ಕೇಂದ್ರ ಸೇವೆಗೆ ಸೋನಿಯಾ ನಾರಂಗ್, ಎನ್‌ಐಎ ಎಸ್ಪಿಯಾಗಿ ನೇಮಕ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 30 : ಐಪಿಎಸ್ ಅಧಿಕಾರಿ ಸೋನಿಯಾ ನಾರಂಗ್ ಅವರನ್ನು ಕೇಂದ್ರ ಸರ್ಕಾರದ ಸೇವೆಗೆ ನಿಯೋಜನೆ ಮಾಡಲಾಗಿದೆ. ಸದ್ಯ, ಸಿಐಡಿಯ ಡಿಐಜಿಯಾಗಿ ಕೆಲಸ ಮಾಡುತ್ತಿರುವ ಸೋನಿಯಾ ನಾರಂಗ್ ಅವರು ಜೂನ್ ತಿಂಗಳಲ್ಲಿ ಕೇಂದ್ರ ಸರ್ಕಾರದ ಸೇವೆಗೆ ತೆರಳುತ್ತಿದ್ದಾರೆ.

ಸೋನಿಯಾ ನಾರಂಗ್ ಅವರನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನವದೆಹಲಿ ವಿಭಾಗದ ಎಸ್‌ಪಿಯಾಗಿ ನೇಮಕ ಮಾಡಲಾಗಿದೆ. ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲು ಒಂದು ತಿಂಗಳು ಬೇಕಾಗಲಿದ್ದು, ಜೂನ್ ತಿಂಗಳಿನಲ್ಲಿ ಅವರು ಕರ್ನಾಟಕ ಬಿಟ್ಟು ತೆರಳಲಿದ್ದಾರೆ. [ಡಿಐಜಿಯಾಗಿ ಬಡ್ತಿ ಪಡೆದ ಎಸ್ಪಿ ಸೋನಿಯಾ ನಾರಂಗ್]

sonia narang

ಕೇಂದ್ರ ಸೇವೆಗೆ ನಿಯೋಜನೆಗೊಂಡಿರುವ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಸೋನಿಯಾ ನಾರಂಗ್ ನೇಮಕಾತಿ ಆಗಿರುವ ಬಗ್ಗೆ ಖಚಿತಪಡಿಸಿದ್ದಾರೆ. 'ನೇಮಕಾತಿ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಒಂದು ತಿಂಗಳ ಅವಧಿ ಬೇಕಾಗುತ್ತದೆ. ನಂತರ ದೆಹಲಿಗೆ ತರಳುತ್ತೇನೆ' ಎಂದು ಹೇಳಿದ್ದಾರೆ.

ಚಂಡೀಗಢ್‌‌‌‌‌ನವರು : ಸೋನಿಯಾ ನಾರಂಗ್ ಅವರು ಮೂಲತಃ ಚಂಡೀಗಢ್‌ನವರು. ಬಿಎ ಪದವಿ ಪಡೆದ ಬಳಿಕ ಅವರು ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2002ರಲ್ಲಿ ಕರ್ನಾಟಕ ಕೆಡರ್‌ನ ಅಧಿಕಾರಿಯಾಗಿ ನೇಮಕವಾದರು.

ರಾಜ್ಯದಲ್ಲಿ ಸೋನಿಯಾ ನಾರಂಗ್ ಅವರು ಕೆಲಸ ಆರಂಭಿಸಿದ್ದು ಕಲಬುರಗಿಯಲ್ಲಿ ಜಿಲ್ಲೆಯ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ. ನಂತರ ಅವರು ಬೈಲಹೊಂಗಲದಲ್ಲಿ ಎಎಸ್‌ಪಿಯಾಗಿ ಕೆಲಸ ಮಾಡಿದರು. ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ಮಾಡುವಾಗ ಸೋನಿಯಾ ನಾರಂಗ್ ಅವರ ಹೆಸರು ರಾಜ್ಯಕ್ಕೆ ಪರಿಚಯವಾಯಿತು.

ನಂತರ ಬೆಳಗಾವಿಗೆ ವರ್ಗಾವಣೆಯಾದ ಅವರು ಅನಂತರ ಬೆಂಗಳೂರಿಗೆ ಬಂದರು. ಕೆಎಸ್ಆರ್‌ಪಿಯಲ್ಲಿಯೂ ಕೆಲಸ ನಿರ್ವಹಿಸಿದ ನಾರಂಗ್ ಅವರು, ನಂತರ ಲೋಕಾಯುಕ್ತಕ್ಕೆ ವರ್ಗಾವಣೆಯಾದರು.

2015ರಿಂದ ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸೋನಿಯಾ ನಾರಂಗ್ ಅವರಿಗೆ ಡಿಸೆಂಬರ್ 31ರಂದು ಡಿಐಜಿಯಾಗಿ ಬಡ್ತಿ ಸಿಕ್ಕಿತ್ತು. ನಂತರ ಸಿಐಡಿಯ ಡಿಐಜಿಯಾಗಿ ನೇಮಕವಾಗಿದ್ದರು. ಸದ್ಯ, ಅವರ ನೇತೃತ್ವದಲ್ಲಿಯೇ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ತನಿಖೆ ನಡೆಯುತ್ತಿದೆ.

ಲೋಕಾಯುಕ್ತ ಹಗರಣ ಬೆಳಕಿಗೆ ತಂದಿದ್ದರು : ಕರ್ನಾಟಕ ಲೋಕಾಯುಕ್ತದಲ್ಲಿ ಭ್ರಷ್ಟಾಚಾರದ ನಡೆದಿದೆ ಎಂದು ಲೋಕಾಯುಕ್ತ ಎಸ್‌ಪಿಯಾಗಿದ್ದ ಸೋನಿಯಾ ನಾರಂಗ್‌ ಅವರು 2015ರ ಮೇ 11ರಂದು ಲೋಕಾಯುಕ್ತ ರಿಜಿಸ್ಟ್ರಾರ್‌ಗೆ ಪತ್ರ ಬರೆದಿದ್ದರು. ಆನಂತರ ನಡೆದ ಹಲವು ಬೆಳವಣಿಗೆಗಳ ಬಳಿಕ ಲೋಕಾಯುಕ್ತ ವೈ. ಭಾಸ್ಕರ ರಾವ್ ಅವರು ಡಿಸೆಂಬರ್ 7ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Deputy Inspector General of Police (DIG) Criminal Investigation Department Sonia Narang is being sent on Central deputation and posted as Superintendent of Police, National Investigation Agency (NIA) New Delhi.
Please Wait while comments are loading...