ಡಿ.ಕೆ ಶಿವಕುಮಾರ್ ಜೊತೆ ಸಿದ್ದರಾಮಯ್ಯ ರಾಜಿ ಸಂಧಾನ ?, ಪಕ್ಷದ ವರಿಷ್ಠರು ಹೇಳಿದಂತೆ ನಡೆದುಕೊಳ್ಳುತ್ತೇನೆ: ಸಿಎಂ
ಕರ್ನಾಟಕದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರ ನಡುವೆ ನಡೆಯುತ್ತಿರುವ ಸಿಎಂ ಕುರ್ಚಿ ಕಿತ್ತಾಟದಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಮಧ್ಯಪ್ರವೇಶ ಮಾಡಿದೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಡಿ.ಕೆ ಶಿವಕುಮಾರ್ ಅವರೊಂದಿಗೆ ರಾಜಿ ಸಂಧಾನಕ್ಕೆ ಮುಂದಾಗಿದ್ದಾರೆ. ಇದರ ನಡುವೆ ಸಿದ್ದರಾಮಯ್ಯ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾಡಿರುವ ಟ್ವೀಟ್ ಭಾರೀ ವೈರಲ್ ಆಗಿದ್ದು, ಇದಕ್ಕೆ ಕನ್ನಡಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇಷ್ಟಕ್ಕೂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದೇನು, ವೈರಲ್ ಆಗುತ್ತಿರುವುದೇನು ಎನ್ನುವ ವಿವರ ಇಲ್ಲಿದೆ.
ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಪಕ್ಷದ ವರಿಷ್ಠರು ಹೇಳಿದಂತೆ ನಡೆದುಕೊಳ್ಳುವುದಾಗಿ ಈಗಾಗಲೇ ತಿಳಿಸಿದ್ದೇನೆ. ಈಗಲೂ ಮತ್ತು ನಾಳೆಯೂ ಅದನ್ನೇ ಹೇಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಮುಂದುವರಿದು ಪಕ್ಷದ ವರಿಷ್ಠರು ನನಗೆ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಕರೆ ಮಾಡಿ ನೀವಿಬ್ಬರೂ ಭೇಟಿ ಮಾಡಿ ಎಂದು ತಿಳಿಸಿದ್ದಾರೆ. ಹಾಗಾಗಿ ಅವರನ್ನು ನಾನು ಉಪಹಾರಕ್ಕಾಗಿ ಕರೆದಿದ್ದು, ಅಲ್ಲಿ ಚರ್ಚೆ ಮಾಡುತ್ತೇವೆ. ಡಿ.ಕೆ ಶಿವಕುಮಾರ್ ಅವರು ಹೈಕಮಾಂಡ್ ಹೇಳಿದ್ದನ್ನು ಒಪ್ಪುವುದಾಗಿ ಹೇಳಿದ್ದಾರೆ. ಹೈಕಮಾಂಡ್‌ನವರು ನವದೆಹಲಿಗೆ ಕರೆದರೆ ಹೋಗುತ್ತೇನೆ ಎಂದೂ ಹೇಳಿದ್ದಾರೆ.
ಸಿದ್ದರಾಮಯ್ಯ - ಡಿ.ಕೆ ಶಿವಕುಮಾರ್ ರಾಜಿ ಸಂಧಾನ ?
ಇನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರ ನಡುವೆ ರಾಜಿ ಸಂಧಾನ ನಡೆಯುವುದಕ್ಕೆ ವೇದಿಕೆ ಕಲ್ಪಿಸಿದಂತಾಗಿದೆ. ಇಷ್ಟು ದಿನ ಆತ್ಮೀಯ ಶಾಸಕರು ಹಾಗೂ ಸಚಿವರೊಂದಿಗೆ ಡಿನ್ನರ್ ಪಾರ್ಟಿ ಮಾಡುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರು ಇದೀಗ ಮೊದಲ ಬಾರಿಗೆ ಡಿ.ಕೆ ಶಿವಕುಮಾರ್ ಅವರನ್ನು ಔತಣಕೂಟಕ್ಕೆ ಆಹ್ವಾನಿಸಿದ್ದಾರೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸ್ಥಿರ ಅಡಳಿತಕ್ಕಾಗಿ 136 ಸ್ಥಾನಗಳನ್ನು ರಾಜ್ಯದ ಜನತೆ ಆಶೀರ್ವಾದ ಕಲ್ಪಿಸಿದೆ. ಆದರೆ ಈ ಬದಲಾವಣೆ ಕ್ರಾಂತಿ, ಅವಿಶ್ವಾಸ, ವಿಸರ್ಜನೆ ಮೊದಲಾದವುಗಳಿಂದ ಅಸ್ಥಿರಗೊಳಿಸುತ್ತದೆ. ಅಧಿಕಾರ ಹಂಚಿಕೆ ಒಳ ಒಪ್ಪಂದ 50:50 ಆಗಿದ್ದರೆ, ನುಡಿದಂತೆ ನಡೆಯಬೇಕು ಎಂದು ನೆಟ್ಟಿಗರು ಹೇಳಿದ್ದಾರೆ.
ಗ್ಯಾರಂಟಿಯ ನಡುವೆಯೂ ಸ್ಥಿರ ಆಡಳಿತ ನಡೆಸುವ ಮೂಲಕ ಸಮರ್ಥ ಆಡಳಿತಗಾರ ಎನ್ನುವುದನ್ನು ಮತ್ತೊಮ್ಮೆ ತೋರಿಸಿ ಕೊಟ್ಟಿದ್ದೀರಿ. ನಿಮ್ಮನ ಮುಖ್ಯಮಂತ್ರಿ ಸ್ಥಾನ ದಿಂದ ಕೆಳಗಿಳಿಸಿದ್ರೆ ಆಡಳಿತ ಯತ್ರ ಸಂಪೂರ್ಣ ಹಳಿ ತಪ್ಪುವುದು ಗ್ಯಾರಂಟಿ. ಗ್ಯಾರಂಟಿ ಯೋಜನೆಯನ್ನು ಸಮರ್ಥವಾಗಿ ಪೂರೈಸಿಕೊಂಡು ಆಡಳಿತ ನಡೆಸುವುದು ಯಾರಿಗೂ ಸುಲಭವಲ್ಲ ಎಂದು ರಾಮದಾಸ್ ಎನ್ನುವವರು ಹೇಳಿದ್ದಾರೆ.












Click it and Unblock the Notifications