ಡಿಕೆ ಶಿವಕುಮಾರ್ ಹೊಸ ಹಗರಣ ಬಿಚ್ಚಿಟ್ಟ ಹಿರೇಮಠ
ಬೆಂಗಳೂರು, ಫೆ.11 : ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಇಂಧನ ಸಚಿವ ಡಿಕೆ ಶಿವಕುಮಾರ್ ವಿರುದ್ಧದ ತಮ್ಮ ಹೋರಾಟ ಮುಂದುವರೆಸಿದ್ದಾರೆ. ಮಂಗಳವಾರ ಡಿಕೆಶಿ ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರ ಸಂಘದ ಅವ್ಯವಹಾರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೊಸ ಆರೋಪಗಳನ್ನು ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಎಸ್.ಆರ್.ಹಿರೇಮಠ, ಬೆಂಗಳೂರಿನ ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ 100 ಕೋಟಿ ರು. ಅವ್ಯವಹಾರ ನಡೆದಿದ್ದು, ಇದರಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನೇರವಾಗಿ ಭಾಗಿಯಾಗಿದ್ದಾರೆ ಎಂದು ಗಂಭೀರ ಆರೋಪಮಾಡಿದರು. [ಡಿಕೆಶಿ ವಿರುದ್ಧ ದಾಖಲೆ ನೀಡಿದ ಹಿರೇಮಠ]

ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಸಹಕಾರ ಸಚಿವರಾಗಿದ್ದ ಡಿಕೆ ಶಿವಕುಮಾರ್, ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ನಡೆದ ಅವ್ಯವಹಾರಕ್ಕೆ ಬೆಂಬಲ ನೀಡಿದ್ದಾರೆ ಎಂದು ಹಿರೇಮಠ ಆರೋಪಿಸಿದ್ದಾರೆ. ಕಾನೂನು ಬಾಹಿರವಾಗಿ ಗೃಹ ನಿರ್ಮಾಣ ಸಹಕಾರ ಸಂಘದ ಜಂಟಿ ಅಭಿವೃದ್ಧಿಗೆ ಖಾಸಗಿ ಬಿಲ್ಡರ್‌ಗಳ ಜತೆ ಕೈ ಜೋಡಿಸಿದ್ದಾರೆ ಮತ್ತು ಸಂಘದ ಆಸ್ತಿಯನ್ನು ಅಡಮಾನ ಇಟ್ಟು ಸಾಲ ಪಡೆಯಲು ಶಿವಕುಮಾರ್ ಅನುಮತಿ ನೀಡಿದ್ದಾರೆ ಎಂಬುದು ಪ್ರಮಖ ಆರೋಪ. [ಡಿಕೆಶಿ ವಿರುದ್ಧದ ಚಾರ್ಜ್ ಶೀಟ್ ಸಿಎಂ ಕೈಗೆ]
ಅವ್ಯವಹಾರ ಪ್ರಕರಣದಿಂದ ಡಿಕೆ ಶಿವಕುಮಾರ್ ಅವರು ಕೋಟ್ಯಾಂತರ ರೂ. ಲಾಭ ಮಾಡಿಕೊಂಡಿದ್ದಾರೆ. ಗೃಹ ನಿರ್ಮಾಣ ಸಂಘದವರು ಮೂರನೇ ವ್ಯಕ್ತಿಗಳಿಗೆ ಸಗಟು ನಿವೇಶನ ಹಂಚಿಕೆ ಮಾಡಿದ್ದು ಇದಕ್ಕೆ ಸಹ ಡಿಕೆಶಿ ಅನುಮತಿ ನೀಡಿದ್ದಾರೆ. ಡಿಕೆಶಿ ಮತ್ತು ಎಸ್.ಎಂ.ಕೃಷ್ಣ ಈ ಅವ್ಯವಹಾರಕ್ಕೆ ಬೆಂಬಲ ನೀಡಿದ್ದಾರೆ ಎಂದು ಹಿರೇಮಠ ಆರೋಪಿಸಿದ್ದಾರೆ.[ಹಿರೇಮಠ ಅವರಿಗೆ ಒನ್ ಇಂಡಿಯಾ ಪ್ರಶಸ್ತಿ]
ಗೃಹ ನಿರ್ಮಾಣ ಸಂಘದ ಅಕ್ರಮಗಳ ಕುರಿತು ಸರ್ಕಾರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿರುವ ಎಸ್.ಆರ್.ಹಿರೇಮಠ, ಡಿಕೆ ಶಿವಕುಮಾರ್ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದ್ದಾರೆ.











Click it and Unblock the Notifications