Karnataka Rain: ದಕ್ಷಿಣದಲ್ಲಿ ಭಾರಿ ಮಳೆ, ಉತ್ತರ ಕರ್ನಾಟಕದಲ್ಲಿ ಕಾಣೆಯಾದ ಮೋಡಗಳು!
ಕರ್ನಾಟಕದಲ್ಲಿ ಮಳೆಯಾಗುತ್ತಿದೆ, ಇದು ಕನ್ನಡಿಗರಿಗೆ ಸಹಜವಾಗಿ ಖುಷಿ ಕೊಟ್ಟಿದೆ. ಆದ್ರೆ ಮುಂಗಾರು ಮಾರುತಗಳು ಸಂಪೂರ್ಣವಾಗಿ ಕರ್ನಾಟಕಕ್ಕೆ ಮಳೆ ಸುರಿಸಿಲ್ಲ. ಹೀಗೆ ದಕ್ಷಿಣ ಕರ್ನಾಟಕದಲ್ಲಿ ಭಾರಿ ಮಳೆ ಸುರಿಯುತ್ತಿದ್ದರೂ, ಉತ್ತರ ಕರ್ನಾಟಕದಲ್ಲಿ ಬರದ ಛಾಯೆ ಆವರಿಸಿದೆ. ಹಾಗಾದರೆ ಹೇಗಿದೆ ಉತ್ತರ ಕರ್ನಾಟಕದ ಪರಿಸ್ಥಿತಿ? ಬನ್ನಿ ತಿಳಿಯೋಣ.
ಕಳೆದ ಒಂದು ತಿಂಗಳಿಂದ ಇಡೀ ಕರ್ನಾಟಕದಲ್ಲಿ ಬರದ ಛಾಯೆ ಆವರಿಸಿತ್ತು. ಆದರೆ ಈ ನಡುವೆ ಕೃಪೆ ತೋರಿಸಿರುವ ವರುಣ ದೇವ, ದಕ್ಷಿಣ ಕರ್ನಾಟಕದಲ್ಲಿ ಭಾರಿ ಮಳೆ ಸುರಿಸಿ ರೈತರ ಆತಂಕ ದೂರ ಮಾಡಿದ್ದಾನೆ. ಆದರೆ ಉತ್ತರ ಕರ್ನಾಟಕದಲ್ಲಿ ಮಾತ್ರ ಬರ ಆತಂಕ ಮುಂದುವರಿದಿದೆ. ಈವರೆಗೂ ಉತ್ತರ ಕರ್ನಾಟಕದಲ್ಲಿ ಸರಿಯಾಗಿ ಮಳೆಯಾಗಿಲ್ಲ. ಹಾಗೇ ಉತ್ತರ ಕರ್ನಾಟಕದ ಜಲಾಶಯಗಳಿಗೆ ನೀರು ಒದಗಿಸುವ ಮಹಾರಾಷ್ಟ್ರದಲ್ಲೂ ಮಳೆಯ ಕೊರತೆ ಕಾಡುತ್ತಿದೆ. ಹೀಗಾಗಿ ಎಲ್ಲೆಲ್ಲೂ ಆತಂಕ ಆವರಿಸಿದೆ.

ಅಯ್ಯೋ ಮಳೆಯೇ.. ಏನಿದು ಅವಾಂತರ?
ಹೌದು, ಹವಾಮಾನ ಇಲಾಖೆ ಹೇಳಿದ್ದಂತೆ ಕರ್ನಾಟಕದಲ್ಲಿ ಮಳೆ ಸುರಿಯುತ್ತಿದೆ. ದಕ್ಷಿಣ ಕರ್ನಾಟಕದ ಮಲೆನಾಡು ಭಾಗ ಹಾಗೂ ಕರಾವಳಿ ಪ್ರದೇಶದಲ್ಲಿ ಭೀಕರ ಮಳೆ ಸುರಿದಿದೆ. ಆದರೆ ಉತ್ತರ ಕರ್ನಾಟಕದಲ್ಲಿ ಸಮಸ್ಯೆ ಶುರುವಾಗಿದೆ. ಕಳೆದ 4-5 ವರ್ಷದಿಂದ ಉತ್ತರದ ಬಹುತೇಕ ಜಿಲ್ಲೆಗಳು ಸಮಸ್ಯೆ ಎದುರಿಸುತ್ತಿದ್ದವು. ಉತ್ತರ ಕರ್ನಾಟಕದಲ್ಲಿ ನದಿಗಳು ಉಕ್ಕಿ ಹರಿದ ಪರಿಣಾಮ ಭೀಕರ ಪ್ರವಾಹ ಉಂಟಾಗಿತ್ತು. ಆದ್ರೆ ಈ ಬಾರಿ ನದಿಗಳು ಒಣಗುತ್ತಿವೆ, ಜಮೀನುಗಳು ಬಿರುಕುಬಿಟ್ಟಿವೆ. ಡ್ಯಾಂಗಳು ಖಾಲಿಯಾಗಿವೆ. ಈ ಮೂಲಕ ಉತ್ತರ ಕರ್ನಾಟಕದ ರೈತರು ತಲೆ ಮೇಲೆ ಕೈಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಿತ್ತನೆ ಪ್ರಮಾಣದಲ್ಲೂ ಭಾರಿ ಕುಸಿತ
ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆ ಕಾರಣ ಬಿತ್ತನೆ ಪ್ರಮಾಣ ಕೂಡ ಭಾರಿ ಕುಸಿತವನ್ನ ಕಂಡಿದೆ. ಉದಾಹರಣೆಗೆ ಗದಗ ಜಿಲ್ಲೆಯಲ್ಲಿ ವಾಡಿಕೆ ಮಳೆ 95 ಮಿಲಿ ಮೀಟರ್ ಇದೆ. ಆದರೆ ಈ ಬಾರಿ 65 ಮಿಲಿ ಮೀಟರ್ ಬಿದ್ದಿದೆ. ಹೀಗಾಗಿ ಬಿತ್ತನೆ ಪ್ರಮಾಣ ಕೂಡ ಕುಸಿತವಾಗಿದ್ದು ಗದಗ ಜಿಲ್ಲೆಯ ಸುಮಾರು 3 ಲಕ್ಷ ಹೆಕ್ಟೇರ್ ಪ್ರದೇಶದ ಪೈಕಿ, ಕೇವಲ 63,866 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಅಂದರೆ ಶೇಕಡಾ 20ರಷ್ಟು ಪ್ರದೇಶದಲ್ಲಿ ಮಾತ್ರವೇ ಬಿತ್ತನೆ ಕಾರ್ಯ ನಡೆದಿದೆ. ಅದೇ ರೀತಿ ಉತ್ತರ ಕರ್ನಾಟಕದ ಇತರ ಜಿಲ್ಲೆಗಳಲ್ಲೂ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ.

ಮಹಾರಾಷ್ಟ್ರ ರಾಜ್ಯದಲ್ಲೂ ಭೀಕರ ಬರ?
ಕರ್ನಾಟಕದಲ್ಲಿ ಮಾತ್ರವಲ್ಲ ಮಹಾರಾಷ್ಟ್ರದಲ್ಲೂ ಭೀಕರ ಬರ ಎದುರಾಗುವ ಪರಿಸ್ಥಿತಿಯೇ ನಿರ್ಮಾಣವಾಗಿದೆ. ಏಕೆಂದರೆ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿಯೂ ಮಳೆಯ ಅಭಾವ ಉಂಟಾಗಿದೆ. ಈ ಮಧ್ಯೆ ಬೆಳಗಾವಿ ಜಿಲ್ಲೆಯಲ್ಲಿ ವಾಡಿಕೆ ಮಳೆ 175 ಮಿಲಿ ಮೀಟರ್, ಆದರೆ ಈ ಬಾರಿ ಕೇವಲ 71 ಮಿಲಿ ಮೀಟರ್ ಮಳೆ ಬಿದ್ದಿದೆ. ಹೀಗಾಗಿ ಶೇಕಡಾ 60ರಷ್ಟು ಮಳೆಯ ಕೊರತೆ ಎದುರಾಗಿದೆ. ಈ ನಡುವೆ ಬಾಗಲಕೋಟೆಯಲ್ಲಿ ವಾಡಿಕೆಯ ಪ್ರಕಾರ 94 ಕನಿಷ್ಠ ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ 31 ಮಿ.ಮೀ ಮಳೆ ಆಗಿದ್ದು, ಶೇಕಡಾ 67ರಷ್ಟು ಮಳೆ ಕೊರತೆ ಎದುರಾಗಿದೆ.
ಇದೇ ರೀತಿ ವಿಜಯಪುರ ಜಿಲ್ಲೆಗೆ ವಾಡಿಕೆಯಂತೆ 98 ಮಿಲಿ ಮೀಟರ್ ಮಳೆ ಬೀಳಬೇಕಿತ್ತು. ಇಲ್ಲಿ ಕೂಡ 47 ಮಿ.ಮೀ ಮಳೆಯಾಗಿದ್ದು, ಶೇಕಡಾ 52 ರಷ್ಟು ಮಳೆಯ ಕೊರತೆಯಾಗಿದೆ. ಹಾವೇರಿಯಲ್ಲಿ ವಾಡಿಕೆ ಪ್ರಕಾರ 146 ಮಿಮೀ ಮಳೆಯಾಗಬೇಕಿತ್ತು. ಆದ್ರೆ ಈ ಬಾರಿ ಕೇವಲ 75 ಮಿ.ಮೀ.ಮಳೆಯಾಗಿದೆ. ಈ ಮೂಲಕ ಶೇಕಡಾ 49 ರಷ್ಟು ಮಳೆಯ ಕೊರತೆಯಾಗಿದೆ. ಒಟ್ನಲ್ಲಿ ದಕ್ಷಿಣ ಕರ್ನಾಟಕದಲ್ಲಿ ಉತ್ತಮವಾಗಿ ಮಳೆಯಾಗಿದ್ದರೂ, ಉತ್ತರ ಕರ್ನಾಕದಲ್ಲಿ ಮಳೆ ಕೊರತೆ ಕಾಡುತ್ತಿರುವುದು ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಚಿಂತೆ ತರಿಸಿದೆ.












Click it and Unblock the Notifications