ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ
ಬೆಂಗಳೂರು: ಬೇಸಿಗೆ ರಜೆ ಹಿನ್ನೆಲೆಯಲ್ಲಿ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲುಗಳನ್ನು ಕಾರ್ಯಾಚರಣೆ ಮಾಡುತ್ತಿರುವ ನೈಋತ್ಯ ರೈಲ್ವೆಯು ಬನಶಂಕರಿ ಜಾತ್ರಾ ಮಹೋತ್ಸವ ಪ್ರಯುಕ್ತ ರೈಲುಗಳ ತಾತ್ಕಾಲಿಕ ನಿಲುಗಡೆ ಮಾಡುವುದಾಗಿ ತಿಳಿಸಿದೆ. ಜೊತೆಗೆ ಇತರ ಕಾರಣಗಳಿಂದ ಕೆಲವು ರೈಲುಗಳ ಭಾಗಶಃ ರದ್ದು ಮತ್ತು ತಾತ್ಕಾಲಿಕವಾಗಿ ನಿಯಂತ್ರಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬನಶಂಕರಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಭಕ್ತಾದಿಗಳ ಸುಗಮ ಸಂಚಾರಕ್ಕಾಗಿ ಇದೇ ತಿಂಗಳ ಏಪ್ರಿಲ್ 23 ರಿಂದ 28ರವರೆಗೆ ಬನಶಂಕರಿ ಹಾಲ್ಟ್ ನಿಲ್ದಾಣದಲ್ಲಿ ವಿವಿಧ ರೈಲುಗಳಿಗೆ ತಾತ್ಕಾಲಿಕ ನಿಲುಗಡೆಯನ್ನು ಕಲ್ಪಿಸಲಾಗಿದೆ. ಇದರಿಂದ ಇಲ್ಲಿಗೆ ಬರುವ ಮತ್ತು ಇಲ್ಲಿಂದ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಜಾತ್ರೆ ಹಿನ್ನೆಲೆಯಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಕೆಎಸ್‌ಆರ್ ಬೆಂಗಳೂರು-ಹೊಸಪೇಟೆ ದೈನಂದಿನ ಪ್ಯಾಸೆಂಜರ್ ರೈಲು (56519) ಬೆಳಗ್ಗೆ 07:22 ಗಂಟೆಗೆ ಬನಶಂಕರಿ ಹಾಲ್ಟ್ ನಿಲ್ದಾಣ ನಿಲ್ದಾಣಕ್ಕೆ ಆಗಮಿಸಿ, 07:23ಕ್ಕೆ ಹೊರಡುತ್ತದೆ. ಅದೇ ರೀತಿ ಮರಳಿ ಅದೇ ದಿಕ್ಕಿನಲ್ಲಿ ಬರುವ ಹೊಸಪೇಟೆ-ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್ ರೈಲು (56520) ಸಂಜೆ 07:27ಕ್ಕೆ ಇದೇ ನಿಲ್ದಾಣಕ್ಕೆ ಆಗಮಿಸಿ, 07:28 ಗಂಟೆಗೆ ಅಲ್ಲಿಂದ ನಿರ್ಗಮಿಸುತ್ತದೆ. ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ ಇನ್ನಿತರ ಭಾಗಗಳಿಂದ ಜಾತ್ರೆಗೆ ತೆರಳುವವರಿಗೆ ಈ ನಿಲ್ದಾನದ ನಿಲುಗಡೆಯು ಪ್ರಯೋಜನಕಾರಿಯಾಗಿದೆ.
ಇನ್ನು ಚಿಕ್ಕಮಗಳೂರು-ಯಶವಂತಪುರ ಎಕ್ಸ್‌ಪ್ರೆಸ್ ರೈಲು (16239) ಬೆಳಗ್ಗೆ 10:57ಕ್ಕೆ ಬನಶಂಕರಿ ಹಾಲ್ಟ್ ನಿಲ್ದಾಣಕ್ಕೆ ಬಂದು, ಅಲ್ಲಿಂದ 10:58 ಗಂಟೆಗೆ ನಿರ್ಗಮಿಸಲಿದೆ. ಯಶವಂತಪುರ-ಚಿಕ್ಕಮಗಳೂರು ಎಕ್ಸ್‌ಪ್ರೆಸ್ ರೈಲು (16240) ಸಂಜೆ 05:52 ಗಂಟೆಗೆ ಇದೇ ನಿಲ್ದಾನಕ್ಕೆ ಬಂದು, 5:53 ಗಂಟೆಗೆ ಅಲ್ಲಿಂದ ಹೊರಡುತ್ತದೆ. ಇದು ಮಲೆನಾಡು ಭಾಗದಿಂದ ಬರುವ ಭಕ್ತಾಧಿಕಾರಿಗಳ ಸಂಚಾರಕ್ಕೆ ಸಹಕಾರಿಯಾಗಿದೆ. ಭಕ್ತರನ್ನು ಗಮನದಲ್ಲಿಟ್ಟುಕೊಂಡು ಮಾಡಿದ ತಾತ್ಕಾಲಿಕ ವ್ಯವಸ್ಥೆಯಾಗಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮಗಾರಿ: ಕೆಲವು ರೈಲುಗಳ ನಿಯಂತ್ರಣ
ಬೆಂಗಳೂರು ವಿಭಾಗದ ಮಲ್ಲಸಂದ್ರ ಮತ್ತು ಗುಬ್ಬಿ ನಿಲ್ದಾಣಗಳ ನಡುವೆ ಲೆವೆಲ್ ಕ್ರಾಸಿಂಗ್ ಕಾಮಗಾರಿ ನಡೆಯಲಿದೆ. ಕೆಲವು ರೈಲುಗಳ ಸೇವೆಯನ್ನು ಮರುನಿಗದಿಪಡಿಸಲಾಗುತ್ತದೆ ಎಂದು ಈ ಹಿಂದೆ ತಿಳಿಸಲಾಗಿತ್ತು. ಸಮಯ ಪರಿಷ್ಕರಿಸಲಾಗಿದ್ದು, ಹೊಸ ಮಾಹಿತಿ ಇಲ್ಲಿದೆ.
ಉದಯಪುರ ಸಿಟಿ - ಮೈಸೂರು ಹಂಸಫರ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು (19667) ಈ ಹಿಂದೆ 06 ಏಪ್ರಿಲ್ ಮತ್ತು 13 ಏಪ್ರಿಲ್ ರಂದು ಉದಯಪುರ ಸಿಟಿಯಿಂದ 200 ನಿಮಿಷ ಮರು ನಿಗದಿಪಡಿಸಲಾಗುತ್ತದೆ ಎಂದು ತಿಳಿಸಲಾಗಿತ್ತು. ಇದೀಗ ಪರಿಷ್ಕೃತ ಆದೇಶದಂತೆ ಏಪ್ರಿಲ್13 ರಂದು ಈ ರೈಲನ್ನು ಮಾರ್ಗ ಮಧ್ಯದಲ್ಲಿ ನಿಯಂತ್ರಿಸಲಾಗುತ್ತದೆ. ಈ ರೈಲು ವಾಯುವ್ಯ ರೈಲ್ವೆ, ಪಶ್ಚಿಮ ರೈಲ್ವೆ, ಮಧ್ಯ ರೈಲ್ವೆ ಹಾಗೂ ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದಲ್ಲಿ ತಲಾ 60 ನಿಮಿಷಗಳ ಕಾಲ ನಿಯಂತ್ರಣಗೊಳ್ಳಲಿದೆ.
ಶ್ರೀ ಗಂಗಾನಗರ- ತಿರುಚಿರಾಪಳ್ಳಿ ಹಂಸಫರ್ ಎಕ್ಸ್ ಪ್ರೆಸ್ ರೈಲು (22497) ಈ ಹಿಂದೆ 06 ಏಪ್ರಿಲ್ ಮತ್ತು 13 ಏಪ್ರಿಲ್ 2026 ರಂದು ಶ್ರೀ ಗಂಗಾನಗರದಿಂದ 150 ನಿಮಿಷ ಮರು ನಿಗದಿಪಡಿಸಲಾಗುತ್ತದೆ ಎಂದು ಹೇಳಲಾಗಿತ್ತು. ಪರಿಷ್ಕೃತ ಆದೇಶದಂತೆ ಏಪ್ರಿಲ್ 13ರಂದು ಈ ರೈಲು ವಾಯುವ್ಯ ರೈಲ್ವೆ, ಪಶ್ಚಿಮ ರೈಲ್ವೆ ಹಾಗೂ ಮಧ್ಯ ರೈಲ್ವೆ ವ್ಯಾಪ್ತಿಯಲ್ಲಿ ತಲಾ 50 ನಿಮಿಷಗಳ ಕಾಲ ನಿಯಂತ್ರಣಕ್ಕೆ ಒಳಪಡಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾಗಶಃ ರದ್ದಾದ ರೈಲುಗಳು ಯಾವುವು?
ಮೈಸೂರು ಮತ್ತು ಮೈಸೂರು ಹೊಸ ಗೂಡ್ಸ್ ಟರ್ಮಿನಲ್ ನಡುವಿನ ರಾಷ್ಟ್ರೀಯ ಹೆದ್ದಾರಿ 275ರ ರಿಂಗ್ ರಸ್ತೆಯಲ್ಲಿ ಆರು ಪಥದ ರಸ್ತೆ ಕೆಳಸೇತುವೆ (RUB ಸಂಖ್ಯೆ 293) ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಕಾರಣದಿಂದ ಸದರಿ ಮಾರ್ಗದಲ್ಲಿ ಚಲಿಸುವ ರೈಲುಗಳ ಸಂಚಾರದಲ್ಲಿ ಬದಲಾವಣೆ ಆಗಿದೆ.
ಅರಸೀಕೆರೆ-ಮೈಸೂರು ಪ್ಯಾಸೆಂಜರ್ ರೈಲು (56267) ಏಪ್ರಿಲ್ 18, ಮೇ 06 ಮತ್ತು ಮೇ 09 ರಂದು ಅರಸೀಕೆರೆಯಿಂದ ಮೈಸೂರಿನವರೆಗೆ ಬರುವ ಬದಲಿಗೆ ಬೆಳಗುಳ ನಿಲ್ದಾಣದಲ್ಲಿ ಸಂಚಾರ ಅಂತ್ಯಗೊಳಿಸಲಿದೆ. ಬೆಳಗುಳ ಮತ್ತು ಮೈಸೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.
ಮೈಸೂರು-ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು (16225) ಏಪ್ರಿಲ್ 18, ಮೇ 06 ಮತ್ತು ಮೇ 09ರಂದು ಮೈಸೂರಿನಿಂದ ಹೊರಡುವ ಬದಲು ಬೆಳಗುಳ ನಿಲ್ದಾಣದಿಂದಲೇ ಸಂಚಾರ ಆರಂಭಿಸುತ್ತದೆ. ಮೈಸೂರು ಮತ್ತು ಬೆಳಗುಳ ನಡುವೆ ಈ ರೈಲು ಭಾಗಶಃ ರದ್ದಾಗಿದೆ ಎಂದು ರೈಲ್ವೆ ಪ್ರಕಟಣೆ ಮಾಹಿತಿ ನೀಡಿದೆ.












Click it and Unblock the Notifications