ಸಿದ್ದರಾಮಯ್ಯ ಸಿಎಂ ಆಗಬೇಕು; ಹೈಕಮಾಂಡ್ ಮುಂದೆ ಹೊಸ ಬೇಡಿಕೆ
ಬೆಂಗಳೂರು, ಮೇ 16; ಪೂರ್ಣ ಬಹುಮತಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಪಡೆದು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ರಾಜ್ಯದ ನೂತನ ಮುಖ್ಯಮಂತ್ರಿ ಯಾರು? ಎಂಬುದು ಎಲ್ಲರ ಪ್ರಶ್ನೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಎಂ ರೇಸ್‌ನಲ್ಲಿದ್ದಾರೆ.
ಸೋಮವಾರದಿಂದ ಬೆಂಗಳೂರು ಮತ್ತು ನವದೆಹಲಿಯಲ್ಲಿ ನಡೆಯುತ್ತಿರುವ ಸರಣಿ ಸಭೆಗಳು ಮುಖ್ಯಮಂತ್ರಿ ಯಾರು? ಎಂಬ ಪ್ರಶ್ನೆಯನ್ನು ಇನ್ನಷ್ಟು ಜಟಿಲಗೊಳಿಸಿವೆ. ಡಿ. ಕೆ. ಶಿವಕುಮಾರ್ ಪರವಾಗಿ ಒಕ್ಕಲಿಗರು, ಸಿದ್ದರಾಮಯ್ಯ ಪರವಾಗಿ ಕುರುಬ ಸಮುದಾಯವರು ಬ್ಯಾಟಿಂಗ್ ಮಾಡುತ್ತಿದ್ದಾರೆ.

ಮಂಗಳವಾರ ಬೆಂಗಳೂರಿನಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಡಿ. ವೆಂಕಟೇಶಮೂರ್ತಿ ಮಾತನಾಡಿ, "ರಾಜ್ಯದ ಸಿಎಂ ಹುದ್ದೆಗೆ ಡಿ. ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮಧ್ಯೆ ಸ್ಪರ್ಧೆ ಇದೆ. ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸಿಎಂ ಹುದ್ದೆ ಕೊಡಬೇಕು" ಎಂದು ಒತ್ತಾಯಿಸಿದರು.
"ಕುರುಬ ಸಮುದಾಯದ ಶೆ 80ರಷ್ಟು ಜನರು ಈ ಬಾರಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಇದು ಸಿದ್ದರಾಮಯ್ಯರಿಗೆ ಕಡೆಯ ಚುನಾವಣೆ ಆಗಿದೆ. ಅವರು 13 ಬಾರಿ ಬಜೆಟ್ ಮಂಡಿಸಿದ್ದಾರೆ, ಅನುಭವ ಇದೆ. ಸಿದ್ದರಾಮಯ್ಯರನ್ನು ಸಿಎಂ ಆಗಿ ಘೋಷಣೆ ಮಾಡಬೇಕು. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು" ಎಂದು ಆಗ್ರಹಿಸಿದರು.

"ಕುರುಬರು ಕಾಂಗ್ರೆಸ್, ಸಿದ್ದರಾಮಯ್ಯ ಬೆಂಬಲಿಸಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನ ಬರಲು ಕುರುಬರು ಕಾರಣರಾಗಿದ್ದಾರೆ. ಸಿದ್ದರಾಮಯ್ಯರು ಸಿಎಂ ಆಗುತ್ತಾರೆ ಹಾಗಾಗಿ ಕಾಂಗ್ರೆಸ್‌ಗೆ ಮತ ನೀಡುವಂತೆ ಮತಯಾಚನೆ ಮಾಡಲಾಗಿತ್ತು. ಹೀಗಾಗಿ ಕಾಂಗ್ರೆಸ್‌ಗೆ 135 ಸ್ಥಾನ ಬಂದಿದೆ" ಎಂದರು.
ಸಂಘದ ಪ್ರಭಾರ ಅಧ್ಯಕ್ಷರು/ ಕಾರ್ಯಾಧ್ಯಕ್ಷ ಸುಬ್ರಮಣ್ಯ ಮಾತನಾಡಿ, "ಈ ಹಿಂದೆ ಸಿಎಂ ಆಗಿದ್ದಾಗ ಎಲ್ಲಾ ಭರವಸೆಗಳನ್ನು ಸಿದ್ದರಾಮಯ್ಯ ಈಡೇರಿಸಿದ್ದರು. ಈಗ ಕೊಟ್ಟಿರುವ ಭರವಸೆಗಳನ್ನು ಈಡೇರಿಸಬೇಕಾದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಬೇಕು. 13 ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. ಹಾಗಾಗಿ ಅವರು ಆರ್ಥಿಕ ತಜ್ಞರಾಗಿದ್ದಾರೆ. ಕಾಂಗ್ರೆಸ್ ಪಕ್ಷ ನೀಡಿರುವ ಗ್ಯಾರಂಟಿಗಳನ್ನು ಅವರು ಬಂದರೆ ಈಡೇರಿಸುತ್ತಾರೆ" ಎಂದು ಹೇಳಿದರು.
ಪತ್ರಿಕಾ ಪ್ರಕಟಣೆ; ಕರ್ನಾಟಕ ಪ್ರದೇಶ ಕುರುಬರ ಸಂಘ ಪತ್ರಿಕಾ ಪ್ರಕಟಣೆಯಲ್ಲಿ 2023ನೇ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಅಭೂತಪೂರ್ವ ಯಶಸ್ಸನ್ನು ಸಾಧಿಸಿದ್ದು, ಕರ್ನಾಟಕ ಪ್ರದೇಶ ಕುರುಬರ ಸಂಘದ ವತಿಯಿಂದ ತುಂಬು ಹೃದಯದಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದೆ.
ಈ ಯಶಸ್ಸಿನ ಹಿಂದೆ ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ಹೋರಾಟವಿದೆ. ಈ ವೇಳೆಯಲ್ಲಿ ತಮ್ಮಗಳಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ಯಾವುದೇ ಭ್ರಷ್ಟಚಾರವಿಲ್ಲದೆ ಕಳಂಕ ರಹಿತವಾಗಿ ಸರ್ವರಿಗೂ ಸಮಪಾಲು ಎಂಬ ಸೂತ್ರದಡಿಯಲ್ಲಿ ರಾಜ್ಯವನ್ನು ಆಳಿದ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಗೆ ಅರ್ಹ ವ್ಯಕ್ತಿಯಾಗಿರುತ್ತಾರೆ.
ತಮ್ಮ ಆಡಳಿತದ ಅವಧಿಯಲ್ಲಿ ಮೇಲು-ಕೀಳು ಎನ್ನದೇ ರಾಜ್ಯದ ಸರ್ವರಿಗೂ ಸಾಮಾಜಿಕ ನ್ಯಾಯ ತತ್ವದ ಅಡಿಯಲ್ಲಿ ಯೋಜನೆಗಳನ್ನು ರೂಪಿಸಿ ಅರ್ಹ ಫಲಾನುಭವಿಗಳಿಗೆ ಸೂಕ್ತ ಸಮಯದಲ್ಲಿ ನೀಡಿರುತ್ತಾರೆ. 2013-2018ನೇ ಸಾಲಿನಲ್ಲಿ ಮುಖ್ಯಮಂತ್ರಿಗಳಾಗಿ ನೀಡಿದ ಕಾರ್ಯಕ್ರಮಗಳನ್ನು ಮುಂದುವರೆಸಲು ಹಾಗೂ ಈಗಿನ ಚುನಾವಣೆಯಲ್ಲಿ ನೀಡಿರುವ ಪ್ರಣಾಳಿಕೆಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲು ಮತ್ತೊಮ್ಮೆ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಆಯ್ಕೆ ಮಾಡಬೇಕಾಗಿ ವಿನಂತಿ ಎಂದು ಪ್ರಕಟಣೆ ಹೇಳಿದೆ.
ಲೋಕಸಭಾ ಚುನಾವಣೆಯು 2024ನೇ ಸಾಲಿನಲ್ಲಿ ನಡೆಯಲಿದ್ದು, ಭ್ರಷ್ಟಚಾರದ ಬಿಜೆಪಿ ಪಕ್ಷವನ್ನು ಎದುರಿಸಲು ಹಾಗೂ ರಾಜ್ಯದ ಜನತೆಗೆ ಸಾಮಾಜಿಕ ನ್ಯಾಯದಡಿ ಆಡಳಿತವನ್ನು ನೀಡಲು ಸಿದ್ದರಾಮಯ್ಯ ಸಮರ್ಥರಾಗಿದ್ದು, ಇವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಘೋಷಣೆ ಮಾಡಬೇಕಾಗಿ ಕರ್ನಾಟಕ ಪ್ರದೇಶ ಕುರುಬರ ಸಂಘದ ವತಿಯಿಂದ ಒತ್ತಾಯಿಸುತ್ತಿದ್ದೇವೆ ಎಂದು ತಿಳಿಸಿದೆ.
ಈ ಕುರಿತು ತೀರ್ಮಾನ ಕೈಗೊಳ್ಳಬೇಕು ಎಂದು ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ವಾದ್ರಾ, ಕೆ. ಸಿ. ವೇಣುಗೋಪಾಲ್, ರಣದೀಪ್ ಸುರ್ಜೆವಾಲ ಮತ್ತು ಡಿ. ಕೆ. ಶಿವಕುಮಾರ್ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದೆ.












Click it and Unblock the Notifications