DK Shivakumar: ನಾಯಕತ್ವ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ : ಡಿ ಕೆ ಶಿವಕುಮಾರ್ ಹೇಳಿದ್ದೇನು?
ದೆಹಲಿ, ನವೆಂಬರ್16: ಬಿಹಾರ ಚುನಾವಣೆಯ ಫಲಿತಾಂಶದ ಬಳಿಕ ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ದೆಹಲಿಗೆ ದೌಡಾಯಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದಾರೆ. ಈ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಶಿವಕುಮಾರ್ ಅವರು ಮಾತನಾಡಿ, ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯನವರ ಭೇಟಿ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರು ಯಾವ ವಿಚಾರಕ್ಕೆ ಭೇಟಿಯಾಗಿದ್ದರು, ಏನು ಚರ್ಚೆ ಮಾಡಿದ್ದಾರೆಂದು ನನಗೆ ಗೊತ್ತಿಲ್ಲ ಎಂದಿದ್ದಾರೆ. ಅಲ್ಲದೇ ನನಗೆ ಏನೂ ತಿಳಿದಿಲ್ಲ. ಏನಾದರೂ ಮಾಹಿತಿ ಬೇಕೆಂದರೆ ಮುಖ್ಯಮಂತ್ರಿಗಳ ಬಳಿ ಮಾತನಾಡಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಮುಖ್ಯಮಂತ್ರಿಯವರು ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದು, ಸಚಿವ ಸಂಪುಟ ಪುನರ್ ರಚನೆಗೆ ಹಸಿರು ನಿಶಾನೆ ಸಿಕ್ಕಿದೆ ಎನ್ನುವ ಮಾಹಿತಿ ಕುರಿತು ಮಾಧ್ಯಮಗಳ ಪ್ರತಿನಿಧಿಗಳ ಪ್ರಶ್ನೆಗೆ ಮಾತನಾಡಿ, ಅವರು ಯಾರನ್ನು ಭೇಟಿ ಮಾಡಿದ್ದಾರೋ, ಏನನ್ನು ಮಾತನಾಡಿದ್ದಾರೋ ನನಗೆ ತಿಳಿದಿಲ್ಲ. ಮುಖ್ಯಮಂತ್ರಿಯೊಬ್ಬರು ಭೇಟಿಗೆ ಬಂದಾಗ ಸಮಯ ನೀಡುವ ವಾಡಿಕೆ ಇದೆ ಎಂದು ಡಿ ಕೆ ಶಿವಕುಮಾರ್ ಅವರು ಹೇಳಿದರು.
ಪಕ್ಷದ ಶಿಸ್ತಿನ ಸಿಪಾಯಿ ನೀವು ಎಂದು ಮಾಧ್ಯಮದವರು ಹೇಳಿದಾಗ, "ಪಕ್ಷ ಹೇಗೆ ಹೇಳುತ್ತದೆಯೋ ಆ ರೀತಿ ಕೇಳಿಕೊಂಡು ಹೋಗಬೇಕು ನಾವೆಲ್ಲ. ಅಷ್ಟೇ ನಮ್ಮ ಕೆಲಸ ಎಂದರು. ಮುಖ್ಯಮಂತ್ರಿಯವರು ಪ್ರಧಾನಿಯವರನ್ನು ಹಾಗೂ ಹೈಕಮಾಂಡ್ ಅನ್ನು ಭೇಟಿ ಮಾಡುತ್ತಿರುವ ಕುರಿತು ಮಾತನಾಡಿ, ಭೇಟಿಯಾಗುವುದು ತಪ್ಪೇನ್ರೀ? ನೀವುಗಳು ಬೇರೆ ಪಕ್ಷದವರ ಬಳಿ ಮಾತನಾಡಿದಂತೆ ಮಾತನಾಡುತ್ತಿದ್ದೀರಿ. ಅವರು ಎಲ್ಲರನ್ನೂ ಭೇಟಿ ಮಾಡುವ ಹಕ್ಕು ಹೊಂದಿದ್ದಾರೆ. ಪ್ರಧಾನ ಮಂತ್ರಿ, ಗೃಹಸಚಿವರು, ನಿಮ್ಮನ್ನು, ನಮ್ಮ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಬಹುದು ಎಂದರು.
ಸಂಪುಟ ಪುನಾರಚನೆ ಬಗ್ಗೆ ನೀವು ಹೈ ಕಮಾಂಡ್ ಜತೆ ಮಾತನಾಡುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ ಕೆ ಶಿವಕುಮಾರ್ ಅವರು, ನಾನು ಏನನ್ನೂ ಮಾತನಾಡುವುದಿಲ್ಲ. ನನ್ನನ್ನು ಅವರೇನಾದರೂ ಕೇಳಿದರೆ ನನಗೆ ಏನು ಬೇಕೋ ಅದನ್ನು ಹೇಳುತ್ತೇನೆ. ಹೈಕಮಾಂಡ್ ನವರು ನನ್ನನ್ನು ಏನು ಕೇಳುತ್ತಾರೆ, ಏನನ್ನು ಕೇಳುವುದಿಲ್ಲ ಎಂದು ನನಗೆ ಗೊತ್ತಿದೆ. ಅದರ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡುವುದಿಲ್ಲ ಎಂದರು. ಹೈಕಮಾಂಡ್ ನಾಯಕರಭೇಟಿ ಯಾವಾಗ ಎನ್ನುವುದರ ಬಗ್ಗೆ ತಿಳಿದಿಲ್ಲ. ಭಾನುವಾರ ಭೇಟಿಯಾಗಬಹುದು ಎಂದು ಹೇಳಿದರು.
ಕೇಂದ್ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಅನುದಾನ ನೀಡುವುದಾಗಿ ಘೋಷಣೆ ಮಾಡಿತ್ತು. ಅದರ ಅಧಾರದ ಮೇಲೆ ಬೊಮ್ಮಾಯಿ ಅವರು ಕೂಡ ರಾಜ್ಯ ಬಜೆಟ್ ನಲ್ಲಿ ಅನುದಾನ ತೋರಿಸಿದ್ದರು. ಆದರೆ ಈವರೆಗೂ ಕೇಂದ್ರ ಸರ್ಕಾರ ಬಿಡಿಗಾಸು ಕೊಟ್ಟಿಲ್ಲ. ಈ ಬಗ್ಗೆ ಪ್ರಶ್ನೆ ಮಾಡುವ ಆತ್ಮಸ್ಥೈರ್ಯ ಬಿಜೆಪಿಯ ಯಾವ ಸಂಸದರಿಗೂ ಇಲ್ಲ. ಅವರು ರಾಜ್ಯದ ಪರ ಒಂದೇ ಒಂದು ಮಾತು ಆಡಿಲ್ಲ. ಅಷ್ಟಾದರೂ ಇವರು ಸಂಸದರಾಗಿ ಹೇಗೆ ಮುಂದುವರಿಯುತ್ತಿದ್ದಾರೆ ಎಂಬುದೇ ನನಗೆ ಅರಿವಾಗುತ್ತಿಲ್ಲ. ಕೇವಲ ರಾಜ್ಯ ಸರ್ಕಾರವನ್ನು ಟೀಕೆ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ನೆರೆಯ ತಮಿಳುನಾಡು, ಆಂಧ್ರ ಪ್ರದೇಶದವರು ತಮ್ಮ ರಾಜ್ಯದ ವಿಚಾರ ಬಂದಾಗ ಪಕ್ಷಬೇಧ ಮರೆತು ಒಂದಾಗಿ ಧ್ವನಿ ಎತ್ತುತ್ತಾರೆ. ನಮ್ಮ ಕೈಯಲ್ಲಿ ಎಷ್ಟು ದಿನ ಅಧಿಕಾರ ಇರುತ್ತದೆ ಎಂಬುದಕ್ಕಿಂತ, ಅಧಿಕಾರ ಇದ್ದಷ್ಟು ದಿನ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ ಎಂದು ಕಿಡಿಕಾರಿದರು.












Click it and Unblock the Notifications