ಸ್ಪೀಕರ್ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದ್ದಾರೆ: ಸಿದ್ದರಾಮಯ್ಯ
ಬೆಂಗಳೂರು, ಅಕ್ಟೋಬರ್ 10: ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸದನದ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, 'ರಾಜ್ಯದಲ್ಲಿ ಬರಗಾಲ, ನೆರೆ ಒಟ್ಟೊಟ್ಟಿಗೆ ಬಂದಿವೆ. ಏಳು ಲಕ್ಷ ಜನ ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ. 90 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ನಾಪತ್ತೆಯಾಗಿದ್ದಾರ. ರಾಜ್ಯದಲ್ಲಿ ಇಂತಹಾ ಬರ್ನಿಂಗ್ ವಿಚಾರಗಳಿವೆ ಆದರೆ ಕೇವಲ ಮೂರು ದಿನಕ್ಕೆ ಕಲಾಪ ಕರೆಯಲಾಗಿದೆ ಎಂದು ಅವರು ಹೇಳಿದರು.
ಇವತ್ತು ಶೂನ್ಯವೇಳೆ ಪ್ರಶ್ನೋತ್ತರ ಇಲ್ಲ, ನಾವು ನಿಲುವಳಿ ಕೊಟ್ಟು ಚರ್ಚೆಗೆ ಅವಕಾಶ ಕೋರಿದ್ದೇವೆ ಆದರೆ ಸ್ಪೀಕರ್ ಅವರು ನಮಗೆ ಅವಕಾಶ ನೀಡಿಲ್ಲ, ಬದಲಿಗೆ ಸರ್ಕಾರದ ಪರವಾಗಿ ವರ್ತಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಮುಖ್ಯವಾದ ವಿಷಯಗಳಿದ್ದರೆ ಚರ್ಚೆಗೆ ಅವಕಾಶ ಕೊಡಬೇಕು, ಒಂದು ಗಂಟೆ ಮೊದಲು ನೊಟೀಸ್ ನೀಡಿದ್ದರೂ ಚರ್ಚೆಗೆ ಅವಕಾಶ ಕೊಡಬೇಕಿತ್ತು, ನಾನು 9:30 ಕ್ಕೆ ನೊಟೀಸ್ ನೀಡಿದ್ದೇನೆ ಆದರೂ ಸಹ ನನಗೆ ಅವಕಾಶ ನೀಡಲಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ನಿಯಮ 74 ರ ಅಡಿಯಲ್ಲಿ ನಿಯಮದಡಿ ಚರ್ಚೆಗೆ ನಮಗೆ ಅವಕಾಶ ಕೊಡಬೇಕಿತ್ತು. ಆದರೆ ಸ್ಪೀಕರ್ ಅವರು ಸರ್ವಾಧಿಕಾರಿ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಚರ್ಚೆಯೇ ಇಲ್ಲ ಹಣಕಾಸು ಮಸೂದೆ ಅಂಗೀಕಾರ ಮಾಡಲಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ನಾವಿದನ್ನು ಖಂಡಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ನೆರೆ ವಿಷಯ ಚರ್ಚೆಗೆ ಒತ್ತಾಯ ಮಾಡಿದರು ಆದರೆ ಸ್ಪೀಕರ್ ಅವರು ಅದಕ್ಕೆ ಅವಕಾಶ ಕೊಡದೆ ವರದಿ ಮಂಡಿಸಲು ಹೇಳಿದರು. ವರದಿ ನಂತರವೂ ಚರ್ಚೆ ಆಗದೆ ಬಿಎಸಿ ಸಭೆಗೆ ತೆರಳಲಾಯಿತು. ಇದು ಸಿದ್ದರಾಮಯ್ಯ ಅವರನ್ನು ಕೆರಳಿಸಿತು.












Click it and Unblock the Notifications