ಈ ಮಠದ ಸ್ವಾಮೀಜಿಗೆ ಹೃದಯಾಘಾತ, ತುರ್ತು ಚಿಕಿತ್ಸೆ: ಆಸ್ಪತ್ರೆಯಲ್ಲೇ ಉತ್ತರಾಧಿಕಾರಿ ನೇಮಕ
ಹುಬ್ಬಳ್ಳಿ, ನವೆಂಬರ್ 16: ನಾಡಿನ ಪ್ರತಿಷ್ಠಿತ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿರುವ ಹುಬ್ಬಳ್ಳಿ ತಾಲೂಕಿನ ಮಂಟೂರು ಶ್ರೀ ಅಡವಿ ಸಿದ್ಧೇಶ್ವರ ಹಾಗೂ ಸೊರಬ ತಾಲೂಕಿನ ಗೇರಕೊಪ್ಪ ಇಂಧುದರೇಶ್ವರ ಮಠದ ಪೀಠಾಪತಿ ಶಿವಲಿಂಗೇಶ್ವರ ಶ್ರೀಗಳ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ನಂತರ ಮಠಕ್ಕೆ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸದ್ಯ ಭಕ್ತಗಣ ಶ್ರೀಗಳು ಗುಣಮುಖರಾಗಲೆಂದು ಪ್ರಾರ್ಥಿಸುತ್ತಿದ್ದಾರೆ.
ಹೌದು, ಹುಬ್ಬಳ್ಳಿ ತಾಲೂಕಿನ ಮಂಟೂರು ಶ್ರೀ ಅಡವಿ ಸಿದ್ಧೇಶ್ವರ ಹಾಗೂ ಸೊರಬ ತಾಲೂಕಿನ ಗೇರಕೊಪ್ಪ ಇಂಧುದರೇಶ್ವರ ಮಠದ ಪೀಠಾಪತಿ ಶಿವಲಿಂಗೇಶ್ವರ ಶ್ರೀಗಳಿಗೆ ಇತ್ತೀಚೆಗೆ ಹೃದಯಾಘಾತವಾಗಿದೆ. ಐದು ದಿನಗಳಿಂದ ಅವರು ನಗರದ ತತ್ವದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ಕೊಡಿಸಲಾಗುತ್ತಿದೆ.

ಉತ್ತರಾಕಾರಿಯಾಗಿ 'ಇಂದುಧರ ಶ್ರೀ' ನೇಮಕ
ಇದರ ಮಧ್ಯೆ ಆಸ್ಪತ್ರೆ ಆವರಣದಲ್ಲಿ ಭಕ್ತರ ಕೋರಿಕೆ ಮೇರೆಗೆ ಹಾಗೂ ಸ್ವಾಮೀಜಿಯವರ ಸಮ್ಮುಖದಲ್ಲಿ ಮಂತ್ರ ಪಠಣದೊಂದಿಗೆ ಸಾಂಕೇತಿಕವಾಗಿ ಅಡವಿಸಿದ್ಧೇಶ್ವರ ಮಠದ ಉತ್ತರಾಕಾರಿಯಾಗಿ 'ಇಂಧುಧರ ಶ್ರೀ'ಗಳನ್ನು ಉತ್ತರಾಧಿಕಾರಿ ನೇಮಕ ಮಾಡಲಾಯಿತು.
ಎರಡು ಮಠಕ್ಕೆ ಪೂರ್ವ ನಿಯೋಜಿತ ಇಂಧುದರ ದೇವರನ್ನು ಬೊಮ್ಮನಹಳ್ಳಿ ಶಿವಯೋಗೇಶ್ವರ ಶ್ರೀ ಹಾಗೂ ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ ಸಮ್ಮುಖದಲ್ಲಿ ಘೋಷಣೆ ಮಾಡಲಾಯಿತು. ಭಕ್ತರು ಆತಂಕಗೊಳ್ಳದಿರಲಿ ಎಂಬ ಉದ್ದೇಶದಿಂದ ಶಿವಲಿಂಗೇಶ್ವರ ಸ್ವಾಮೀಜಿ ಅವರ ಇಚ್ಛೆಯಂತೆ ಉತ್ತರಾಧಿಕಾರಿ ನೇಮಕ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಶ್ರೀಗಳಿಗೆ ಚಿಕಿತ್ಸೆ ಮುಂದುವರಿದಿದೆ. ಇದರಿಂದ ಭಕ್ತ ಸಮೂಹ ಆತಂಕಕ್ಕೆ ಒಳಗಾಗಿದ್ದು, ಮುಂದಿನ ಮಠದ ಉತ್ತರಾಕಾರಿ ಪ್ರಶ್ನೆ ಎದುರಾಗಿತ್ತು. ಈ ಮೊದಲೇ ಶಿವಲಿಂಗೇಶ್ವರ ಶ್ರೀಗಳು ನಿರ್ಧರಿಸಿದಂತೆ ಉತ್ತರಾಕಾರಿಯನ್ನು ಘೋಷಣೆ ಮಾಡಲಾಗಿದೆ ಎಂದು ಮಠದ ಭಕ್ತರು ಮಾಹಿತಿ ನೀಡಿದರು.
ಇಂದುಧರ ಸ್ವಾಮೀಜಿ ಪ್ರತಿಕ್ರಿಯೆ
ಮಠದ ಉತ್ತರಾಧಿಕಾರಿಯಾದ ನಂತರ ಮಾತನಾಡಿದ ಇಂದುಧರ ಸ್ವಾಮೀಜಿ, ನಮ್ಮ ಹಿರಿಯ ಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿದೆ. ಅವರ ಶಿಷ್ಯ ಬಳಗದಲ್ಲಿ ನಾನು ಇದ್ದ ಕಾರಣ ನಮ್ಮ ಪೀಠಕ್ಕೆ ಆಸ್ಪತ್ರೆಯಲ್ಲಿಯೇ ಉತ್ತರಾಧಿಕಾರಿ ನೇಮಕ ಮಾಡಿದರು ಎಂದರು.
ಹುಬ್ಬಳ್ಳಿ ಸುತ್ತಮುತ್ತಲಿನ ಗ್ರಾಮದ ಭಕ್ತರು ಆಸ್ಪತ್ರೆಗೆ ಬಂದು ಶಿವಲಿಂಗೇಶ್ವರ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸುತ್ತಿದ್ದಾರೆ. ಅಂಕಲಗಿ ಅಡವಿ ಸಿದ್ಧೇಶ್ವರ ಮಠದ ಅಮರಸಿದ್ಧೇಶ್ವರ ಸ್ವಾಮೀಜಿ ಹಾಗೂ ಮಂಟೂರು ಮತ್ತು ಬಮ್ಮಿಗಟ್ಟಿ, ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಗೇರಕೊಪ್ಪದ ಭಕ್ತರು ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ.












Click it and Unblock the Notifications