ಬಿಎಸ್ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ, ಇದು ಕಾಂಗ್ರೆಸ್ ಕೃತ್ಯ ಎಂದ ಸಿಎಂ
ಬೆಂಗಳೂರು, ಮಾರ್ಚ್ 27: ಒಳಮೀಸಲಾತಿ ಜಾರಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಬಂಜಾರ ಸಮುದಾಯದವರು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ್ದು, ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಘಟನೆಯನ್ನು ಖಂಡಿಸಿದ್ದಾರೆ.
ಸೋಮವಾರ ಬಂಜಾರ ಸಮುದಾಯದವರು ಒಳಮೀಸಲಾತಿ ಜಾರಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ನಡೆಸುತ್ತಿದ್ದ ಪ್ರತಿಭಟನೆ ಕೈ ಮೀರಿ ಹೋಗಿದ್ದು, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನಿವಾಸದ ಬಳಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು.

ಯಡಿಯೂರಪ್ಪ ಮನೆ ಮೇಲೆ ಕಲ್ಲೂ ತೂರಾಟ ನಡೆಸಿರುವ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ನಾನು ಬಂಜಾರ ಸಮುದಾಯ ಮುಖಂಡರಲ್ಲಿ ಮನವಿ ಮಾಡುತ್ತಿದ್ದೇನೆ, ಮೊಟ್ಟ ಮೊದಲನೆಯದಾಗಿ ಸದಾಶಿವ ಆಯೋಗ ವರದಿ ಶಿಫಾರಸಿನ ಅನ್ವಯ ನಾವು ಒಳಮೀಸಲಾತಿ ಜಾರಿ ಪ್ರಸ್ತಾವನೆ ಮಾಡಿಲ್ಲ, ನಾವು ನಮ್ಮ ಕ್ಯಾಬಿನೆಟ್ ಕಮಿಟಿ ಸಭೆಯಂತೆ ಮಾಡಿದ್ದೇವೆ. ಬಂಜಾರ ಸಮುದಾಯದಕ್ಕೆ ಪರಿಶಿಷ್ಟ ಸಮುದಾಯದಿಂದ ತೆಗೆಯುತ್ತಾರೆ ಎಂಬ ಆತಂಕವಿದೆ. ಆದರೆ ಅದು ಹಾಗೆ ಮಾಡಿಲ್ಲ.'
ನಾನೇ ಖುದ್ದು ಆದೇಶ ಮಾಡಿದ್ದೇನೆ. ಬೋವಿ, ಲಂಬಾಣಿ, ಕೊರಮ, ಕೊರಚ ಸಮುದಾಯಗಳು ಪರಿಶಿಷ್ಟ ಜಾತಿ ವರ್ಗದಲ್ಲೇ ಇರುತ್ತದೆ. ಅವರನ್ನು ಎಸ್‌ಸಿ ವರ್ಗದಿಂದ ತೆಗೆಯುವ ಪ್ರಶ್ನೆ ಇಲ್ಲ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಕಳುಸಿಯೂ ಆಗಿದೆ. ಅವರಿದ್ದ ಶೇಕಡ 3ರಷ್ಟು ಮೀಸಲಾತಿಯನ್ನು ಶೇಕಡ 4ರಷ್ಟು ಮಾಡುವಂತೆ ಮನವಿ ಮಾಡಿದ್ದೇವೆ. ಮುಂದೆ ಸದಾಶಿವ ಆಯೋಗ ವರದಿಯನ್ನು ನಾವು ಪರಿಗಣಿಸಿಲ್ಲ. ಲಂಬಾಣಿ ಸಮುದಾಯಕ್ಕೆ ಯಾವುದೇ ಆತಂಕ ಬೇಡ. ತಾಂಡಾ ಅಭಿವೃದ್ಧಿ ನಿಮಗ ಮಾಡಿದವರೇ ಯಡಿಯೂರಪ್ಪನವರು.
ಆ ಭಾಗದಲ್ಲಿ ಎಲ್ಲ ಮೂಲಭೂತ ಸೌಕರ್ಯ ಕೊಟ್ಟಿದ್ದಾರೆ. ಈ ಘಟನೆ ಹಿಂದೆ ಸ್ಥಳೀಯ ಕಾಂಗ್ರೆಸ್ ನಾಯಕರ ಪ್ರಚೋದನೆ ಇದೆ. ನಾವು ಸಾಮಾಜಿಕ ನ್ಯಾಯ ಕಾಪಾಡಿಕೊಂಡು ಬಂದಿದ್ದೇವೆ. ಇದನ್ನು ತಡೆಯಲಾಗದೆ ಅವರು ಈ ರೀತಿ ಮಾಡುತ್ತಿದ್ದಾರೆ. ಈ ಪ್ರಚೋದನೆಗೆ ಬಂಜಾರ ಸಮುದಾಯ ಒಳಗಾಗಬಾರದು. ಬಿಜೆಪಿ ಈ ಸಮುದಾಯ ರಕ್ಷಣೆ ಮಾಡುತ್ತಾ ಬಂದಿದೆ. ಮುಂದೆಯೂ ಮಾಡುತ್ತದೆ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ಗೆ ಇದು ಶೋಭೆಯಲ್ಲ. ಈಗ ಸುರ್ಜೇವಾಲ ಅವರು ಈ ಬಗ್ಗೆ ಮಾತನಾಡಲಿ ಎಂದು ಸಿಎಂ ತಿಳಿಸಿದರು.

ಘಟನೆ ಸಂಬಂಧ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲೂ ತೂರಾಟ ಮಾಡಿರುವುದ ಖಂಡನೀಯ. ಈಗಾಗಲೇ ಸಿಎಂ ಬೊಮ್ಮಾಯಿ ಅವರು ಒಳಮೀಸಲಾತಿ ಸಂಬಂಧ ಸ್ಪಷ್ಟೀಕರಣ ನೀಡಿದ್ದಾರೆ. ಕ್ಯಾಬಿನೆಟ್ ಒಳಮೀಸಲಾತಿ ಸಂಬಂಧ ಕ್ರಮ ಕೈಗೊಂಡಿದೆ. ಈ ಬಗ್ಗೆ ಸಂಬಂಧಪಟ್ಟ ಸಮುದಾಯದವರನ್ನು ಕರೆದು ಮಾತನಾಡಿ ಎಲ್ಲರಿಗೂ ಅನುಕೂಲವಾಗಿರುವ ಬಗ್ಗೆ ವಿವರಣೆ ಕೊಡಲಾಗುತ್ತದೆ. ಯಡಿಯೂರಪ್ಪನವರು ಹಿರಿಯ ಮುತ್ಸದ್ದಿ ರಾಜಕಾರಣಿ ಅವರ ಮನೆ ಮೇಲೆ ದಾಳಿ ಮಾಡಬಾರದಿತ್ತು. ಇದು ರಾಜಕೀಯ ಪ್ರೇರಿತವೂ ಕೂಡ ಇರಬಹುದು ಎಂದು ತಿಳಿಸಿದರು.
ಒಳಮೀಸಲಾತಿ ಜಾರಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಬಂಜಾರ ಸಮುದಾಯದವರು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾದ ಹಿನ್ನೆಲೆ ಶಿಕಾರಿಪುರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.












Click it and Unblock the Notifications