ಸೌಜನ್ಯ ಕೊಲೆ ಪ್ರಕರಣ : ಮುಂದಿನ ವಾರ ಭವಿಷ್ಯ ನಿರ್ಧಾರ
ಬೆಂಗಳೂರು/ಮಂಗಳೂರು, ಅ 18: ದಕ್ಷಿಣಕನ್ನಡ ಜಿಲ್ಲೆ ಉಜಿರೆಯ SDM ಕಾಲೇಜು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಕುಟುಂಬ ಸದಸ್ಯರ ಕೈವಾಡವಿದೆ ಎನ್ನುವ ಆಪಾದನೆ ಹಿನ್ನಲೆಯಲ್ಲಿ ಸಿಐಡಿ ಹೆಚ್ಚುವರಿ ತನಿಖೆ ನಡೆಸುತ್ತಿದೆ.
ದಕ್ಷ ಅಧಿಕಾರಿಯೆಂದೇ ಹೇಳಲಾಗುವ ಡಿಐಜಿ ಸೌಮೇಂದು ಮುಖರ್ಜಿ ಮಾರ್ಗದರ್ಶನದಡಿ ಸಿರಿಗೌರಿ ನೇತೃತ್ವದಲ್ಲಿ ವಿಶೇಷ ತಂಡ ತನಿಖೆ ನಡೆಸುತ್ತಿದ್ದು ವಿಚಾರಣೆ ಅಂತಿಮ ಹಂತಕ್ಕೆ ಬಂದಿದ್ದು ಮುಂದಿನ ವಾರ ಸರಕಾರಕ್ಕೆ ಅಂತಿಮ ವರದಿ ನೀಡಲಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಇದೇ ವರ್ಷ ಜನವರಿಯಲ್ಲಿ ವಿಚಾರಣೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಆದರೆ ಹೆಗ್ಗಡೆ ಕುಟುಂಬದ ಕೈವಾಡ ಕೇಳಿ ಬಂದ ಹಿನ್ನಲೆಯಲ್ಲಿ ಸರಕಾರ ಹೆಚ್ಚುವರಿ ತನಿಖೆ ನಡೆಸುವಂತೆ ಸಿಐಡಿಗೆ ಆದೇಶ ನೀಡಿತ್ತು.
ಆದರೆ, ಹೊಸ ಆರೋಪ ಸಾಬೀತಾಗುವಂತ ಯಾವುದೇ ಸಾಕ್ಷಿಗಳಾಗಲಿ, ಅಂಶಗಳಾಗಲಿ ತನಿಖೆಯ ಸಂದರ್ಭದಲ್ಲಿ ಪತ್ತೆಯಾಗಿಲ್ಲ. ಸೌಜನ್ಯ ಕೊಲೆಯನ್ನು ಸಂತೋಷ್ ರಾವ್ ಮಾಡಿದ್ದಾನೆ ಎನ್ನುವುದಕ್ಕೆ ಬಲವಾದ ಸಾಕ್ಷಿಗಳು ಸಿಐಡಿ ಬಳಿ ಇದ್ದು, ಒಂದು ವೇಳೆ ಪ್ರಕರಣವನ್ನು ಸಿಬಿಐಗೆ ವಹಿಸಿದರೂ ಇದೇ ಅಂಶ ಹೊರಬರಲಿದೆ ಎನ್ನಲಾಗುತ್ತಿದೆ.
ಆಖಾಡಕ್ಕಿಳಿದ ಜನಾರ್ಧನ ಪೂಜಾರಿ, ಕುಮಾರಸ್ವಾಮಿ

ಸಿಐಡಿ ತನಿಖೆ
ಸಿಐಡಿ ಅಧಿಕಾರಿಗಳು ಹೆಚ್ಚುವರಿ ತನಿಖೆಯ ಸಂದರ್ಭದಲ್ಲಿ ಈಗ ಆರೋಪ ಮಾಡುತ್ತಿರುವ ವ್ಯಕ್ತಿಗಳು ಕೊಲೆಯಾದ ಸಂದರ್ಭದಲ್ಲಿ ಉಜಿರೆಯಲ್ಲಿರಲಿಲ್ಲ ಎನ್ನುವ ಎನ್ನುವ ಮಹತ್ವದ ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ.

ಪ್ರಹ್ಲಾದ್ ಜೋಷಿ
ಅನಗತ್ಯವಾಗಿ ಹೆಗ್ಗಡೆ ಕುಟುಂಬದ ಮೇಲೆ ಆರೋಪ ಮಾಡಲಾಗುತ್ತಿದೆ. ಒಂದು ವರ್ಷದ ಹಿಂದೆ ನಡೆದ ಕೊಲೆ ಪ್ರಕರಣಕ್ಕೆ ಮತ್ತೆ ಜೀವ ನೀಡುತ್ತಿರುವುದನ್ನು ನೋಡಿದರೆ ವೀರೇಂದ್ರ ಹೆಗ್ಗಡೆಯವರ ತೇಜೋವಧೆಗೆ ಮುಂದಾಗಿರುವುದು ಸ್ಪಷ್ಟವಾಗುತ್ತದೆ.

ಎಚ್ ಡಿ ಕುಮಾರಸ್ವಾಮಿ
ಇದೊಂದು ವ್ಯವಸ್ಥಿತ ಸಂಚು. ಧರ್ಮಸ್ಥಳ ಮತ್ತು ಹೆಗ್ಗಡೆಯವರ ಹೆಸರಿಗೆ ಮಸಿ ಬಳಿಯುವ ಕೆಲಸಗಳಿಗೆ ಪಟ್ಟಭದ್ರ ಹಿತಾಶಕ್ತಿಗಳು ಮುಂದಾಗಿರುವುದು ಇದರಿಂದ ಗೋಚರವಾಗುತ್ತದೆ. ಕೊಲೆ ನಡೆದ ಸಂದರ್ಭದಲ್ಲಿ ಆಗಿನ ಸರಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ವಿವಾದ ಸೃಷ್ಟಿ ಯಾಗುತ್ತಿರಲಿಲ್ಲ.

ವಿನಯ್ ಕುಲ್ಕರ್ಣಿ (ಧಾರವಾಡ ಕಾಂಗ್ರೆಸ್ ಶಾಸಕ)
ನಾವು ನಂಬಿದ ಧಾರ್ಮಿಕ ಕೇಂದ್ರ ಧರ್ಮಸ್ಥಳ. ಕ್ಷೇತ್ರಕ್ಕಾಗಲಿ ಮತ್ತು ಪೂಜ್ಯ ಸ್ಥಾನದಲ್ಲಿರುವ ವೀರೇಂದ್ರ ಹೆಗ್ಗಡೆಯವರಿಗೆ ಮಸಿ ಬಳಿಯುವ ಕೆಲಸಕ್ಕೆ ಯಾರೂ ಮುಂದಾಗ ಬಾರದು.

ಜನಾರ್ಥನ ಪೂಜಾರಿ
ಧರ್ಮಸ್ಥಳ ಕ್ಷೇತ್ರ ಮತ್ತು ವೀರೇಂದ್ರ ಹೆಗ್ಗಡೆಯವರ ಮೇಲೆ ಆರೋಪ ಮಾಡುತ್ತಿರುವವರನ್ನು ಮೊದಲು ತನಿಖೆಗೆ ಒಳಪಡಿಸ ಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವ ವ್ಯಕ್ತಿ ಕೊಲೆ ಮಾಡಿಲ್ಲದಿದ್ದರೆ, ಕೊಲೆ ಮಾಡಿದವರು ಯಾರೆಂದು ನಿಮಗೆ ತಿಳಿದಿದೆಯೇ?











Click it and Unblock the Notifications