NREGA: ನರೇಗಾ ಯೋಜನೆಯ ಮಹತ್ವ ಹಾಗೂ ಕರ್ನಾಟಕದ ಸಾಧನೆ ವಿವರಿಸಿದ ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು, ಫೆಬ್ರವರಿ 05: ಯಾವುದಾದರೂ ಒಂದು ಯೋಜನೆ ಬಹುಮುಖಿಯಾಗಿ ಅಭಿವೃದ್ಧಿಗೆ ಕಾರಣವಾಗಿದೆ ಎಂದರೆ ಅದು ನರೇಗಾ ಯೋಜನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಸರ್ಕಾರ ಮಹತ್ವಾಕಾಂಕ್ಷೆಯ ನರೇಗಾ ಯೋಜನೆಯ ಮಹತ್ವವನ್ನು ವಿವರಿಸಿದ್ದಾರೆ.
ಗ್ರಾಮೀಣ ಭಾರತ ಕೌಶಲ್ಯರಹಿತ ನಿರುದ್ಯೋಗಿಗಳಿಗೆ, ಕಾರ್ಮಿಕರಿಗೆ ಉದ್ಯೋಗವನ್ನು ಖಾತರಿಗೊಳಿಸಲು ಹಾಗೂ ಗ್ರಾಮೀಣ ಆರ್ಥಿಕತೆಯನ್ನು ಸದೃಢಗೊಳಿಸಲು 2006ರ ಫೆಬ್ರವರಿ 2ನೇ ತಾರೀಖಿನಂದು ನರೇಗಾ ಯೋಜನೆ ದೇಶದಲ್ಲಿ ಅನುಷ್ಠಾನಕ್ಕೆ ಬಂತು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕಾಯ್ದೆ ರೂಪಿಸಿ ಜಾರಿಗೆ ತಂದ ಈ ನರೇಗಾ ಯೋಜನೆ ಗ್ರಾಮೀಣಾಭಿವೃದ್ಧಿಯಲ್ಲಿ ಕ್ರಾಂತಿ ರೂಪಿಸಿದೆ. ಗ್ರಾಮ ಭಾರತದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ನರೇಗಾ ಯೋಜನೆ ಮಹತ್ವದ ಪಾತ್ರ ವಹಿಸಿದೆ ಎಂದು ಪ್ರಿಯಾಂಕ್ ಖರ್ಗೆ ಸಂತಸ ವ್ಯಕ್ತಪಡಿಸಿದರು.

ಇನ್ನು ದೇಶದ ಅಭಿವೃದ್ಧಿಯಲ್ಲಿ ನರೇಗಾ ಪಾತ್ರ ವಿವರಿಸಿದ ಅವರು, ಗ್ರಾಮೀಣ ಜನತೆಗೆ ವಾರ್ಷಿಕ 100 ದಿನಗಳ ಉದ್ಯೋಗವನ್ನು ಖಾತ್ರಿಗೊಳಿಸುವುದರೊಂದಿಗೆ ಅವರನ್ನು ಆರ್ಥಿಕವಾಗಿ ಸದೃಢಗೊಳಿಸಿದೆ. ಗ್ರಾಮಗಳ ಸಮಗ್ರ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಮಹಿಳೆಯರಿಗೂ ದುಡಿಮೆಯ ಅವಕಾಶ ಕಲ್ಪಿಸಿ ಸ್ವಾವಲಂಬಿಗಳನ್ನಾಗಿ ಮಾಡಿದೆ.
ಅತಿವೃಷ್ಟಿ, ಅನಾವೃಷ್ಟಿಯ ಸಂದರ್ಭದಲ್ಲಿ ಗ್ರಾಮೀಣ ಜನರ ಕೈ ಹಿಡಿದಿದೆ, ವಲಸೆ ಪ್ರಮಾಣವನ್ನು ತಗ್ಗಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ. ರೈತರು ಕೃಷಿ, ತೋಟಗಾರಿಕೆಯಲ್ಲಿ ನರೇಗಾ ಯೋಜನೆಯ ಲಾಭ ಪಡೆದಿದ್ದಾರೆ. ರಸ್ತೆ, ಚರಂಡಿ, ಕೆರೆ ಅಭಿವೃದ್ಧಿ, ಶಾಲಾ ಮೂಲ ಸೌಕರ್ಯ ಅಭಿವೃದ್ಧಿ ಸೇರಿದಂತೆ ನರೇಗಾ ಸರ್ವ ವ್ಯಾಪಿಯಾಗಿ ಕೆಲಸ ಮಾಡಿದೆ.

ನೈಸರ್ಗಿಕ ನೀರಿನ ಸುಸ್ಥಿರತೆ ಕಾಯ್ದುಕೊಳ್ಳಲು ಹಾಗೂ ಇಂಗು ಗುಂಡಿಗಳನ್ನು ನಿರ್ಮಿಸಲು ನರೇಗಾ ಸಹಾಯಕವಾಗಿದೆ. ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯದಲ್ಲಿ ಸುಮಾರು 10,000 ಹೊರ ಗುತ್ತಿಗೆ ನೌಕರರಿಗೆ ಉದ್ಯೋಗ ನೀಡಲಾಗಿದೆ. ರಾಜ್ಯದಲ್ಲಿ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಲ್ಲಿ ನಮ್ಮ ಸರ್ಕಾರ ಪ್ರಾಮಾಣಿಕ ಕಾಳಜಿ ವಹಿಸಿದೆ ಎಂದರು.
2023-24ರಿಂದ ಇಲ್ಲಿಯವರೆಗೆ ನರೇಗಾ ಯೋಜನೆಯಲ್ಲಿ ಕರ್ನಾಟಕದ ಸಾಧನೆ
*36515 ಜಾನುವಾರು ಶೆಡ್ ನಿರ್ಮಾಣ
*299 ಸ್ಮಶಾನ ಅಭಿವೃದ್ಧಿ
*10295 ಬಚ್ಚಲು ಗುಂಡಿ ನಿರ್ಮಾಣ
*500 ಗ್ರಾಮಗಳಲ್ಲಿ ಬೂದು ನೀರು ನಿರ್ವಹಣೆಗೆ ಚಾಲನೆ
*3869 ಕೂಸಿನ ಮನೆಗಳ ಸ್ಥಾಪನೆ
*2139 ಅಂಗನವಾಡಿಗಳ ನಿರ್ಮಾಣ
*3395 ಶಾಲಾಭಿವೃದ್ಧಿ ಕಾಮಗಾರಿಗಳು
*3184 ಕಿ. ಮೀ ಗ್ರಾಮೀಣ ರಸ್ತೆಗಳ ಅಭಿವೃದ್ಧಿ
*10894 ಕೆರೆಗಳ ಅಭಿವೃದ್ಧಿ
*17.31 ಲಕ್ಷ ಒಟ್ಟು ಸೃಜಿಸಲಾದ ಗ್ರಾಮೀಣ ಆಸ್ತಿಗಳು
*24.75 ಕೋಟಿ ಮಾನವ ದಿನಗಳ ಸೃಜನೆ
*55 ಲಕ್ಷಕ್ಕೂ ಹೆಚ್ಚು ಉದ್ಯೋಗ ಪಡೆದ ಕೂಲಿಕಾರರು. ಇವು ನರೇಗಾ ಯೋಜನೆಯಲ್ಲಿ ಕರ್ನಾಟಕದ ಸಾಧನೆಗಳು. ನರೇಗಾ ಯೋಜನೆಯ ಸಮರ್ಥ ಅನುಷ್ಠಾನ ನಮ್ಮ ಸರ್ಕಾರದ ಸಂಕಲ್ಪ ಎಂದು ಪ್ರಿಯಾಂಕ್ ಖರ್ಗೆ ಹೆಮ್ಮೆ ವ್ಯಕ್ತಪಡಿಸಿದರು.












Click it and Unblock the Notifications