'ಅವರನ್ನ ಸಿಎಂ ಮಾಡಲು ಮಲ್ಲಿಕಾರ್ಜುನ್ ಖರ್ಗೆಯೇ ಸರ್ಕಾರ ಬೀಳಿಸ್ತಾರೆ'
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಜೋರಾಗಿದೆ. ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಎಂದು ಹೇಳಿಕೊಳ್ಳುತ್ತಿದ್ದರೆ, ಇದೇ ವರ್ಷ ಸಿಎಂ ಬದಲಾಗುತ್ತಾರೆ ಎಂದು ಕೂಡ ಹೇಳಲಾಗುತ್ತಿದೆ. ಸಿಎಂ ಕುರ್ಚಿಗೆ ಡಿಕೆ ಶಿವಕುಮಾರ್ ಪ್ರಬಲ ಆಕಾಂಕ್ಷಿಯಾಗಿದ್ದರೆ, ಇನ್ನೂ ಹಲವು ನಾಯಕರು ಇದೇ ರೇಸ್‌ನಲ್ಲಿದ್ದಾರೆ. ಎರಡು ದಿನಗಳ ಹಿಂದಷ್ಟೇ ರಾಜ್ಯದಲ್ಲಿ ಸರ್ಕಾರ ಬೀಳಿಸುವ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ಗೆ ಎಚ್ಚರಿಕೆ ನೀಡಿದ್ದಾರೆ. ಆದರೆ, ಇದೀಗ ಮಲ್ಲಿಕಾರ್ಜುನ್ ಖರ್ಗೆ ಅವರೇ ರಾಜ್ಯದಲ್ಲಿ ಸರ್ಕಾರವನ್ನು ಬೀಳಿಸುತ್ತಾರೆ ಎಂದು ಬಿಜೆಪಿ ನಾಯಕ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಆ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಲು ಖರ್ಗೆ ಅವರೇ ಸರ್ಕಾರ ಬೀಳಿಸ್ತಾರೆ ಎಂದು ಹೇಳಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಸಿಎಂ ಕುರ್ಚಿಗಾಗಿ ಫೈಟ್ ಮಾಡುತ್ತಿದ್ದಾರೆ. ಇದರ ನಡುವೆಯೇ ಮುಖ್ಯಮಂತ್ರಿ ಸ್ಥಾನಕ್ಕೆ ಮೂರನೇ ವ್ಯಕ್ತಿಯ ಪ್ರವೇಶವಾಗಲಿದೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರೇ ಸರ್ಕಾರವನ್ನು ಬೀಳಿಸುತ್ತಾರೆ. ತಮ್ಮ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನ ಮುಖ್ಯಮಂತ್ರಿ ಮಾಡಲು ಮಲ್ಲಿಕಾರ್ಜುನ್ ಖರ್ಗೆ ಅವರೇ ಈ ಸರ್ಕಾರವನ್ನು ಬೀಳಿಸ್ತಾರೆ ಎಂದು ಬಿಜೆಪಿ ಸಂಸದ ಬಿ.ಶ್ರೀರಾಮುಲು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮಲ್ಲಿಕಾರ್ಜುನ್ ಖರ್ಗೆ ಅವರು ಮೊನ್ನೆಯಷ್ಟೇ ಸರ್ಕಾರ ಬೀಳುವ ಬಗ್ಗೆ ಸ್ವತಃ ಮಾತನಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬೀಳಿಸುತ್ತಾರೆ ಎಂದಿದ್ದಾರೆ. ಈ ಸರ್ಕಾರ ಬೀಳಿಸಲು ಮೋದಿ ಅವರಿಗೇನು ಕರ್ಮ? ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಕುರ್ಚಿ ಕಾದಾಟದಲ್ಲಿ ತಮ್ಮ ಮಗ ಪ್ರಿಯಾಂಕ್ ಅವರನ್ನು ಸಿಎಂ ಮಾಡಲು ಮಲ್ಲಿಕಾರ್ಜುನ್ ಖರ್ಗೆ ಅವರೇ ದೊಡ್ಡ ಪ್ಲ್ಯಾನ್ ಮಾಡಿದ್ದಾರೆ ಎಂದು ಶ್ರೀರಾಮುಲು ಆರೋಪಿಸಿದ್ದಾರೆ.
ಖರ್ಗೆ ಹಾಗೂ ಪ್ರಿಯಾಂಕ್ ಸೇರಿಕೊಂಡು ರಿಪಬ್ಲಿಕ್ ಆಫ್ ಕಲಬುರಗಿ ಮಾಡಿದ್ದಾರೆ. ನಮ್ಮ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಅಲ್ಲಿಗೆ ಭೇಟಿ ಕೊಟ್ಟರೆ, ಕಾಂಗ್ರೆಸ್ ಕಾರ್ಯಕರ್ತರು ದಬ್ಬಾಳಿಕೆ ತೋರುತ್ತಾರೆ. ಇದಕ್ಕೆಲ್ಲ ತಕ್ಕ ಉತ್ತರವನ್ನು ನೀಡ್ತೇವೆ. ಅಲ್ಲದೆ ಕಾಂಗ್ರೆಸ್‌ನವರು ಜಾತಿಗಣತಿ ಬಗ್ಗೆ ನಿರ್ಧಾರ ಮಾಡುವುದಿಲ್ಲ ಎಂದು ನಮಗೆ ಮೊದಲೇ ಗೊತ್ತಿತ್ತು. ಹೀಗಾಗಿ ಅವರು ಪಲಾಯನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮನಸ್ತಾಪ ಮರೆತು ಒಗ್ಗಟ್ಟಿನಿಂದ ಇರಿ: ಖರ್ಗೆ
ಇತ್ತೀಚೆಗೆ ಕಲಬುರಗಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮಲ್ಲಿಕಾರ್ಜುನ್ ಖರ್ಗೆ ಅವರು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಗೆ ಕಿವಿಮಾತು ಹೇಳಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬೀಳಿಸಲು ದೊಡ್ಡ ಪ್ಲ್ಯಾನ್ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ನಿಮ್ಮ ಸರ್ಕಾರವನ್ನು ಬೀಳಿಸ್ತಾರೆ. ನಿಮ್ಮಿಬ್ಬರ ನಡುವೆ ಏನೇ ಮನಸ್ತಾಪ ಇದ್ದರೂ ಒಗ್ಗಟ್ಟಾಗಿರಿ, ಹುಷಾರಾಗಿರಿ ಎಂದು ಎಚ್ಚರಿಕೆ ನೀಡಿದ್ದರು. ಇದೀಗ ಬಿಜೆಪಿ ಶ್ರೀರಾಮುಲು ಅವರು ಖರ್ಗೆ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ.












Click it and Unblock the Notifications