Train: ಬೈಂದೂರು, ಉತ್ತರ ಕನ್ನಡ ಮತದಾನಕ್ಕೆ ಬರುವವರಿಗೆ ಸಿಹಿ ಸುದ್ದಿ: ಇಲ್ಲಿದೆ ವಿಶೇಷ ರೈಲಿನ ವಿವರ
ಉಡುಪಿ, ಮೇ 05: ರಾಜ್ಯದಲ್ಲಿ ಮೇ 7ರಂದು ಎರಡನೇ ಹಂತದ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಮೈಸೂರಿನಿಂದ ಬೆಂಗಳೂರು ಮೂಲಕ ಕುಂದಾಪುರ, ಬೈಂದೂರು, ಕಾರವಾರಕ್ಕೆ ಮೇ 6ರಂದು ನೈಋತ್ಯ ರೈಲ್ವೇ ವಿಶೇಷ ರೈಲಿನ ವ್ಯವಸ್ಥೆ ಕಲ್ಪಿಸಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ಹಾಗೂ ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಚುನಾವಣೆಯ ಸಲುವಾಗಿ ಮತದಾನಕ್ಕೆ ಬರುವವರಿಗಾಗಿ ಈ ವಿಶೇಷ ರೈಲಿನ ಸೇವೆಯನ್ನು ಒದಗಿಸಲಾಗಿದೆ.

ಮೈಸೂರಿನಿಂದ ಬೆಂಗಳೂರಿಗೆ, ಹಾಸನ, ಸಕಲೇಶಪುರ, ಪುತ್ತೂರು, ಮಂಗಳೂರು (ಪಡೀಲ್), ಮೂಲ್ಕಿ ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರ್ಡೇಶ್ವರ, ಕಾರವಾರದಲ್ಲಿ ನಿಲುಗಡೆ ನೀಡಲಾಗಿದೆ. ಬೈಂದೂರು ಹಾಗೂ ಉತ್ತರ ಕನ್ನಡ ಭಾಗದ ಅನೇಕ ಮಂದಿ ಬೆಂಗಳೂರು, ಮೈಸೂರು ಮತ್ತಿತರ ಕಡೆಗಳಲ್ಲಿ ಉದ್ಯೋಗದಲ್ಲಿರುವುದರಿಂದ ಅವರಿಗೆ ಮತದಾನದ ದಿನ ಊರಿಗೆ ಬರಲು ಅನುಕೂಲವಾಗಲಿದೆ.
ಈ ವಿಶೇಷ ರೈಲಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೊರಡಲಿರುವ ರೈಲು ಈಗಾಗಲೇ ಬಹುತೇಕ ಭರ್ತಿಯಾಗಿದೆ. ಆ ಕಾರಣಕ್ಕಾಗಿ ಇನ್ನೊಂದು ವಿಶೇಷ ರೈಲನ್ನು ಒದಗಿಸಲಿ ಎನ್ನುವುದು ಪ್ರಯಾಣಿಕರ ಬೇಡಿಕೆಯಾಗಿದೆ.












Click it and Unblock the Notifications