ಕರ್ನಾಟಕ ಸಂಪುಟ ವಿಸ್ತರಣೆ ಕುರಿತು ದೆಹಲಿಯಲ್ಲಿ ವಿಶೇಷ ಸಭೆ: ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು, ಏಪ್ರಿಲ್ 18: ರಾಜ್ಯದ ಸಂಪುಟ ವಿಸ್ತರಣೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ನವದೆಹಲಿಯಲ್ಲಿ ವಿಶೇಷ ಸಭೆ ಕರೆಯುವುದಾಗಿ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹೊಸಪೇಟೆಯಲ್ಲಿ ನಡೆದ ಎರಡು ದಿನಗಳ ಬಿಜೆಪಿ ಕಾರ್ಯಕಾರಿಣಿಯಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಯಿತೇ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ದೆಹಲಿಯಲ್ಲಿ ಸಭೆ ನಡೆಸಿದ ಬಳಿಕ ನನ್ನನ್ನು ಬರುವಂತೆ ನಡ್ಡಾ ಅವರು ತಮಗೆ ತಿಳಿಸಿದ್ದಾರೆ. ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಬಗ್ಗೆ ಅಲ್ಲಿಯೇ ತೀರ್ಮಾನವಾಗಲಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿ ಘಟನೆ
ಹುಬ್ಬಳ್ಳಿ ಘಟನೆಗೆ ಸಂಬಂಧಿಸಿದ ಎಲ್ಲರನ್ನೂ ಬಂಧಿಸಲಾಗಿದೆ. ಅದರ ಹಿಂದಿರುವ ನಾಯಕರ ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಕಾನೂನಿನ ಕ್ರಮ ಜರುಗಿಸಲಾಗುವುದು ಎಂದರು.
ಪಿ.ಎಸ್.ಐ ಪರೀಕ್ಷೆಯಲ್ಲಿ ಅಕ್ರಮವಾಗಿರುವ ಕುರಿತು ಗೃಹ ಸಚಿವರ ಗಮನಕ್ಕೆ ಬಂದ ಕೂಡಲೇ ನಿಷ್ಪಕ್ಷಪಾತ ತನಿಖೆಯಾಗಲು ಸಿಐಡಿಗೆ ವಹಿಸಲಾಗಿದೆ. ಪರೀಕ್ಷೆಯಾಗಿರುವ ಕೇಂದ್ರದಲ್ಲಿ ಸಮಸ್ಯೆಯಾಗಿದ್ದರೆ, ಅಧೀಕ್ಷಕರ ಮಟ್ಟದಲ್ಲಿ ಸಮಸ್ಯೆ ಅಥವಾ ಮೇಲಾಧಿಕಾರಿಗಳ ಸಮಸ್ಯೆ ಇದ್ದರೆ ಸಮಗ್ರವಾಗಿ ತನಿಖೆ ಮಾಡಲು ಆದೇಶ ನೀಡಲಾಗಿದೆ. ಬೇರೆ ಪಕ್ಷದ ಸರ್ಕಾರವಾಗಿದ್ದರೆ ಮುಚ್ಚಿಹಾಕಲು ಪ್ರಯತ್ನ ಮಾಡುತ್ತಿದ್ದರು. ನಾವು ಸಿಐಡಿಗೆ ಮುಕ್ತ ಅವಕಾಶ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ. ಯಾರೇ ತಪ್ಪಿ ತಪ್ಪಿತಸ್ಥರಿದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದರು.
ಪರೀಕ್ಷೆಗಳನ್ನು ಪುನಃ ಕೈಗೊಳ್ಳಲು ವಿದ್ಯಾರ್ಥಿಗಳು ಒತ್ತಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಸಿಐಡಿ ಸಮಗ್ರ ವರದಿ ನೀಡಿದ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.












Click it and Unblock the Notifications