ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಬೈಎಲೆಕ್ಷನ್ ಕುತ್ತು?
ರಾಜ್ಯ ರಾಜಕಾರಣದಲ್ಲಿ ಬೈಎಲೆಕ್ಷನ್ ಕಾವು ಜೋರಾಗಿರುವಾಗಲೇ ಕಾಂಗ್ರೆಸ್‌ನಲ್ಲಿ ಹೊಸ ಸಿಎಂ ಹೆಸರು ಮುನ್ನೆಲೆ ಬಂದಿದೆ. ಸಿಎಂ ಕುರ್ಚಿ ಮೇಲೆ ಮೊದಲಿನಿಂದಲೂ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್ ಅವರಿಗೆ ಆ ಸ್ಥಾನ ಒಲಿಯಲು ಈ ಉಪಚುನಾವಣೆಯು ವರದಾನವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದರಲ್ಲೂ ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ನ ಗೆಲುವಿನ ಮೇಲೆ ಡಿಕೆಶಿ ಭವಿಷ್ಯ ನಿಂತಿದೆ ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಸಿ.ಪಿ.ಯೋಗೇಶ್ವರ್ ಅವರನ್ನು ಗೆಲ್ಲಿಸಲು ಡಿ.ಕೆ.ಶಿವಕುಮಾರ್ ವಿಶೇಷ ಕಾಳಜಿ ತೋರಿದ್ದು, ಇದು ಅವರು ಸಿಎಂ ಆಗಲು ಪ್ರಮುಖ ತಿರುವು ನೀಡಲಿದೆ ಎಂಬ ಗುಸುಗುಸು ಜೋರಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕಾಂಗ್ರೆಸ್ ನಾಯಕರು ಕೂಡ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಇಂದು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವಂತಹ ಬೈಎಲೆಕ್ಷನ್ ಎಂದು ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಇಂದು ನೀಡಿರುವ ಹೇಳಿಕೆ ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿಸಿದೆ. ಚನ್ನಪಟ್ಟಣದಲ್ಲಿ ಇಂದು ಮಾತನಾಡಿದ ಶಿವಲಿಂಗೇಗೌಡ, ಇದು ಡಿ.ಕೆ.ಶಿವಕುಮಾರ್ ಸಿಎಂ ಆಗುವ ಉಪಚುನಾವಣೆ. ಈ ಚುನಾವಣಾ ಫಲಿತಾಂಶವೇ ಡಿ.ಕೆ.ಶಿವಕುಮಾರ್ ಅವರ ನಾಯಕತ್ವವನ್ನು ತೋರಿಸುತ್ತದೆ. ರಾಜ್ಯದ ರಾಜಕಾರಣಕ್ಕೆ ಚನ್ನಪಟ್ಟಣ ಕ್ಷೇತ್ರವೇ ತಿರುವು ನೀಡುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.
ನೀವು (ಮತದಾರರು) ಯಾವುದೇ ಕಾರಣಕ್ಕೂ ಡಿ.ಕೆ.ಶಿವಕುಮಾರ್ ಅವರನ್ನು ಬಿಟ್ಟುಕೊಡಬೇಡಿ. ಚನ್ನಪಟ್ಟಣದಲ್ಲಿ ಡಿ.ಕೆ.ಸುರೇಶ್ ಅವರನ್ನೇ ನಿಲ್ಲಿಸಿ, ಗೆಲ್ಲಿಸಲು ಡಿ.ಕೆ.ಶಿವಕುಮಾರ್ ಅವರಿಗೆ ಆಗುತ್ತಿತ್ತು. ಆದರೆ, ಸಿ.ಪಿ.ಯೋಗೇಶ್ವರ್ ಕೂಡ ಬಹಳ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಹಾಗಾಗಿ ಚನ್ನಪಟ್ಟಣ ಟಿಕೆಟ್ ಅನ್ನು ಅವರಿಗೆ ತ್ಯಾಗ ಮಾಡಲಾಗಿದೆ ಎಂದು ಶಿವಲಿಂಗೇಗೌಡ ಹೇಳಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ರಾಜಕೀಯ ಭವಿಷ್ಯ ಉಳಿಸಿಕೊಳ್ಳಲು ಬಿಜೆಪಿ ಜೊತೆ ಸೇರಿಕೊಂಡರು. ಇಲ್ಲದಿದ್ರೆ ಅವರ ರಾಜಕೀಯ ಜೀವನವೇ ಅಂತ್ಯವಾಗುತ್ತಿತ್ತು. ಈಗಲೂ ಕುಮಾರಸ್ವಾಮಿ ಅವರು ತಮ್ಮ ಕುಟುಂಬ ಉದ್ಧಾರವಾದ್ರೆ ಸಾಕು ಎಂದೇ ಇದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಕೂಡ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗುವ ಬಗ್ಗೆ ಚನ್ನಪಟ್ಟಣದಲ್ಲಿ ಮಾತನಾಡಿ ಗಮನ ಸೆಳೆದಿದ್ದಾರೆ. ಸಿದ್ದರಾಮಯ್ಯ ಬಳಿಕ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗೋ ಎಲ್ಲ ಅವಕಾಶವಿದೆ. ಈ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಅವರು ಗೆಲುವು ಸಾಧಿಸಿದ್ರೆ ಡಿ.ಕೆ.ಶಿವಕುಮಾರ್ ಅವರಿಗೆ ಬಲ ಹೆಚ್ಚಾಗುತ್ತೆ ಎಂದು ಹೇಳಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರನ್ನು ಮಣಿಸಲು ಕುಮಾರಸ್ವಾಮಿ ಅವರು ತಮ್ಮ ಬಾವನನ್ನು (ಸಿ.ಎನ್.ಮಂಜುನಾಥ್) ಸ್ಪರ್ಧೆಗೆ ಇಳಿಸಿದರು. ಈ ಬಾರಿ ಅವರು ಸಿ.ಪಿ.ಯೋಗೇಶ್ವರ್ ಅವರಿಗೆ ಟಿಕೆಟ್ ಕೊಡಬಹುದಿತ್ತು. ಆದರೆ, ಕುಮಾರಸ್ವಾಮಿ ಅವರಿಗೆ ತಮ್ಮ ಕುಟುಂಬದವರಿಗೆ ಮಾತ್ರವೇ ಟಿಕೆಟ್ ಕೊಡುತ್ತಾರೆ. ಕುಮಾರಣ್ಣನ ಟೂರಿಂಗ್ ಟಾಕೀಸ್ ಎಲ್ಲೂ ನಿಲ್ಲದು ಎಂದು ಲೇವಡಿ ಮಾಡಿದ್ದಾರೆ.
ಇನ್ನು ಚನ್ನಪಟ್ಟಣ ಭಾಗದಲ್ಲಿ ಒಕ್ಕಲಿಗ ಸಮುದಾಯದವರು ಹೆಚ್ಚಾಗಿರುವ ಕಾರಣ ಈ ಬಾರಿಯ ಉಪಚುನಾವಣೆಗೆ ಒಕ್ಕಲಿಗ ಸಿಎಂ ಬಾಣ ಬಿಡಲು ಕಾಂಗ್ರೆಸ್ ತಂತ್ರ ರೂಪಿಸಿದೆ ಎನ್ನಲಾಗಿದೆ. ಸಿ.ಪಿ.ಯೋಗೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ಕೂಡ ಒಕ್ಕಲಿಗ ಸಮುದಾಯವರಾಗಿರುವುದರಿಂದ ಚನ್ನಪಟ್ಟಣ ಗೆದ್ದರೆ, ರಾಜ್ಯಕ್ಕೆ ಒಕ್ಕಲಿಗ ಸಿಎಂ ಬರ್ತಾರೆ ಎಂದು ಮತದಾರರನ್ನು ಸೆಳೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.












Click it and Unblock the Notifications