆ ಪೂರ್ಣಗೊಳಿಸಲು ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ ಮತ್ತು ತರಬೇತಿ ವಿಭಾಗಕ್ಕೆ ನೀಡಲಾಗಿದೆ. ಹೀಗಿದ್ದರೂ ಸಹ ಈವರೆಗೂ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿಲ್ಲ. ಇದು ರಾಜ್ಯ ಸರ್ಕಾರದ ಬೇಜವಾಬ್ದಾರಿತವೋ ಅಥವಾ ಯೋಜಿತ ಧೋರಣೆಯೋ ಎಂಬ ಅನುಮಾನ ಪರೀಕ್ಷಾರ್ಥಿಗಳಲ್ಲಿ ಕಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಟ್ವೀಟ್ ಮೂಲಕ ಕಿಡಿ ಕಾರಿದ್ದಾರೆ.
ಇತ್ತೀಚೆಗಷ್ಟೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಉಚ್ಛ ನ್ಯಾಯಾಲಯದ ಆದೇಶದಂತೆ 545 ಪಿಎಸ್ಐ ಹುದ್ದೆಗಳ ಮರು ಪರೀಕ್ಷೆ ನಡೆಸಿ 2024 ರ ಮಾರ್ಚ್ 28 ರಂದು ಅಂತಿಮ ಪಟ್ಟಿ ಪ್ರಕಟಿಸಿ ಮುಂದಿನ ಪ್ರಕ್ರಿಯೆ ಪೂರ್ಣಗೊಳಿಸಲು ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ ಮತ್ತು ತರಬೇತಿ ವಿಭಾಗಕ್ಕೆ ನೀಡಿ ಇದುವರೆಗೂ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸದೇ ಇರುವುದು… pic.twitter.com/rExCpKYV6h
— Vijayendra Yediyurappa (@BYVijayendra) October 14, 2024
ಈಗಾಗಲೇ ಅನೇಕ ಕಾರಣಗಳಿಂದ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿದೆ. ಕಳೆದ 4 ವರ್ಷಗಳಿಂದಲೂ ಸಾವಿರಾರು ಉದ್ಯೋಗಾಕಾಂಕ್ಷಿಗಳು ಅಂತಿಮ ಆಯ್ಕೆ ಪಟ್ಟಿಗಾಗಿ ಕಾಯುತ್ತಿದ್ದಾರೆ. ಇದೆಲ್ಲವು ಈ ಸರ್ಕಾರದ ಅರಿವಿಗೆ ಬಾರದಿರುವುದು ದುರ್ದೈವವೇ ಸರಿ ಎಂದು ಟೀಕಿಸಿದರು.
ಪದೇ ಪದೇ ಪರೀಕ್ಷೆ ಎದುರಿಸುವ ಉದ್ಯೋಗಾಕಾಂಕ್ಷಿಗಳನ್ನು ಗೊಂದಲಕ್ಕೆ ತಳ್ಳುತ್ತಿರುವ ರಾಜ್ಯ ಸರ್ಕಾರ ಈ ಕೂಡಲೇ 545 ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟಿಸಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅಭಿಲಾಷೆ ಹೊತ್ತು ಕಾಯುತ್ತಿರುವ ಪರೀಕ್ಷಾರ್ಥಿಗಳ ಗೊಂದಲಗಳಿಗೆ ತೆರೆ ಎಳೆಯುವ ಕಾಳಜಿ ತೋರಲಿ ಎಂದು ಸರ್ಕಾರಕ್ಕೆ ಅವರು ಕಿಡಿ ಮಾತು ಹೇಳಿದ್ದಾರೆ.
ನೇಮಕಾತಿಯಲ್ಲಿ ಭಾರೀ ಅಕ್ರಮ
ಪಿಎಸ್ಐ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದ ಪರಿಣಾಮ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿತ್ತು. ಇದರಲ್ಲಿ ಕೆಲವು ರಾಜಕಾರಣಗಳ ಹೆಸರು ಕೇಳಿ ಬಂದಿತ್ತು. ರಾಜ್ಯ ಸರ್ಕಾರದ ಮೇಲೂ ಹಲವು ಅನುಮಾನ, ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿದ್ದವು. ಕೊನೆಗೆ ಮರು ಪರೀಕ್ಷೆ ನಡೆಸಲಾಯಿತು. ಆದರೆ ಈವರೆಗೂ ಫಲಿತಾಂಶ ಬಿಡುಗಡೆ ಮಾಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೇ ಭವಿಷ್ಯದ ಕನಸು ಹೊತ್ತ ಪರೀಕ್ಷಾರ್ಥಿಗಳಲ್ಲಿ ಆತಂಕ ಉಂಟಾಗಿದೆ.












Click it and Unblock the Notifications