ಮಾಧ್ಯಮದ ಮೇಲೆ ಸ್ಪೀಕರ್ ರಮೇಶ್ ಕುಮಾರ್ ಕೆಂಡಾಮಂಡಲ
Recommended Video
ಬೆಂಗಳೂರು, ಜುಲೈ 06 : ಹದಿಮೂರು ಶಾಸಕರು ರಾಜೀನಾಮೆ ನೀಡಲು ಬರುತ್ತಿದ್ದಾರೆ ಎಂಬ ಸುಳಿವು ದೊರೆಯುತ್ತಿದ್ದಂತೆ ವಿಧಾನಸೌಧದ ತಮ್ಮ ಕಚೇರಿಯಿಂದ ಹೊರನಡೆದಿದ್ದ ಸ್ಪೀಕರ್ ರಮೇಶ್ ಕುಮಾರ್ ಅವರು ಮಾಧ್ಯಮಗಳ ಮೇಲೆ ಕೆಂಡಾಮಂಡಲರಾಗಿದ್ದಾರೆ.
ಇದಕ್ಕೆ ಕಾರಣವೂ ಇದೆ. ಮೈತ್ರಿ ಸರಕಾರ ಅಲುಗಾಡುವಂಥ ಬೆಳವಣಿಗೆಗಳು ನಡೆಯುತ್ತಿದ್ದರೂ, ಸರಕಾರದ ಪರ ವಹಿಸಿಕೊಂಡು ಮಾತನಾಡುತ್ತಿದ್ದ ಅವರು, ರಾಜೀನಾಮೆ ನೀಡುತ್ತಿರುವುದು ಖಚಿತವಾಗುತ್ತಿದ್ದಂತೆ ಸರಕಾರದ ಪರ ವಹಿಸಿಕೊಂಡು ಮಾತನಾಡದಂತಾಗಿದೆ. ಅಲ್ಲದೆ, ಮಾಧ್ಯಮದವರು ಕೂಡ ಅವರನ್ನು ಆಸ್ಪತ್ರೆಗೂ ಬೆನ್ನತ್ತಿಕೊಂಡು ಹೋಗಿದ್ದು, ಅವರು ರೇಗುವಂತೆ ಮಾಡಿದೆ.
"ಮನುಷ್ಯರಾ ನೀವು? ನಿಮಗೆ ನಾಚಿಕೆಯಿಲ್ಲವೆ? ನನ್ನ ಸಂಬಂಧಿಯೊಬ್ಬರು ಇಲ್ಲಿ (ಜಯದೇವ) ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಿಮಗೆ ಮನುಷ್ಯತ್ವವೇ ಇಲ್ಲವೆ? ಗೆಟ್ ಔಟ್ ಫ್ರಂ ಹಿಯರ್" ಎಂದು ಆಂಗ್ಲ ಭಾಷೆಯಲ್ಲಿ ರಮೇಶ್ ಕುಮಾರ್ ಅವರು ಮಾಧ್ಯಮದವರ ಮೇಲೆ ರೇಗಾಡಿದ್ದಾರೆ.

ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರು ತಮ್ಮ ಸಂಬಂಧಿಯನ್ನು ಭೇಟಿಯಾಗಲೆಂದು ಜಯದೇವ ಆಸ್ಪತ್ರೆಗೆ ತುರ್ತಾಗಿ ತೆರಳಿದ ಸಂದರ್ಭದಲ್ಲಿ ರಮೇಶ್ ಕುಮಾರ್ ಅವರ ಕಾರ್ಯದರ್ಶಿಗೆ 13 ಶಾಸಕರು ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರು ರಾಜೀನಾಮೆ ನೀಡಿದ್ದ ನಂತರ ಬಂಡಾಯ ಶಾಸಕರ ನೇತೃತ್ವ ವಹಿಸಿದ್ದ ರಮೇಶ್ ಜಾರಕಿಹೊಳಿ ಅವರು ಕೂಡ ಕೈಬರಹದಲ್ಲಿ ಸಭಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದರು. ಆದರೆ, ಸರಿಯಾದ ರೀತಿಯಲ್ಲಿ ರಾಜೀನಾಮೆ ಪತ್ರ ಬಂದಿಲ್ಲ ಎಂದು ರಮೇಶ್ ಕುಮಾರ್ ಅವರು ಜಾರಕಿಹೊಳಿ ಅವರ ರಾಜೀನಾಮೆ ಪತ್ರವನ್ನು ತಿರಸ್ಕರಿಸಿದ್ದರು.
ರಮೇಶ್ ಕುಮಾರ್ ಅವರು ಕಾಂಗ್ರೆಸ್ ನಾಯಕರಾದರೂ, ಸದ್ಯದ ಪರಿಸ್ಥಿತಿ ಎಲ್ಲ ಕೈಮೀರಿದಂತಿದೆ. ಸಿದ್ದರಾಮಯ್ಯ ಅವರು ಕೂಡ ಕೈಚೆಲ್ಲಿ ಕುಳಿತಿದ್ದಾರೆ ಮತ್ತು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಮೈತ್ರಿ ಸರಕಾರದ ಟ್ರಬಲ್ ಶೂಟರ್ ಆಗಿದ್ದ ಡಿಕೆ ಶಿವಕುಮಾರ್ ಅವರು ಕೂಡ ಸರಕಾರ ಉಳಿಸಿಕೊಳ್ಳಲು ಯಾವುದೇ ಪ್ರಯತ್ನವನ್ನು ನಡೆಸಿದಂತೆ ಕಾಣಿಸುತ್ತಿಲ್ಲ.












Click it and Unblock the Notifications