ರಮೇಶ್ ಕುಮಾರ್ ಬಗೆಗಿನ ಮಾತು ಹಿಂಪಡೆದ ಕುಮಾರಸ್ವಾಮಿ!
ಬೆಂಗಳೂರು, ನವೆಂಬರ್ 23; "ಮಾಜಿ ಸ್ಪೀಕರ್ ಶ್ರೀ ರಮೇಶ್ ಕುಮಾರ್ ಬಗ್ಗೆ ನಾನು ಬಳಸಿದೆ ಎನ್ನಲಾದ ಪದ ಸ್ವತಃ ನನಗೂ ನೋವುಂಟು ಮಾಡಿದೆ. ಆ ಪದ ಬಳಕೆ ನನ್ನ ಜಾಯಮಾನವಲ್ಲ, ನನ್ನ ವ್ಯಕ್ತಿತ್ವವೂ ಅಲ್ಲ. ಈ ಮಾತಿನಿಂದ ರಮೇಶ್ ಕುಮಾರ್ ಅವರಿಗಾಗಲಿ, ಇನ್ನಾರಿಗೆ ಆಗಲಿ ನೋವಾಗಿದ್ದರೆ ನನ್ನ ವಿಷಾದವಿದೆ. ಆ ಮಾತನ್ನು ಹಿಂಪಡೆಯುತ್ತೇನೆ" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ಕೋಲಾರ ಜಿಲ್ಲೆಯಲ್ಲಿ ಸಾಗುತ್ತಿದೆ. ಎಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಯಾತ್ರೆ ಮಂಗಳವಾರ ರಮೇಶ್ ಕುಮಾರ್ ತವರು ಕ್ಷೇತ್ರ ಶ್ರೀನಿವಾಸಪುರದಲ್ಲಿ ನಡೆಯಿತು. ಆಗ ಕುಮಾರಸ್ವಾಮಿ ಸ್ಥಳೀಯ ಶಾಸಕ, ಕಾಂಗ್ರೆಸ್ ನಾಯಕರಾಗಿರುವ ರಮೇಶ್ ಕುಮಾರ್ ಬಗ್ಗೆ ಮಾತನಾಡಿದ್ದರು.
ಬುಧವಾರ ಟ್ವೀಟ್ ಮಾಡಿರುವ ಕುಮಾರಸ್ವಾಮಿ, 'ನಿನ್ನೆಯ ದಿನ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಬಂಗವಾದಿ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಶಾಲೆ ಕಂಡು ನನಗೆ ಬಹಳ ಬೇಸರವಾಗಿತ್ತು. ಮಕ್ಕಳು 2-3 ವರ್ಷದಿಂದ ಎದುರಿನ ಅಶ್ವತ್ಥಕಟ್ಟೆ ಮೇಲೆ ಪಾಠ ಕೇಳುತ್ತಿದ್ದರು ಎಂದು ಕೇಳಿ ನನ್ನಲ್ಲಿ ಆಕ್ರೋಶ ಉಂಟಾಗಿತ್ತು' ಎಂದು ಹೇಳಿದ್ದಾರೆ.

"ಆಕ್ರೋಶದ ಹಿನ್ನೆಲೆಯಲ್ಲಿ ಮಾತನಾಡುವ ಭರದಲ್ಲಿ ಹಾಗೆ ಮಾತನಾಡಿದ್ದೇನೆ ಹೊರತು, ಯಾರಿಗೂ ಅಪಮಾನ ಮಾಡುವುದಕ್ಕೆ ಅಲ್ಲ. ಮಕ್ಕಳ ಕಣ್ಣೀರು ನನ್ನ ಸಿಟ್ಟಿಗೆ ಕಾರಣವಾಯಿತು ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ" ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಆಗಿದ್ದೇನು?; ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ಶ್ರೀನಿವಾಸಪುರ ಕ್ಷೇತ್ರದ ಬಂಗವಾದಿ ಹಾಗೂ ಮಾಸ್ತೇನಹಳ್ಳಿ ಗ್ರಾಮದಲ್ಲಿ ಸಾಗುವಾಗ ನೂರಾರು ಶಾಲಾ ಮಕ್ಕಳು ಎಚ್. ಡಿ. ಕುಮಾರಸ್ವಾಮಿಯನ್ನು ಅಡ್ಡಗಟ್ಟಿದರು.
ಸ್ಥಳದಿಂದಲೇ ದೂರವಾಣಿಯಲ್ಲಿ ಮಾಡಿದ ಒತ್ತಾಯಕ್ಕೆ ಶಿಕ್ಷಣ ಸಚಿವರಾದ ಶ್ರೀ @BCNagesh_bjp ಅವರು ಸ್ಪಂದಿಸಿದ್ದು, ಆದಷ್ಟು ಬೇಗ ಬಂಗವಾದಿ ಗ್ರಾಮದ ಶಾಲೆಗೆ ನೂತನ ಕಟ್ಟಡ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.3/4#ಪಂಚರತ್ನ_ರಥಯಾತ್ರೆ #Pancharatna_Rathayatre #ಕೋಲಾರ pic.twitter.com/Lf8p1mPmEa
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) November 22, 2022
ಮೂರು ನಾಲ್ಕು ವರ್ಷಗಳಿಂದ ಶಾಲೆ ಶಿಥಿಲಾವಸ್ಥೆಯಲ್ಲಿದೆ. ಕಟ್ಟದವಿಲ್ಲದೇ ಅಶ್ವಥಕಟ್ಟೆ, ಹಾಲಿನ ಡೈರಿ, ದೇವಾಲಯದಲ್ಲಿ ಕುಳಿತು ಪಾಠ ಕೇಳಬೇಕಿದೆ ಎಂದು ಹೇಳಿದ್ದರು. ಎಚ್. ಡಿ. ಕುಮಾರಸ್ವಾಮಿ ಕಾರು ಇಳಿದು, ಶಾಲೆಗೆ ಹೋಗಿ ವೀಕ್ಷಣೆ ಮಾಡಿದರು.
ಶಾಲಾ ಕಟ್ಟಡ ವೀಕ್ಷಿಸಿದ ಬಳಿಕ ಕುಮಾರಸ್ವಾಮಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು. ವಾಪಸ್ ಕಾರು ಹತ್ತುವಾಗ ಸ್ಥಳೀಯ ಶಾಸಕರಾದ ರಮೇಶ್ ಕುಮಾರ್ ವಿರುದ್ಧ ಆಕ್ರೋಶಗೊಂಡರು.

ಅಷ್ಟೊಂದು ಭಾಷಣ ಮಾಡ್ತಾನೆ ಎಂದು ರಮೇಶ್ ಕುಮಾರ್ ವಿರುದ್ಧ ಕಾರಿನಲ್ಲಿದ್ದ ನಿಖಿಲ್ ಕುಮಾರಸ್ವಾಮಿ ಮತ್ತು ಇತರರಿಗೆ ಹೇಳುವಾಗ ಅವಾಚ್ಯ ಶಬ್ದ ಬಳಕೆ ಮಾಡಿದರು. ಇದನ್ನು ಯಾರೋ ವಿಡಿಯೋ ಮಾಡಿ ಹಾಕಿದ್ದಾರೆ. ಆದ್ದರಿಂದ ಕುಮಾರಸ್ವಾಮಿ ಟ್ವೀಟ್ ಮೂಲಕ ವಿಷಾದ ವ್ಯಕ್ತಪಡಿಸಿದ್ದಾರೆ.
ಶಾಲೆ ಭೇಟಿ ಬಗ್ಗೆ ಟ್ವೀಟ್; ಮಕ್ಕಳ ಒತ್ತಾಯದಂತೆ ಶಾಲೆಗೆ ಭೇಟಿ ನೀಡಿದ ವಿಡಿಯೋವನ್ನು ಎಚ್. ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. 'ಪಂಚರತ್ನ ರಥಯಾತ್ರೆ ವೇಳೆ ಎದುರಾದ ಈ ಘಟನೆಯಿಂದ ನನಗೆ ಬಹಳ ನೋವಾಗಿದೆ. ಯಾತ್ರೆಯು ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದಲ್ಲಿ ಸಾಗುವಾಗ ಬಂಗವಾದಿ ಗ್ರಾಮದ ಸರಕಾರಿ ಶಾಲೆ ಮಕ್ಕಳು ಶಾಲಾ ಕಟ್ಟಡಕ್ಕಾಗಿ ಕಣ್ಣೀರಿಟ್ಟರು, ರಸ್ತೆಯಲ್ಲಿ ಅಡ್ಡಗಟ್ಟಿದರು' ಎಂದು ಹೇಳಿದ್ದಾರೆ.
'ಸ್ಥಳದಿಂದಲೇ ದೂರವಾಣಿಯಲ್ಲಿ ಮಾಡಿದ ಒತ್ತಾಯಕ್ಕೆ ಶಿಕ್ಷಣ ಸಚಿವರಾದ ಶ್ರೀ ಬಿ. ಸಿ. ನಾಗೇಶ್ ಅವರು ಸ್ಪಂದಿಸಿದ್ದು, ಆದಷ್ಟು ಬೇಗ ಬಂಗವಾದಿ ಗ್ರಾಮದ ಶಾಲೆಗೆ ನೂತನ ಕಟ್ಟಡ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು' ಎಂದು ಕುಮಾರಸ್ವಾಮಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
"ಅಲ್ಲದೆ; ಕೋಲಾರ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಕರೆ ಮಾಡಿ, ಕೂಡಲೇ ಬಂಗವಾದಿ ಶಾಲೆಗೆ ಹೊಸ ಕಟ್ಟಡ ಕಟ್ಟಿಸಿಕೊಡಬೇಕಾಗಿ ಸೂಚಿಸಿದ್ದೇನೆ' ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications