ವಿಧಾನ ಪರಿಷತ್‌ನಲ್ಲಿದ್ದಾರಾ ಪುಡಾರಿಗಳು? ಹೊರಟ್ಟಿ ಶಾಕಿಂಗ್ ಹೇಳಿಕೆ
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಇಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಈಗ ವಿಧಾನ ಪರಿಷತ್ ಕಲಾಪಗಳು ಸರಿಯಾಗಿ ನಡೆಯುತ್ತಿಲ್ಲ. ರಾಜಕೀಯ ಪಕ್ಷಗಳು ಪುಡಾರಿಗಳನ್ನು ತಂದು ಪರಿಷತ್‌ನಲ್ಲಿ ಬಿಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ರಾಜಕೀಯ ಪುಡಾರಿಗಳು ಬಂದು ಕಲಾಪಗಳು ಸರಿಯಾಗಿ ನಡೆಯದ ಕಾರಣ ನಿರಾಶ್ರಿತರ ಆಶ್ರಯ ಕೇಂದ್ರ ಪರಿಸ್ಥಿತಿಯಲ್ಲಿವೆ ಎಂದಿದ್ದಾರೆ. ಮೊದಲು ಪರಿಷತ್ ಬೆಳಿಗ್ಗೆ 9.30ಕ್ಕೆ ಶುರುವಾಗಿ ರಾತ್ರಿ 8ಕ್ಕೆ ಪೂರ್ಣಗೊಳ್ಳುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ವಿಧಾನ ಪರಿಷತ್ ಗೌರವ ಕುಂದುತ್ತಿದೆ. ದೇಶದಲ್ಲಿ ಹಣದಿಂದ ಮತ ಪಡೆಯುವವರು ಹಾಗೂ ಹಣಕ್ಕಾಗಿ ಮತ ಹಾಕುವವರು ಇರುವವರೆಗೂ ಪ್ರಜಾಪ್ರಭುತ್ವ ಸರಿ ಹೋಗುವುದಿಲ್ಲ ಎಂದು ಹೊರಟ್ಟಿ ಹೇಳಿದ್ದಾರೆ.

ಸಾಮಾನ್ಯವಾಗಿ ರಾಜಕಾರಣದಲ್ಲಿ ಎಲ್ಲರಿಗೂ ಗಾಡ್‌ಫಾದರ್ ಅನ್ನೋರು ಇದ್ದೇ ಇರ್ತಾರೆ. ಆದರೆ ನನಗೆ ಯಾರೂ ಇಲ್ಲ, ನನ್ನ ಸ್ವಂತ ಪರಿಶ್ರಮದಿಂದ ನಾನು ರಾಜಕೀಯಕ್ಕೆ ಬಂದೆ. ಕಲಾಪದಲ್ಲಿ ಭಾಗಿಯಾದ ಎಲ್ಲ ಶಾಸಕರ ಬಗ್ಗೆಯೂ ನನಗೆ ಗೊತ್ತಿದೆ. ಅವರು ಏನೆಲ್ಲ ಮಾತನಾಡಿದ್ದಾರೆ ಎನ್ನುವುದನ್ನೂ ಕೇಳಿದ್ದೇನೆ. ಮೊದಲೆಲ್ಲ ಸದನ ನಡೆಯುತ್ತಿದ್ದಾಗ ಒಂದು ಸೂಜಿ ಬಿದ್ದರೂ ಶಬ್ಧ ಕೇಳುವಷ್ಟು ಪ್ರಶಾಂತ ವಾತಾವರಣ ಇರುತ್ತಿತ್ತು ಎಂದಿದ್ದಾರೆ.
ಈಗೆಲ್ಲ ಕಲಾಪಗಳು ಸರಿಯಾಗಿ ನಡೆಯುತ್ತಿಲ್ಲ. ಈಗ ಪ್ರತಿಯೊಂದಕ್ಕೂ ಸದನದ ಬಾವಿಗಿಳಿದು ಧಿಕ್ಕಾರ ಕೂಗುವುದು ಹೆಚ್ಚಾಗಿದೆ. ನಾವೆಲ್ಲ ಸದನಕ್ಕೆ ಓದಿಕೊಂಡು ಬರುತ್ತಿದ್ವಿ. ಈಗ ಪ್ರಶ್ನೆ ಕೇಳಿದ ಎರಡು ನಿಮಿಷಕ್ಕೆ ಸದಸ್ಯರು ಹೊರಕ್ಕೆ ಹೋಗ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪರಿಷತ್ ಅಂದ್ರೆ ಈಗ ಮುನಿಸಿಪಾಲಿಟಿ ಎಂಬಂತಾಗಿದೆ. ಈ ಬಗ್ಗೆ ನನಗೂ ನೋವಿದೆ. ರಾಜಕೀಯ ಪುಡಾರಿಗಳನ್ನು ತಂದು ಸುಮ್ಮನೆ ಪರಿಷತ್ ಒಳಗೆ ಬಿಡುತ್ತಾರೆ. ಶಿಕ್ಷಕರ ಕ್ಷೇತ್ರದಿಂದಲೂ ಚೆನ್ನಾಗಿ ದುಡ್ಡು ತಿಂದು ಮತ ಹಾಕಿಸಿಕೊಂಡು ಬರುತ್ತಿದ್ದಾರೆ. ಈಗ ಶಿಕ್ಷಕರು ಕೂಡ ಹಣ ಪಡೆದುಕೊಂಡು ಮತ ಹಾಕುವ ಪ್ರವೃತ್ತಿ ಬಂದಿದೆ. ರಾಜಕಾರಣ ಎಲ್ಲಿಗೆ ಬಂದು ತಲುಪಿದೆ ಎಂದು ಸಂಕಟ ಹೊರಹಾಕಿದ್ದಾರೆ.
ಇತ್ತೀಚೆಗೆ ಕನ್ನಡ ಭಾಷಾ ವಿಚಾರದಲ್ಲೂ ಮಾತನಾಡಿದ್ದ ಬಸವರಾಜ ಹೊರಟ್ಟಿ ಅವರು, ಕರ್ನಾಟಕದಲ್ಲಿ ಕನ್ನಡ ಉಳಿದಿರಲು ಉತ್ತರ ಕರ್ನಾಟಕ ಭಾಗದ ಜನರಿಂದ ಮಾತ್ರ ಎಂದಿದ್ದರು. ರಾಜಧಾನಿ ಬೆಂಗಳೂರಿನಲ್ಲಿ ತಮಿಳು, ತೆಲುಗು ಭಾಷೆಯವರು ಹೆಚ್ಚಾಗಿದ್ದಾರೆ. ಹಾಗಾಗಿ ಅಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗಿದೆ. ಉತ್ತರ ಕರ್ನಾಟಕದ ಕಡೆ ಜನ ಕನ್ನಡ ಮಾತ್ರ ಮಾತನಾಡುತ್ತಾರೆ. ಈ ಮೂಲಕ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಕನ್ನಡ ಉಳಿದಿರಲು ಉತ್ತರ ಕರ್ನಾಟಕದ ಜನರಿಂದ ಮಾತ್ರ, ಉತ್ತರ ಕರ್ನಾಟಕದವರೇ ಮೂಲ ಕನ್ನಡಿಗರು ಎಂದು ಹೇಳಲು ಹೆಮ್ಮೆ ಇದೆ ಎಂದು ಹೊರಟ್ಟಿ ಹೇಳಿದ್ದರು.












Click it and Unblock the Notifications