ಎಸ್‌ಎಲ್ ಭೈರಪ್ಪಗೆ ರಾಷ್ಟ್ರೀಯ ಪ್ರೊಫೆಸರ್ ಗೌರವ
ನವದೆಹಲಿ, ಡಿ.11 : ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರನ್ನು 'ರಾಷ್ಟ್ರೀಯ ಸಂಶೋಧನಾ ಪ್ರೊಫೆಸರ್' ಎಂದು ನೇಮಕ ಮಾಡಲಾಗುತ್ತದೆ. ಭೈರಪ್ಪ ಅವರು ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು ಈ ಗೌರವ ಸಲ್ಲಿಸಲಾಗುತ್ತಿದೆ ಎಂದು ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಲೋಕಸಭೆಯ ಬುಧವಾರದ ಕಲಾಪದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಅಳಿವಿನ ಅಂಚಿನಲ್ಲಿರುವ ಉಪಭಾಷೆಗಳ ರಕ್ಷಣೆ ಹಾಗೂ ಸಾಹಿತ್ಯದಲ್ಲಿ ಅನುವಾದ ಕಾರ್ಯದ ಕುರಿತು ಹೇಳಿಕೆ ನೀಡಿ, ಎಸ್.ಎಲ್. ಭೈರಪ್ಪ ಅವರನ್ನು ರಾಷ್ಟ್ರೀಯ ಸಂಶೋಧನಾ ಪ್ರೊಫೆಸರ್ ಎಂದು ನೇಮಕ ಮಾಡಲಾಗುತ್ತದೆ ಎಂದು ತಿಳಿಸಿದರು. [ಕಡಲಾಚೆ ಲೇಖಕರಿಗೆ ಎಸ್ಎಲ್ ಭೈರಪ್ಪ ಕಿವಿಮಾತು]

ಸಾಹಿತ್ಯದಲ್ಲಿನ ಅನುವಾದದ ಉತ್ತೇಜನಕ್ಕೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಮುಂಬೈ ಉತ್ತರ ಕ್ಷೇತ್ರದ ಸಂಸದೆ ಪೂನಂ ಮಹಾಜನ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವೆ ಇರಾನಿ, ಭೈರಪ್ಪ ಅವರು ಸಾಹಿತ್ಯಕ್ಕೆ ನೀಡಿದ ಕೊಡುಗೆ ಗಮನದಲ್ಲಿಟ್ಟುಕೊಂಡು ಈ ಗೌರವ ಸಲ್ಲಿಸಲಾಗುತ್ತಿದೆ ಎಂದರು. [ಭೈರಪ್ಪ ಸಂಕ್ಷಿಪ್ತ ಪರಿಚಯ]
ಎಸ್.ಎಲ್.ಭೈರಪ್ಪ ಅವರ ಕೃತಿಗಳು ಹಲವು ಭಾಷೆಗಳಿಗೆ ಅನುವಾದವಾಗಿ ಮೆಚ್ಚುಗೆ ಗಳಿಸಿದ್ದನ್ನು ಉಲ್ಲೇಖಿಸಿದ ಸಚಿವರು ಮೇಧಾವಿಗಳು, ವಿದ್ವಾಂಸರನ್ನು ಗುರುತಿಸಲು ಕೇಂದ್ರ ಸರ್ಕಾರ 1949ರಲ್ಲಿಯೇ 'ರಾಷ್ಟ್ರೀಯ ಸಂಶೋಧನಾ ಪ್ರೊಫೆಸರ್' ಎಂಬ ಗೌರವ ಪದವಿ ನೀಡಿ ಮನ್ನಣೆ ನೀಡುತ್ತಿದೆ ಎಂದು ಕಲಾಪದಲ್ಲಿ ಮಾಹಿತಿ ನೀಡಿದರು.
ಆಯಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ, 65 ವರ್ಷ ತುಂಬಿರುವ ಹಾಗೂ ಇನ್ನೂ ಸಂಶೋಧನೆ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ವ್ಯಕ್ತಿಗಳಿಗೆ ರಾಷ್ಟ್ರೀಯ ಸಂಶೋಧನಾ ಪ್ರೊಫೆಸರ್ ಗೌರವ ನೀಡಲಾಗುತ್ತದೆ ಎಂದರು.
ಐದು ವರ್ಷಗಳ ಅವಧಿಗೆ ಈ ನೇಮಕ ಮಾಡಲಾಗುತ್ತಿದ್ದು, ಸರ್ಕಾರ ಬಯಸಿದರೆ ಮತ್ತೂ ಐದು ವರ್ಷಗಳಿಗೆ ಅದನ್ನು ವಿಸ್ತರಿಸಬಹುದಾಗಿದೆ. ಈ ಗೌರವ ಪಡೆಯುವ ವ್ಯಕ್ತಿಗಳಿಗೆ ತಿಂಗಳಿಗೆ ರೂ. 75,000 ಗೌರವಧನ ನೀಡಲಾಗುತ್ತದೆ. ಗೌರವಕ್ಕೆ ಪಾತ್ರರಾದ ವ್ಯಕ್ತಿಗಳು ಸಂಶೋಧನೆಗಾಗಿ ವರ್ಷಕ್ಕೆ ಒಂದು ಲಕ್ಷ ರೂ. ಅನುದಾನ ಪಡೆಯಬಹುದು ಎಂದು ಸಚಿವರು ಹೇಳಿದರು.












Click it and Unblock the Notifications