Industry: ಕರ್ನಾಟಕದ ಈ ಉಕ್ಕು ಸ್ಥಾವರ ಪುನಃಶ್ಚೇತನಕ್ಕಾಗಿ ಕೇಂದ್ರಕ್ಕೆ ಸಚಿವರ ಪತ್ರ
ಬೆಂಗಳೂರು, ಫೆಬ್ರವರಿ 11: ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಸ್ಥಾವರ (VISP) ಪುನಃಶ್ಚೇತನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ಮನವಿ ಮಾಡಿದೆ.
ಭದ್ರಾವತಿಯಲ್ಲಿನ ಈ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಸ್ಥಾವರ ಪುನಶ್ಚೇತನಗೊಳಿಸಬೇಕು. ಇದರ ಮೇಲೆ ಅತ್ಯಧಿಕ ಕಡಿಮೆ ಬಂಡವಾಳ ಹೂಡಿಕೆ ಮಾಡಲಾಗಿದೆ ಎಂದು ರಾಜ್ಯ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಕೇಂದ್ರ ಉಕ್ಕು ಸಚಿವ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರಿಗೆ ಪತ್ರ ಮುಖೇನ ಒತ್ತಾಯಿಸಿದ್ದಾರೆ.

'ವಿಐಎಸ್‌ಪಿ' ಮುಚ್ಚುವ ನಿರ್ಧಾರವನ್ನು ಮರುಪರಿಶೀಲಿಸಿ ಅದರ ಪುನಶ್ಚೇತನಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು. ಸ್ಥಾವರವನ್ನು ಖಾಸಗೀಕರಣಗೊಳಿಸಲು ಷೇರು ವಿಕ್ರಯಕ್ಕೆ ಮುಂದಾಗಿದ್ದ ಭಾರತೀಯ ಉಕ್ಕು ಪ್ರಾಧಿಕಾರದ (ಎಸ್‌ಎಐಎಲ್) ಪ್ರಯತ್ನವು ವಿಫಲವಾಗಿರುವನ್ನು ಪತ್ರದಲ್ಲಿ ಸಿಂಧಿಯಾ ಅವರ ಗಮನಕ್ಕೆ ತಂದಿದ್ದಾರೆ.
ಸ್ಥಾವರಕ್ಕೆ ಕಾರ್ಯಾಚರಣೆಯ ಸವಾಲು
1989 ರವರೆಗೆ ಕರ್ನಾಟಕದ ಸರ್ಕಾರಿ ವಲಯದ ಉದ್ಯಮವಾಗಿದ್ದ 'ವಿಐಎಸ್‌ಪಿ', ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರ ಅಥವಾ ಉಕ್ಕು ಪ್ರಾಧಿಕಾರದ (ಎಸ್‌ಎಐಎಲ್) ಅಸಮರ್ಪಕ ಬಂಡವಾಳ ಹೂಡಿಕೆ ನೀತಿಯಿಂದಾಗಿ ಕಾರ್ಯಾಚರಣೆಯ ಸವಾಲು ಎದುರಿಸುತ್ತಿದೆ.
ಕಳೆದ ಮೂರು ದಶಕಗಳಲ್ಲಿ ಉಕ್ಕು ಪ್ರಾಧಿಕಾರದ ಇತರ ಘಟಕಗಳಲ್ಲಿನ ಗಮನಾರ್ಹ ಹೂಡಿಕೆಗೆ ಹೋಲಿಸಿದರೆ, 'ವಿಐಎಸ್‌ಪಿ'ಯಲ್ಲಿ ದುರಸ್ತಿ ಮತ್ತು ನವೀಕರಣ ಉದ್ದೇಶಗಳಿಗೆ ಕೇವಲ ₹157 ಕೋಟಿ ವೆಚ್ಚ ಮಾಡಲಾಗಿದೆ. ರಾಮನದುರ್ಗದಲ್ಲಿನ 497 ಎಕರೆ ಪ್ರದೇಶದಲ್ಲಿನ ಸಮೃದ್ಧ ಕಬ್ಬಿಣದ ಅದಿರು ಗಣಿಗಳು ಮತ್ತು ಬಳ್ಳಾರಿ ಜಿಲ್ಲೆಯಲ್ಲಿನ ಗಣಿಗಳು ದಶಕಗಳ ಕಾಲ ಈ ಭದ್ರಾವತಿ ಸ್ಥಾವರವು ಅದಿರು ಪೂರೈಸುವ ಸಾಮರ್ಥ್ಯ ಹೊಂದಿವೆ.

ಷೇರುವಿಕ್ರಯಕ್ಕೆ ಬಿಡ್‌ದಾರರ ನಿರಾಸಕ್ತಿ
2022ರಲ್ಲಿ ನಡೆದಿದ್ದ 'ವಿಐಎಸ್‌ಪಿ'ಯ ಷೇರುವಿಕ್ರಯಕ್ಕೆ ಬಿಡ್‌ದಾರರ ನಿರಾಸಕ್ತಿ ಫಲವಾಗಿ ಹಿನ್ನಡೆ ಉಂಟಾಗಿದೆ. ಈ ಕಾರಣಕ್ಕೆ ಈ ಘಟಕ ಮುಚ್ಚುವ ಸಾಧ್ಯತೆ ಬಗ್ಗೆ ಕಾರ್ಮಿಕರ ಸಂಘಟನೆಯು ತೀವ್ರ ಕಳವಳ ವ್ಯಕ್ತಪಡಿಸಿದೆ. ಇದೆಲ್ಲ ವಿಚಾರವನ್ನು ಪತ್ರದಲ್ಲಿ ಪ್ರಸ್ತಾಪಿಸಿ ಪಾಟೀಲ್ ಪುನಶ್ಚೇತನಗೊಳಿಸಲು ಕ್ರಮ ವಹಿಸುವಂತೆ ಒತ್ತಾಯಿಸಿದರು.
"ವಿಐಎಸ್‌ಪಿ"ಯ ತಯಾರಿಕಾ ಸಾಮರ್ಥ್ಯ, ಸ್ಥಳೀಯವಾಗಿ ಕಬ್ಬಿಣ ಅದಿರಿನ ಸಮೃದ್ಧ ಲಭ್ಯತೆ ಮತ್ತು ಕಾರ್ಮಿಕರ ಹಿತಾಸಕ್ತಿ ದೃಷ್ಟಿಯಿಂದ ಸಿಂಧಿಯಾ ಅವರು ಮಧ್ಯ ಪ್ರವೇಶಿಸಬೇಕು. ಮೈಸೂರು ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1918ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ಪ್ರಾರಂಭಿಸಿದ್ದ ರಾಜ್ಯದ ಹೆಮ್ಮೆಯ ಈ ಉಕ್ಕು ಸ್ಥಾವರನ್ನು ಮುಚ್ಚುವ ನಿರ್ಧಾರ ಕೈಬಿಡುವಂತೆ ಉಕ್ಕು ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೆಲವು ಬೇಡಿಕೆಗಳನ್ನು ಕೇಂದ್ರದ ಮುಂದೆ ಇಟ್ಟಿದ್ದಾರೆ.












Click it and Unblock the Notifications