ರಣರಂಗವನ್ನು ಬಿಟ್ಟು ಓಡಿ ಹೋಗುವ ಹೇಡಿ ನಾನಾಗಲಾರೆ: ಸಿಎಂ ಸಿದ್ದರಾಮಯ್ಯ ಪೋಸ್ಟ್
ಬೆಂಗಳೂರು, ಫೆಬ್ರವರಿ 21: ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಸುದೀರ್ಘ ಪೋಸ್ಟ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಹಾಗಾದ್ರೆ, ಅದರಲ್ಲಿ ಏನೆಲ್ಲಾ ಇದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈ ಪೋಸ್ಟ್‌ನಲ್ಲಿ ಸಿಎಂ ಸಿದ್ದರಾಯಮ್ಮ ಅವರನ್ನು ತುಳಿಯಲು ಏನೆಲ್ಲಾ ಪ್ರಯತ್ನಗಳು ನಡೆದವು, ಯಾರೆಲ್ಲಾ ಈ ಕೆಲಸವನ್ನು ಮಾಡಿದ್ದಾರೆ ಎಂದು ವಿವರಿಸಿದ್ದಾರೆ. ಅದರಲ್ಲೂ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಲೇಖನ ಅಂತಲೂ ಬರೆದುಕೊಂಡಿದ್ದು, ಅವರು ಹೇಗೆ ಪೋಸ್ಟ್ ಮಾಡಿದ್ದಾರೆಯೋ ಅದನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ ಗಮನಿಸಿ.

'ಟೀಕೆ-ಆರೋಪಗಳಿಗೆ ಜಾತಿಯೂ ಒಂದು ಕಾರಣ'
"ನನ್ನ ಮೇಲೆ ವಿರೋಧಿಗಳು ನಡೆಸುತ್ತಿರುವ ಬಹುತೇಕ ದಾಳಿಗಳು, ಮಾಡುತ್ತಿರುವ ಟೀಕೆ-ಆರೋಪಗಳಿಗೆ ನಾನು ಹುಟ್ಟಿದ ಜಾತಿಯೂ ಒಂದು ಕಾರಣ. ಕುರಿ ಕಾಯುತ್ತದ್ದವನು ಮುಖ್ಯಮಂತ್ರಿ ಆಗಿ ಬಿಟ್ಟನಲ್ಲಾ. ಆರ್ಥಿಕ ತಜ್ಞರಿಗೆ ಸರಿಸಮನಾಗಿ ನಿಂತು ಸಾಲುಸಾಲು ಬಜೆಟ್ ಮಂಡಿಸಿ ಶಹಬ್ಬಾಸ್ ಗಿರಿ ಗಳಿಸುತ್ತಿದ್ದಾನಲ್ಲಾ ಎನ್ನುವ ಅಸಹನೆ, ಅವರೊಳಗೆ ದ್ವೇಷ, ಅಸೂಯೆ ಕುದಿಯುತ್ತಿದೆ. ಇವನೊಬ್ಬನನ್ನು ರಾಜಕೀಯವಾಗಿ ಮುಗಿಸಿಬಿಟ್ಟರೆ ಅದರ ನಂತರ ನಮ್ಮೆಲ್ಲರ ಹಾದಿ ಸುಲಭವಾಗುತ್ತದೆ ಎನ್ನುವ ರಾಜಕೀಯ ದುರುದ್ದೇಶದ ಲೆಕ್ಕಾಚಾರ ಇವರ ಮನಸ್ಸಿನಲ್ಲಿದೆ," ಎಂದು ಟೀಕಕಾರರಿಗೆ ತಿರುಗೇಟು ನೀಡಿದ್ದಾರೆ.
ಸಾಮಾಜಿಕ ಬದಲಾವಣೆಗೆ ಕೈ ಹಾಕಿದವರೆಲ್ಲರ ವಿರುದ್ಧ ಇಂತಹ ಷಡ್ಯಂತ್ರಗಳು ನಡೆದಿರುವುದನ್ನು ಇತಿಹಾಸದ ಪುಟದಲ್ಲಿ ಕಾಣಬಹುದು. ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧೀಜಿ, ಪೆರಿಯಾರ್, ನಾರಾಯಣ ಗುರು, ಕನಕದಾಸರಾದಿಯಾಗಿ ಸಾಮಾಜಿಕ ಪರಿವರ್ತನೆಗೆ ಹೋರಾಟ ನಡೆಸಿದವರೆಲ್ಲರನ್ನು ಹಣಿಯುವ, ದಮನಿಸುವ, ಮುಗಿಸುವ ಸಂಚು-ಒಳಸಂಚುಗಳು ನಡೆಯುತ್ತಲೇ ಬಂದಿದೆ.
ಬಸವಣ್ಣ ಏನು ತಪ್ಪು ಮಾಡಿದ್ದರು? ಜಾತಿ ವಿನಾಶಕ್ಕೆ ಪ್ರಯತ್ನ ಮಾಡಿದ್ದರು, ಅಂತರ್ಜಾತಿಯವರಿಗೆ ಮದುವೆ ಮಾಡಿಸಿದ್ದರು, ಅವಕಾಶ ವಂಚಿತ ತಬ್ಬಲಿ ಜಾತಿಗಳಿಗೆ ಸ್ವಾಭಿಮಾನದ ದೀಕ್ಷೆ ಕೊಟ್ಟು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಸುವ ಪ್ರಯತ್ನ ಮಾಡಿದ್ದರು. ಈ ಕಾರಣಕ್ಕಾಗಿ ಅವರನ್ನು ವ್ಯವಸ್ಥಿತ ಸಂಚಿನ ಮೂಲಕ ಮುಗಿಸಲಾಯಿತು ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
"ಕುರಿ ಕಾಯುತ್ತಿದ್ದವನು ಸಿಎಂ ಆದದ್ದೇ ಪಟ್ಟಭದ್ರರ ಕಣ್ಣು ಕೆಂಪಾಗಲು ಕಾರಣ"
— Siddaramaiah (@siddaramaiah) February 20, 2026
ನನ್ನ ಮೇಲೆ ವಿರೋಧಿಗಳು ನಡೆಸುತ್ತಿರುವ ಬಹುತೇಕ ದಾಳಿಗಳು, ಮಾಡುತ್ತಿರುವ ಟೀಕೆ-ಆರೋಪಗಳಿಗೆ ನಾನು ಹುಟ್ಟಿದ ಜಾತಿಯೂ ಒಂದು ಕಾರಣ. ಕುರಿಕಾಯುತ್ತಾ ಇರಬೇಕಾದವನು ಮುಖ್ಯಮಂತ್ರಿ ಆಗಿ ಬಿಟ್ಟನಲ್ಲಾ, ಆರ್ಥಿಕ ತಜ್ಞರಿಗೆ ಸರಿಸಮನಾಗಿ ನಿಂತು ಸಾಲುಸಾಲು ಬಜೆಟ್ ಮಂಡಿಸಿ… pic.twitter.com/AwrvtGTmrW
"ಈಗ ರಾಹುಲ್ ಗಾಂಧಿಯವರ ವಿರುದ್ಧವೂ ಸಂಚು ನಡೆಯುತ್ತಿದೆ. ಯಾವಾಗ ರಾಹುಲ್ ಗಾಂಧಿಯವರು ಜಾತಿ, ಮತ, ಪಂಥ, ವರ್ಗವನ್ನು ಮೀರಿ ಎಲ್ಲ ಭಾರತೀಯರನ್ನು ಜೋಡಿಸುವ ಕೆಲಸ ಶುರು ಮಾಡಿದರೋ, ಯಾವಾಗ ಅವರು ಸಾಮಾಜಿಕ ನ್ಯಾಯದ ಪ್ರಶ್ನೆಗಳನ್ನು ಎತ್ತಲು ಶುರುಮಾಡಿದರೋ, ಯಾವಾಗ ಅವರು ಜಾತಿಗಣತಿ ಬಗ್ಗೆ, ಮೀಸಲಾತಿ ಹೆಚ್ಚಳದ ಬಗ್ಗೆ ದನಿ ಎತ್ತಲು ಪ್ರಾರಂಭಿಸಿದರೋ ಅಂದಿನಿಂದ ಅವರನ್ನು ತುಳಿಯುವ ಕೆಲಸ ಜೋರಾಗಿ ನಡೆಯುತ್ತಿದೆ. ಕಾಲ ಬದಲಾಗಿದೆ, ನಾವು ಮನುವಿನ ಕಾಲದಲ್ಲಿಯೂ ಇಲ್ಲ, ರಾಜ-ಮಹಾರಾಜರ ಗುಲಾಮರೂ ಅಲ್ಲ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ನಮಗಿರುವ ದೊಡ್ಡ ರಕ್ಷಣೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ," ಎಂದು ಹೇಳಿದ್ದಾರೆ.
'ರಾಜಕೀಯವಾಗಿ ಮುಗಿಸಲು ಪ್ರಯತ್ನ'
ನನ್ನ ನಾಲ್ಕು ದಶಕಗಳ ರಾಜಕೀಯ ಜೀವನ ಎಂದಿಗೂ ಹೂವಿನ ಹಾಸಿಗೆ ಆಗಿರಲಿಲ್ಲ, ಅದು ಕಲ್ಲು - ಮುಳ್ಳುಗಳ ಹಾದಿಯಾಗಿತ್ತು. ನನ್ನನ್ನು ರಾಜಕೀಯವಾಗಿ ಮುಗಿಸಲು ಹಲವಾರು ದೊಡ್ಡ ದೊಡ್ಡ ನಾಯಕರು ಹಲವಾರು ಬಗೆಯ ಕುಟಿಲ ಕಾರಸ್ತಾನಗಳನ್ನು ಮಾಡಿದ್ದಾರೆ. ಅವುಗಳನ್ನೆಲ್ಲವನ್ನೂ ಜನತೆಯ ಆಶೀರ್ವಾದದಿಂದ ಗೆದ್ದು ಬಂದಿದ್ದೇನೆ.
"ರಣರಂಗವನ್ನು ಬಿಟ್ಟು ಓಡಿ ಹೋಗುವ ಹೇಡಿ ನಾನಾಗಲಾರೆ"
ಇದು ನನ್ನ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳಲ್ಲ, ಇದು ನನ್ನನ್ನು ನಂಬಿರುವ, ಪ್ರೀತಿಸುತ್ತಿರುವ, ನನಗೆ ನಿರಂತರವಾಗಿ ಆಶೀರ್ವಾದ ನೀಡಿ ಬೆಂಬಲಿಸುತ್ತಿರುವ ನಿಮ್ಮ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಎನ್ನುವುದು ನನಗೆ ಚೆನ್ನಾಗಿ ಗೊತ್ತು.
"ಸಾಮಾಜಿಕ ನ್ಯಾಯಕ್ಕಾಗಿ ನನ್ನ ಉಸಿರಿರುವ ವರೆಗೆ ಹೋರಾಡುತ್ತೇನೆ"
— Siddaramaiah (@siddaramaiah) February 20, 2026
ನನ್ನ ನಾಲ್ಕು ದಶಕಗಳ ರಾಜಕೀಯ ಜೀವನ ಎಂದಿಗೂ ಹೂವಿನ ಹಾಸಿಗೆ ಆಗಿರಲಿಲ್ಲ, ಅದು ಕಲ್ಲು - ಮುಳ್ಳುಗಳ ಹಾದಿಯಾಗಿತ್ತು. ನನ್ನನ್ನು ರಾಜಕೀಯವಾಗಿ ಮುಗಿಸಲು ಹಲವಾರು ದೊಡ್ಡ ದೊಡ್ಡ ನಾಯಕರು ಹಲವಾರು ಬಗೆಯ ಕುಟಿಲ ಕಾರಸ್ತಾನಗಳನ್ನು ಮಾಡಿದ್ದಾರೆ. ಅವುಗಳನ್ನೆಲ್ಲವನ್ನೂ ಜನತೆಯ… pic.twitter.com/rA8XGFuuZL
ಆದ್ದರಿಂದ ನನ್ನ ಉಸಿರು ಇರುವವರೆಗೆ ಈ ರಾಜಕೀಯ ಷಡ್ಯಂತ್ರ, ದ್ವೇಷ-ಅಸೂಯೆಯ ರಾಜಕಾರಣದ ವಿರುದ್ಧ ಹೋರಾಡುತ್ತೇನೆ. ಇದು ಸತ್ಯ, ನ್ಯಾಯ ಮತ್ತು ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟ. ನಿಮ್ಮೆಲ್ಲರ ಬೆಂಬಲದೊಂದಿಗೆ ಈ ಹೋರಾಟವನ್ನು ನನ್ನ ಉಸಿರು ಇರುವವರೆಗೆ ನಡೆಸುತ್ತೇನೆ. ರಣರಂಗವನ್ನು ಬಿಟ್ಟು ಓಡಿ ಹೋಗುವ ಹೇಡಿ ನಾನಾಗಲಾರೆ," ಎಂದು ಬರೆದುಕೊಂಡಿದ್ದಾರೆ.












Click it and Unblock the Notifications