ದೆಹಲಿ ಆಸ್ಪತ್ರೆಯಲ್ಲಿ ಇಡಿ ಅಧಿಕಾರಿಗಳ ಮೇಲೆ ಸಿದ್ದರಾಮಯ್ಯ ಗರಂ!
ಬೆಂಗಳೂರು, ಸೆಪ್ಟೆಂಬರ್ 13 : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಭೇಟಿಗಾಗಿ ಅವರು ಪ್ರಯತ್ನ ನಡೆಸಿದರು.
ಗುರುವಾರ ರಾತ್ರಿ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಡಿ. ಕೆ. ಶಿವಕುಮಾರ್ ಭೇಟಿಗಾಗಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಜಮೀರ್ ಅಹಮದ್ ಖಾನ್ ತೆರಳಿದ್ದರು.
ಮೊದಲು ಒಬ್ಬರಿಗೆ ಭೇಟಿ ಮಾಡಲು ಅವಕಾಶ ನೀಡುವುದಾಗಿ ಇಡಿ ಅಧಿಕಾರಿಗಳು ಹೇಳಿದ್ದರು. ಆದರೆ, ನಾಯಕರು ಆಸ್ಪತ್ರೆಗೆ ಬಂದ ಬಳಿಕ ಯಾರ ಭೇಟಿಗೂ ಅವಕಾಶ ನೀಡಲಿಲ್ಲ. ಇದರಿಂದಾಗಿ ಸಿದ್ದರಾಮಯ್ಯ ಇಡಿ ಅಧಿಕಾರಿಗಳ ವಿರುದ್ಧ ಗರಂ ಆದರು.

"ದ್ವೇಷ ರಾಜಕಾರಣ ಮಾಡುತ್ತಿರುವಾಗ ನಾವೇನು ಹೇಳಲು ಆಗುತ್ತದೆ" ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಡಿ. ಕೆ. ಶಿವಕುಮಾರ್ ಇಡಿ ಕಸ್ಟಡಿ ಶುಕ್ರವಾರ ಅಂತ್ಯಗೊಳ್ಳಲಿದೆ.
ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆದಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಿದ್ದರು. ಅಲ್ಲಿ ಇಡಿ ವಶದಲ್ಲಿರುವ ಡಿ. ಕೆ. ಶಿವಕುಮಾರ್ ಭೇಟಿಯಾಗಲು ಪ್ರಯತ್ನ ನಡೆಸಿದರು.
ಇಡಿ ವಿಶೇಷ ನ್ಯಾಯಾಲಯ ಡಿ. ಕೆ. ಶಿವಕುಮಾರ್ ಕುಟುಂಬದವರು ಮತ್ತು ವೈದ್ಯರು ಮಾತ್ರ ಅವರನ್ನು ಭೇಟಿ ಮಾಡಬಹುದು ಎಂದು ಹೇಳಿದೆ. ಆದ್ದರಿಂದ, ಇಡಿ ಅಧಿಕಾರಿಗಳು ಪಕ್ಷದ ನಾಯಕರ ಭೇಟಿಗೆ ಅವಕಾಶವನ್ನು ನೀಡಲಿಲ್ಲ.
ಇಂದು ಡಿ. ಕೆ. ಶಿವಕುಮಾರ್ ಇಡಿ ಕಸ್ಟಡಿ ಅಂತ್ಯಗೊಳ್ಳಲಿದೆ. ಇಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, ಜಾಮೀನು ಸಿಗುವುದೇ? ಎಂದು ಕಾದು ನೋಡಬೇಕಿದೆ. ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರೆ ಅವರನ್ನು ತಿಹಾರ್ ಜೈಲಿಗೆ ಕಳಿಸಲಾಗುತ್ತದೆ.












Click it and Unblock the Notifications