ಮೂರು ರೈಲುಗಳ ಸಂಚಾರ ರದ್ದುಗೊಳಿಸಲಿದೆ ನೈಋತ್ಯ ರೈಲ್ವೆ
ಬೆಂಗಳೂರು, ಜೂನ್ 11 : ಲಾಕ್ ಡೌನ್ ಪರಿಣಾಮ ಆಗಿರುವ ನಷ್ಟವನ್ನು ತುಂಬಿಕೊಳ್ಳಲು ಭಾರತೀಯ ರೈಲ್ವೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಆರ್ಥಿಕವಾಗಿ ನಷ್ಟವಾಗುವ ರೈಲುಗಳ ಸಂಚಾರವನ್ನು ರದ್ದುಗೊಳಿಸುತ್ತಿದೆ.
ನೈಋತ್ಯ ರೈಲ್ವೆ ಕರ್ನಾಟಕದಲ್ಲಿ ಮೂರು ರೈಲುಗಳ ಸಂಚಾರ ರದ್ದುಗೊಳಿಸಬಹುದು ಎಂದು ರೈಲ್ವೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ರೈಲ್ವೆ ಇಲಾಖೆ ಕಡಿಮೆ ಜನರು ಸಂಚಾರ ನಡೆಸುವ, ಆರ್ಥಿಕವಾಗಿ ಲಾಭವಾಗದ ಮಾರ್ಗದಲ್ಲಿ ಸಂಚಾರವನ್ನು ಸ್ಥಗಿತಗೊಳಿಸುತ್ತಿದೆ.
ಮೂರು ರೈಲು, 40 ನಿಲ್ದಾಣಗಳಲ್ಲಿ ರೈಲುಗಳ ನಿಲುಗಡೆಯನ್ನು ಸ್ಥಗಿತಗೊಳಿಸಲಾಗುತ್ತಿದೆ. ಕೆಲವು ರೈಲುಗಳ ಸಂಚಾರ ರದ್ದುಗೊಳಿಸುವ ಪ್ರಸ್ತಾವನೆಗೆ ಪ್ರಯಾಣಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಎಲ್ಲಾ ಮಾರ್ಗಗಳ ಪರಿಶೀಲನೆ ಬಳಿಕ ನೈಋತ್ಯ ರೈಲ್ವೆ ಈ ತೀರ್ಮಾನ ಕೈಗೊಂಡಿದೆ.
ಪ್ರಸ್ತುತ ಕೆಲವು ಪ್ರಯಾಣಿಕರ ರೈಲುಗಳು ಮಾತ್ರ ಸಂಚಾರ ನಡೆಸುತ್ತಿವೆ. ಲಾಕ್ ಡೌನ್ ಮುಗಿದು ರೈಲುಗಳ ಸಂಚಾರ ಯಥಾಸ್ಥಿತಿಗೆ ಬಂದ ಬಳಿಕ ನೂತನ ವೇಳಾಪಟ್ಟಿ ಜಾರಿಗೆ ಬರಲಿದ್ದು, ಹಲವು ರೈಲುಗಳು ಸಂಚಾರವನ್ನು ನಿಲ್ಲಿಸಲಿವೆ.

ಯಾವ-ಯಾವ ರೈಲುಗಳು
ನೈಋತ್ಯ ರೈಲ್ವೆ ಮೂರು ರೈಲುಗಳ ಸಂಚಾರವನ್ನು ರದ್ದುಗೊಳಿಸುವ ಪ್ರಸ್ತಾಪವನ್ನು ಕಳಿಸಿದೆ.
* ಹುಬ್ಬಳ್ಳಿ - ಬೆಂಗಳೂರು ಪ್ಯಾಸೆಂಜರ್ ರೈಲು
* ಹುಬ್ಬಳ್ಳಿ - ಮೀರಜ್ ಎಕ್ಸ್‌ಪ್ರೆಸ್ ರೈಲು
* ಬೆಳಗಾವಿ - ವಾಸ್ಕೋ ವಿಶೇಷ ಪ್ಯಾಸೆಂಜರ್ ರೈಲು

ರೈಲು ನಿಲುಗಡೆಗೆ ಅಕ್ರೋಶ
ಹುಬ್ಬಳ್ಳಿ- ಬೆಂಗಳೂರು ಪ್ಯಾಸೆಂಜರ್ ರೈಲು ಸಂಚಾರವನ್ನು ರದ್ದುಗೊಳಿಸುವ ಪ್ರಸ್ತಾವನೆಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಿಂದ ಬೆಳಗ್ಗೆ ಹೊರಡುತ್ತಿದ್ದ ರೈಲು ಸಂಜೆ 6.40ಕ್ಕೆ ಹುಬ್ಬಳ್ಳಿ ತಲುಪುತ್ತಿತ್ತು. ಹುಬ್ಬಳ್ಳಿಯಿಂದ ಬೆಳಗ್ಗೆ 9.15ಕ್ಕೆ ಹೊರಡುತ್ತಿದ್ದ ರೈಲು ಸಂಜೆ ಬೆಂಗಳೂರಿಗೆ ತಲುಪುತ್ತಿತ್ತು. ಪ್ರಯಾಣದರ 85 ರೂ. ಇದೆ.

ಪ್ರಯಾಣಿಕರಿಗೆ ತೊಂದರೆ ಆಗುವುದಿಲ್ಲ
ಈ ಮೂರು ರೈಲುಗಳ ಸಂಚಾರ ರದ್ದುಗೊಳ್ಳುವುದರಿಂದ ಜನರಿಗೆ ಯಾವುದೇ ತೊಂದರೆ ಇರುವುದಿಲ್ಲ. ಬೇರೆ ರೈಲುಗಳು ಸಂಚಾರ ನಡೆಸುತ್ತಿವೆ. ಆರ್ಥಿಕ ಕಾರಣಕ್ಕೆ ರೈಲುಗಳ ಸಂಚಾರ ರದ್ದುಗೊಳಿಸಲಾಗುತ್ತಿದೆ. ನಿಲ್ದಾಣಗಳಲ್ಲಿ ಸಹ ರೈಲುಗಳ ನಿಲುಗಡೆ ರದ್ದುಗೊಳಿಸಲಾಗುತ್ತಿದೆ ಎಂದು ಇಲಾಖೆ ಹೇಳಿದೆ.

ಯಾವ-ಯಾವ ನಿಲ್ದಾಣಗಳು?
ತಿಪಟೂರಿನಲ್ಲಿ 12, ಪಾಂಡವಪುರದಲ್ಲಿ 16, ಬಂಟ್ವಾಳದಲ್ಲಿ 5 ಸೇರಿದಂತೆ ರಾಜ್ಯದ 40 ನಿಲ್ದಾಣಗಳಲ್ಲಿ ರೈಲುಗಳ ನಿಲುಗಡೆ ರದ್ದುಗೊಳಿಸಲಾಗುತ್ತಿದೆ.












Click it and Unblock the Notifications