SBI ಜೊತೆ SBM ವಿಲೀನಕ್ಕೆ ಎರಡೇ ದಿನ: ಮಹತ್ವದ ಬ್ಯಾಂಕಿಂಗ್ ಪ್ರಕಟಣೆ
ಮೈಸೂರು ಬ್ಯಾಂಕ್ ಸಹಿತ ಇತರ ನಾಲ್ಕು ಬ್ಯಾಂಕುಗಳು ಭಾರತೀಯ ಸ್ಟೇಟ್ ಬ್ಯಾಂಕ್ ಜೊತೆ ಏಪ್ರಿಲ್ 1, 2017ಕ್ಕೆ ವಿಲೀನಗೊಳ್ಳಲಿದೆ. ಎಸ್ಬಿಐ ಹೊರಡಿಸಿರುವ ಕೆಲವೊಂದು ಮಹತ್ವದ ಪ್ರಕಟಣೆಗಳು.
ಸ್ವಾತಂತ್ರ್ಯಾನಂತರ ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದ ಐತಿಹಾಸಿಕ ನಿರ್ಧಾರದ ನಂತರ, ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಎನ್ನಬಹುದಾದ ಸ್ಟೇಟ್ ಬ್ಯಾಂಕ್ ಸಮೂಹದ ಐದು ಸಹವರ್ತಿ ಬ್ಯಾಂಕುಗಳು ಅಧಿಕೃತವಾಗಿ ಏಪ್ರಿಲ್ 1, 2017ರಿಂದ ಜಾರಿಗೆ ಬರುವಂತೆ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ವಿಲೀನಗೊಳ್ಳಲಿದೆ.
ಎಸ್ಬಿಐ ಜೊತೆ ವಿಲೀನಗೊಳ್ಳುತ್ತಿರುವ ಐದು ಬ್ಯಾಂಕುಗಳ ಪೈಕಿ ನಾಲ್ಕನೇ ಕೃಷ್ಣರಾಜ ಒಡೆಯರ್ ಕಾಲದಲ್ಲಿ (02.10.1913) ಸ್ಥಾಪಿತಗೊಂಡ ಸರ್ ಎಂ ವಿಶ್ವೇಶರಯ್ಯನವರ ಕನಸಿನ ಕೂಸು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಅಥವಾ ಮೈಸೂರು ಬ್ಯಾಂಕು ಕೂಡಾ ಒಂದು. ಕರ್ನಾಟಕದ ವ್ಯಾಪ್ತಿಯಲ್ಲಿ ಅತಿಹೆಚ್ಚು ಶಾಖೆಗಳನ್ನು ಹೊಂದಿರುವ ರಾಷ್ಟ್ರೀಕತ ಬ್ಯಾಂಕ್ ಎಂದರೆ ಅದು 'ನಮ್ಮ' ಮೈಸೂರು ಬ್ಯಾಂಕ್. (ಮಾರ್ಚ್ 31ರಂದು ಇತಿಹಾಸದ ಪುಟ ಸೇರಲಿದೆ ಮೈಸೂರು ಬ್ಯಾಂಕ್)
ಕನ್ನಡಿಗರ ಪ್ರೀತಿಯ 'ಮೈಸೂರು ಬ್ಯಾಂಕ್' ಇತಿಹಾಸದ ಪುಟಕ್ಕೆ ಸೇರುತ್ತಿರುವ ಈ ಸಮಯದಲ್ಲಿ, ಎಸ್ಬಿಎಂ ನಲ್ಲಿ ಖಾತೆ ಹೊಂದಿರುವ ಗ್ರಾಹಕರು ಅನುಸರಿಸಬೇಕಾದ ಕೆಲವೊಂದು ನಿಯಮ/ಕೋರಿಕೆಗಳನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಕಟಿಸಿದೆ.
ಜೊತೆಗೆ ಈ ವಿಲೀನ ಪ್ರಕ್ರಿಯೆ ಸರಿದಾರಿಗೆ ತರಲು ಎರಡು ತಿಂಗಳು ಸಮಯಾವಕಾಶವನ್ನು ಗ್ರಾಹಕರಲ್ಲಿ ಕೋರಿದೆ. ಭಾರತೀಯ ಸ್ಟೇಟ್ ಬ್ಯಾಂಕ್ ಹೊರಡಿಸಿದ ಮಹತ್ವದ ಪ್ರಕಟಣೆ ಇಂತಿದೆ:
ಎಸ್ಬಿಐಗೆ ನಿಮಗೆ ಸ್ವಾಗತ. ದೇಶದಲ್ಲಿ 23,500 ಶಾಖೆ, 55,000 ಎಟಿಎಂಗಳನ್ನು ಹೊಂದಿರುವ ನಾವು, ಎಲ್ಲಿ ಬೇಕಾದಲ್ಲಿ,ಯಾವ ಸಮಯದಲ್ಲಾದರೂ ಬ್ಯಾಕಿಂಗ್ ವ್ಯವಸ್ಥೆಯನ್ನು ನಿಮಗೆ ನೀಡುವ ಭರವಸೆಯನ್ನು ನೀಡುತ್ತೇವೆ.
ಈ ವಿಲೀನ ಪ್ರಕ್ರಿಯೆ ಸರಿದಾರಿಗೆ ಬರಲು ಎರಡು ತಿಂಗಳು ಬೇಕಾಗಬಹುದು ( 01.04.2017 ರಿಂದ 31.05.2017). ಮೈಸೂರು ಬ್ಯಾಂಕ್ ಮತ್ತು ವಿಲೀನಗೊಳ್ಳುತ್ತಿರುವ ಇತರ ಸಹವರ್ತಿ ಬ್ಯಾಂಕುಗಳಲ್ಲಿ ಅಕೌಂಟ್ ಹೊಂದಿರುವ ಗ್ರಾಹಕರು ಕೆಲವೊಂದು ನಿಯಮಗಳನ್ನು ಪಾಲಿಸಲು ಕೋರಲಾಗಿದೆ. ಮುಂದೆ ಓದಿ..

ಹಳೇ ಶಾಖೆಯಲ್ಲೇ ವ್ಯವಹಾರ ಮುಂದುವರಿಸಿ
ಎಸ್ಬಿಎಂ ಮತ್ತು ಇತರ ನಾಲ್ಕು (ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೋರ್, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ಜೈಪುರ, ಬಿಕನೀರ್) ಸಹವರ್ತಿ ಬ್ಯಾಂಕುಗಳಲ್ಲಿ ಖಾತೆ ಹೊಂದಿರುವ ಗ್ರಾಹಕರು ತಮ್ಮ ಹಳೇ ಶಾಖೆಯಲ್ಲಿಯೇ ಸಿಡಿಎಂ, ಕ್ಲಿಯರಿಂಗ್ ಚೆಕ್, ಇತರ ಯಾವುದೇ ಬ್ಯಾಂಕಿಂಗ್ ವ್ಯವಹಾರಗಳನ್ನು ಮುಂದುವರಿಸಬಹುದಾಗಿದೆ.

ಹಣ ವರ್ಗಾವಣೆ ಶುಲ್ಕ ರಹಿತ
ಎಸ್ಬಿಐ ಮತ್ತು ಇತರ ಐದು ಸಹವರ್ತಿ ಬ್ಯಾಂಕುಗಳ ನಡುವೆ ಹಣ ವರ್ಗಾವಣೆ ಮತ್ತು ಪಾವತಿಗಳು ಶುಲ್ಕ ರಹಿತವಾಗಿ ಮಾಡಲಾಗುವುದು. ತಮ್ಮ ಈಗಿನ ಶಾಖೆಯಿಂದಲೇ ಸರಕಾರೀ ಪಾವತಿಗಳು ಮತ್ತು ಎನ್ಪಿಎಸ್ (NPS) ದೇಣಿಗೆಯನ್ನು ವರ್ಗಾಯಿಸಿಕೊಳ್ಳಬಹುದು.

ಹಳೇ ಚೆಕ್ ಪುಸ್ತಕವನ್ನೇ ಉಪಯೋಗಿಸಿಕೊಳ್ಳಿ
ಎಸ್ಬಿಐನಿಂದ ಹೊಸ ಚೆಕ್ ಪುಸ್ತಕ ಬರುವ ತನಕ, ಗ್ರಾಹಕರು ಈಗ ತಮ್ಮಲ್ಲಿರುವ ಹಳೇ ಚೆಕ್ ಪುಸ್ತಕವನ್ನೇ ಉಪಯೋಗಿಸಿಕೊಳ್ಳಬಹುದು. ಒಂದು ವೇಳೆ ಈಗಲೇ ಚೆಕ್ ಪುಸ್ತಕ ಖಾಲಿಯಾಗಿದ್ದ ಪಕ್ಷದಲ್ಲಿ ತಮ್ಮ ಶಾಖೆಯಿಂದ ಚೆಕ್ ಲೀಫ್ ಪಡೆದುಕೊಳ್ಳಬಹುದು.

ಹಳೇ ಪಾಸ್ವರ್ಡ್ ಮೂಲಕ ಇಂಟರ್ನೆಟ್ ವ್ಯವಹಾರ
ಗ್ರಾಹಕರು ತಮ್ಮ ಈಗಿನ ಪಾಸ್ವರ್ಡ್ ಬಳಸಿಕೊಂಡು ಅಂತರ್ಜಾಲದ ಮೂಲಕ ಇಂಟರ್ನೆಟ್ ವ್ಯವಹಾರ ಮುಂದುವರಿಸಬಹುದು. ಜೊತೆಗೆ ವಿದೇಶೀ ವಿನಿಮಯ (FOREX) ವ್ಯವಹಾರವನ್ನು ಈಗಿನ ಖಾತೆಯಿಂದಲೇ ಮುಂದುವರಿಸಬಹುದು.

ಡೆಪಾಸಿಟ್, ಅಡ್ವಾನ್ಸ್ ಹೊಸ ನಿಯಮ ಈ ಲಿಂಕ್ ಮೂಲಕ ಪಡೆದುಕೊಳ್ಳಬಹುದು
ಠೇವಣಿ ಮತ್ತು ಮುಂಗಡ ವಿಭಾಗದಲ್ಲಿ ಎಸ್ಬಿಐ ಹೊಸ ಸೇವಾ ಶುಲ್ಕ ಮತ್ತು ಬ್ಯಾಂಕಿಂಗ್ ಉತ್ಪನ್ನಗಳನ್ನು ಪ್ರಕಟಿಸುತ್ತಿದೆ. ಅದರ ವಿವರವನ್ನು ಈ ಲಿಂಕ್ ನಿಂದ ಪಡೆದುಕೊಳ್ಳಬಹುದು.

ಆರ್ಟಿಜಿಎಸ್, ನೆಫ್ಟ್ ಮುಂತಾದ ಸೇವೆ
CSP( ಕಾರ್ಪೋರೇಟ್ ಸ್ಯಾಲರಿ ಪ್ಯಾಕೇಜ್) ನಲ್ಲಿ ಶೂನ್ಯ ಉಳಿತಾಯ ಖಾತೆ, ವಾರ್ಷಿಕ ಶುಲ್ಕರಹಿತ ಉಚಿತ ಡೆಬಿಟ್ ಕಾರ್ಡ್, ಉಚಿತ ಡ್ರಾಫ್ಟ್, ಎಸ್ಎಂಎಸ್, ನೆಫ್ಟ್, ಆರ್ಟಿಜಿಎಸ್ ಮುಂತಾದ ಸೇವೆಗಳು ಈಗಿರುವ ಹಾಗೇ ಮುಂದುವರಿಯಲಿದೆ.

ಟೋಲ್ ಫ್ರೀ ನಂಬರ್ ಸಂಪರ್ಕಿಸಿ
ಗ್ರಾಹಕರಿಗೆ ಯಾವುದೇ ಸಂದೇಹ ಅಥವಾ ವಿಚಾರಣೆ ಇದ್ದಲ್ಲಿ ಟೋಲ್ ಫ್ರೀ ಸಂಖ್ಯೆಗೆ ಕರೆಮಾಡಬಹುದು. ಸಂಪರ್ಕ್ ಸಂಖ್ಯೆ ಇಂತಿದೆ. 1800-180-6005, 1800-4125-1825, 1800-425-2244, 1800-180-2010.












Click it and Unblock the Notifications