ಸೌಜನ್ಯ ಕೊಲೆ ಪ್ರಕರಣ: ಯಾರ ಮೇಲೆ ನಿಮ್ಮ ಅನುಮಾನ?
ಪ್ರ: ಒಂದು ವೇಳೆ ಸಿಬಿಐ ತನಿಖೆಗೆ ಸರಕಾರ ಒಪ್ಪದಿದ್ದಲ್ಲಿ, ನಿಮ್ಮ ಮುಂದಿನ ನಡೆ?
ಶ್ರೀಗಳು: ನಮ್ಮ ಹೋರಾಟ ನಿರಂತರ. ಇನ್ನೊಂದು ವಾರದಲ್ಲಿ ಮುಖ್ಯಮಂತ್ರಿಗಳು ದಕ್ಷಿಣಕನ್ನಡ ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎನ್ನುವ ಸುದ್ದಿ ಬಂದಿದೆ. ಆ ಸಮಯದಲ್ಲಿ ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಉದ್ದೇಶವನ್ನು ಹೊಂದಿದ್ದೇವೆ. ಮಾನ್ಯ ಹೆಗ್ಗಡೆಯವರೇ ಸಿಬಿಐ ತನಿಖೆಯಾಗಲಿ ಎಂದು ಹೇಳುತ್ತಿದ್ದಾರೆ, ಆದರೂ ಸರಕಾರ ಯಾಕೆ ಮೀನಮೇಷ ಎಣಿಸುತ್ತಿದೆ ಎಂದು ಅರ್ಥವಾಗುತ್ತಿಲ್ಲ. ಬೆಳ್ತಂಗಡಿ ಶಾಸಕ ವಸಂತ ಬಂಗೇರ ಕೂಡಾ ಸಿಬಿಐ ತನಿಖೆಯಾಗ ಬೇಕೆಂದು ಹೇಳುತ್ತಿದ್ದಾರೆ. ನಮ್ಮ ಮತ್ತು ಜನರ ಕೂಗಿಗೆ ಸರಕಾರ ಸೂಕ್ತ ನಿರ್ಧಾರ ತೆಗೆದು ಕೊಳ್ಳುತ್ತದೆ ಎನ್ನುವ ನಂಬಿಕೆಯಿದೆ.
ಪ್ರ: ಸಿಬಿಐ ತನಿಖೆಯೇ ಆಗಬೇಕೆಂದಿದ್ದರೆ ನಿಮಗೆ ಯಾರ ಮೇಲೆ ಅನುಮಾನವಿದೆ?
ಶ್ರೀಗಳು: ನನಗೆ ಯಾರ ಮೇಲೂ ಅನುಮಾನವಿಲ್ಲ. ಯಾರು ಈ ಕೃತ್ಯ ಎಸಗಿದ್ದಾರೆ ಎನ್ನುವುದೂ ನನಗೆ ತಿಳಿದಿಲ್ಲ. ನಾನು ಸೌಜನ್ಯ ಮನೆಗೆ ಭೇಟಿ ನೀಡಿದಾಗ ಅವಳ ಪೋಷಕರು ನಮಗೆ ಮನೆಯಿಂದ ಹೊರ ಬರಲಾಗುತ್ತಿಲ್ಲ. ನನಗೆ ನೀವು ನ್ಯಾಯ ಕೊಡಿಸಬೇಕೆಂದು ನನ್ನಲ್ಲಿ ವಿನಂತಿಸಿ ಕೊಂಡರು. ನನ್ನ ಉದ್ದೇಶ ಇಷ್ಟೇ. ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿರಲಿ ಕಾನೂನಿನ ಚೌಕಟ್ಟಿನಲ್ಲಿ ಅವರಿಗೆ ಶಿಕ್ಷೆಯಾಗಬೇಕು.

ಪ್ರ: ಹೆಗ್ಗಡೆಯವರ ಸಹೋದರನ ಪುತ್ರ ಘಟನೆ ನಡೆದ ವೇಳೆ ಭಾರತದಲ್ಲಿ ಇರಲಿಲ್ಲ ಎಂದು ರುಜುವಾತು ಪಡಿಸುವ ದಾಖಲೆಗಳನ್ನು ಮಾನ್ಯ ಹೆಗ್ಗಡೆಯವರು ಮಾಧ್ಯಮದ ಮುಂದೆ ಇಟ್ಟಿದ್ದಾರೆ. ಇದನ್ನೇ ಸಿಐಡಿ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ನಿಮ್ಮ ಸ್ಪಷ್ಟನೆ ಏನು?
ಶ್ರೀಗಳು: ನಾನೀಗಾಲೇ ಈ ಸಂದರ್ಶನದಲ್ಲಿ ಸ್ಪಷ್ಟ ಪಡಿಸಿದ್ದೇನೆ. ನನಗೆ ಯಾರು ಆರೋಪಿಗಳು ಎಂದು ತಿಳಿದಿಲ್ಲ. ನನ್ನ ಹೋರಾಟ ನ್ಯಾಯ ಸಿಗಬೇಕು, ಸೌಜನ್ಯ ಕೊಲೆ ಪ್ರಕರಣದ ನೈಜ ಆರೋಪಿಗಳಿಗೆ ಶಿಕ್ಷೆಯಾಗಿ, ಅದು ಕಾಮುಕರಿಗೆ ಒಂದು ಪಾಠವಾಗಲಿ ಎನ್ನುವುದು ನಮ್ಮ ಆಶಯ.
ಪ್ರ: ಬ್ರಾಹ್ಮಣರನ್ನು ಧರ್ಮಸ್ಥಳದಲ್ಲಿ ಸರಿಯಾಗಿ ನಡೆಸಿ ಕೊಳ್ಳಲಾಗುತ್ತಿಲ್ಲ. ಅದರಲ್ಲೂ ಸುತ್ತಮುತ್ತಲ ಪ್ರದೇಶದಲ್ಲಿರುವ ಬ್ರಾಹ್ಮಣ ಸಮುದಾಯದವರು ಕ್ಷೇತ್ರಕ್ಕೆ ಹೆಚ್ಚಾಗಿ ಭೇಟಿ ನೀಡುವುದಿಲ್ಲ. ಎನ್ನುವ ಮಾತಿದೆ. ಹೌದೇ?
ಶ್ರೀಗಳು: ಈ ಪ್ರಶ್ನೆಗೆ ನಾನು ಉತ್ತರಿಸಲು ಆಗುವುದಿಲ್ಲ. ನಾನು ಈ ಪ್ರಶ್ನೆಗೆ ಕೊಡುವ ಉತ್ತರ ಸೌಜನ್ಯ ಕೊಲೆ ಪ್ರಕರಣದ ಹೋರಾಟ ಬೇರೆ ದಾರಿಗೆ ಸಾಗಬಾರದು.












Click it and Unblock the Notifications