ಬಿಜೆಪಿಗೆ ಅಧಿಕಾರ ತಪ್ಪಲು ಟಿಪ್ಪು ಸುಲ್ತಾನ್ ಶಾಪವೇ ಕಾರಣ, ರೇವಣ್ಣ
Recommended Video

ಬೆಂಗಳೂರು, ನ 10: ಬಿಜೆಪಿಗೆ ಪ್ರತಿಭಟನೆ ನಡೆಸಲು ಒಂದು ಕಾರಣ ಬೇಕಿದೆ, ಅದಕ್ಕಾಗಿ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ವಿರೋಧಿಸುತ್ತಿದೆ ಎಂದು ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಕಿಡಿಕಾರಿದ್ದಾರೆ.
104 ಸೀಟು ಬಂದರೂ ಬಿಜೆಪಿಗೆ ಅಧಿಕಾರ ತಪ್ಪಲು ಟಿಪ್ಪು ಸುಲ್ತಾನ್ ಶಾಪವೇ ಕಾರಣ. ಟಿಪ್ಪು ಜಯಂತಿ ಆಚರಿಸುತ್ತಿರುವುದರಿಂದ ಕಾಂಗ್ರೆಸ್ ಮತ್ತೆ ಸಮ್ಮಿಶ್ರ ಸರಕಾರದಲ್ಲಿ ಅಧಿಕಾರದಲ್ಲಿದೆ ಎಂದು ರೇವಣ್ಣ ಹೇಳಿದ್ದಾರೆ.
ಟಿಪ್ಪು ಜಯಂತಿ ಆಚರಣೆಯ ವಿಚಾರದಲ್ಲಿ ಜಾಣ ನಡೆಯಿಟ್ಟಿರುವ ಸಿಎಂ ಕುಮಾರಸ್ವಾಮಿ, ವಿಶ್ರಾಂತಿಯ ಹೆಸರಿನಲ್ಲಿ ಕಾರ್ಯಕ್ರಮದಿಂದ ದೂರವುಳಿದಿದ್ದಾರೆ. ಒಂದು ರೀತಿಯಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ಸಂಪೂರ್ಣ ಕಾಂಗ್ರೆಸ್ ಕಾರ್ಯಕ್ರಮದಂತಾಗಿದೆ.

ನಾವು ಟಿಪ್ಪು ಜಯಂತಿ ಕಾರ್ಯಕ್ರಮವನ್ನು ವಿರೋಧಿಸುತ್ತಿಲ್ಲ, ನಾನು ಮುಖ್ಯಮಂತ್ರಿಗಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಸಲಹೆಯನ್ನೂ ನೀಡಲಿಲ್ಲ. ಇದೆಲ್ಲಾ ಸುಳ್ಳು ಸುದ್ದಿ ಎಂದು ರೇವಣ್ಣ ಹೇಳಿದ್ದಾರೆ.
ಹಾಸನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುತ್ತಿದ್ದೇನೆ. ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ, ಅಧಿಕಾರ ತಪ್ಪುತ್ತದೆ ಎಂದು ನಾನು ಕುಮಾರಸ್ವಾಮಿಗೆ ಹೇಳಿದ್ದೇನೆ ಎನ್ನುವುದು ಸತ್ಯಕ್ಕೆ ದೂರವಾದಂತಹ ಮಾತು ಎಂದು ರೇವಣ್ಣ ಸ್ಪಷ್ಟ ಪಡಿಸಿದ್ದಾರೆ.
ಸರಕಾರದ ಅಧಿಕೃತ ಟಿಪ್ಪು ಜಯಂತಿ ಕಾರ್ಯಕ್ರಮದಿಂದ ಜಾರಿಕೊಂಡಿರುವ ಸಿಎಂ ಕುಮಾರಸ್ವಾಮಿ, ವೈದ್ಯರ ಸಲಹೆಯ ಮೇರೆಗೆ ನವೆಂಬರ್ ಹನ್ನೊಂದರವರೆಗೆ ವಿಶ್ರಾಂತಿಗೆ ತೆರಳಿದ್ದಾರೆ. ಈ ವೇಳೆ, ಅವರು ತಮ್ಮ ಕುಟುಂಬದ ಸದಸ್ಯರ ಜೊತೆಗೆ ಮಾತ್ರ ಕಾಲ ಕಳೆಯಲಿದ್ದಾರೆಂದು ಸಿಎಂ ಕಚೇರಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.












Click it and Unblock the Notifications