ಬಹುತೇಕ ಮುಂದಿನ ಸಿಎಂ ಸಿದ್ದರಾಮಯ್ಯ!? ಕೊನೆ ಕ್ಷಣದಲ್ಲಿ ಡಿ.ಕೆ.ಶಿವಕುಮಾರ್ ದೆಹಲಿ ಪ್ರವಾಸ ರದ್ದು? ಹೈ ಲೆಕ್ಕಾಚಾರವೇನು!?
ಬೆಂಗಳೂರು, ಮೇ15: ಕರ್ನಾಟಕ ಮುಖ್ಯಮಂತ್ರಿ ಆಯ್ಕೆ ವಿಚಾರ ಇದೀಗ ದಿಲ್ಲಿ ಅಂಗಳ ತಲುಪಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಇಬ್ಬರೂ ಸಿಎಂ ಗಾದಿಗೆ ಪ್ರಬಲ ಪೈಪೋಟಿ ಒಡ್ಡುತ್ತಿದ್ದಾರೆ.
ಐತಿಹಾಸಿಕ ಗೆಲುವು ಸಾಧಿಸಿದ್ದ ಕಾಂಗ್ರೆಸ್ ನ 135 ಶಾಸಕರ ಅಭಿಪ್ರಾಯ ಹಾಗೂ ವೀಕ್ಷಕರ ಅಭಿಪ್ರಾಯ ಸಂಗ್ರಹಿಸಿದ್ದು, ಮುಂದಿನ ಪಕ್ಷದ ಒಳಿತಿಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನ ನೀಡಿ ಎಂದು ಹಲವು ಸಮುದಾಯಗಳು ಆಗ್ರಹಿಸಿದ್ದಾರೆ. ಅಲ್ಲದೇ ಇಲ್ಲಿಯವರೆಗೆ ಬಂದ ಸಮೀಕ್ಷೆಗಳಲ್ಲೆಲ್ಲ ಸಿದ್ದರಾಮಯ್ಯ ಪರವೇ ಹೆಚ್ಚಿನ ಒಲವು ವ್ಯಕ್ತವಾಗಿತ್ತು.

ಅದರಲ್ಲೂ ಎಲ್ಲಾ ಪಕ್ಷಗಳ ಸಿಎಂ ಅಭ್ಯರ್ಥಿಗಳನ್ನು ಮೀರಿ ಸಿದ್ದರಾಮಯ್ಯಗೆ ಜನರು 'ಸೈ' ಅಂದಿದ್ದರು. ಸಮೀಕ್ಷೆಯ ಫಲಿತಾಂಶಗಳಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನಡುವೆಯಂತೂ ಅಜಗಜಾಂತರ ವ್ಯತ್ಯಾಸ ಇತ್ತು.
ಈಗಾಗಲೇ ತಮ್ಮನ್ನೇ ಮುಖ್ಯಮಂತ್ರಿ ಮಾಡಿ ಎನ್ನಲು ಇಬ್ಬರ ಬಳಿಯಲ್ಲೂ ಬಲವಾದ ಕಾರಣಗಳಿವೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬರೋಬ್ಬರಿ 135 ಸ್ಥಾನಗಳನ್ನು ಗಳಿಸುವಲ್ಲಿ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಶ್ರಮವಿದೆ. ಹೀಗಾಗಿ, ಯಾರೊಬ್ಬರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದರೂ ಮತ್ತೊಬ್ಬರು ಬೇಸರಗೊಳ್ಳೋದು ಸಹಜ.

ಆದರೆ, ಈ ಹಿಂದೆ 2019 ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಒಂದೇ ಒಂದು ಸ್ಥಾನದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಇನ್ನೂ 2024 ರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನ ಗೆಲ್ಲಲು ಕಾಂಗ್ರೆಸ್ ಹೈಕಮಾಂಡ್ ತಂತ್ರಗಾರಿಕೆಯನ್ನ ರೂಪಿಸಿದೆ ಎನ್ನಲಾಗಿದೆ.
ಇತ್ತ 135 ಶಾಸಕರ ಅಭಿಪ್ರಾಯ, ವೀಕ್ಷಕರ ಅಭಿಪ್ರಾಯ ಹಾಗೂ ಲೋಕಸಭಾ ಚುನಾವಣೆ ಹಿನ್ನೆಲೆ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಲು ಹೈಕಮಾಂಡ್ ಮುಂದಾಗಿದೆ ಎನ್ನಲಾಗಿದೆ. ಈಗಾಗಲೇ ತಮ್ಮ ಆಪ್ತ ಶಾಸಕರೊಂದಿಗೆ ಹೈಕಮಾಂಡ್ ನಾಯಕರ ಭೇಟಿಗೆ ಸಿದ್ದರಾಮಯ್ಯ ತೆರಳಿದ್ದಾರೆ. ಇತ್ತ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸಿಎಂ ಸ್ಥಾನ ನೀಡಲಿದೆ ಎಂಬ ಮಾಹಿತಿ ತಿಳಿಯುತ್ತಿದೆ, ಡಿ ಕೆ ಶಿವಕುಮಾರ್ ದೆಹಲಿ ಪ್ರವಾಸ ರದ್ದುಗೊಳಿದಿದ್ದಾರೆ ಎನ್ನಲಾಗಿದೆ.

ಈ ಕುರಿತು ಡಿ ಕೆ ಶಿವಕುಮಾರ್ ಮಾಧ್ಯಮಗಳ ಜೊತೆಗೆ ಮಾತನಾಡಿ, ನಾನು ಯಾವ ಶಾಸಕರನ್ನೂ ಕರೆದುಕೊಂಡು ಹೋಗಲ್ಲ. ನನಗೆ ಯಾರ ಬೆಂಬಲವು ಬೇಡ, ನನ್ನ ಕರ್ತವ್ಯ ನಾನು ಮಾಡಿದ್ದೇನೆ ನನ್ನನ್ನು ಬಂಡೆ ಎಂದು ಕರೆದಿದ್ದೀರಾ,ಆಕೃತಿಯಾದ್ರು ಮಾಡಿ ವಿಧಾನಸೌಧಕ್ಕೆ ಚಪ್ಪಡಿಯಾದ್ರು ಮಾಡಿ ಮರಳಾದ್ರು ಮಾಡಿ. ಒಟ್ನಲ್ಲಿ ವಿಧಾನಸೌಧಕ್ಕೆ ಚಪ್ಪಡಿ ಮಾಡಿ ಅಂತ ಹೇಳಿದ್ದೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನೂ ನನ್ನ ಬಳಿ ನಂಬರ್ ಇಲ್ಲ. ನಾನು ಪಕ್ಷ ಪೂಜೆ ಮಾಡ್ತೀನಿ, ವ್ಯಕ್ತಿ ಪೂಜೆಯಲ್ಲ, ಯಾವ ಪ್ರಶ್ನೆಗೂ ಉತ್ತರ ಕೊಡಲ್ಲ. ನನಗೆ ತಾಳ್ಮೆ ಸಮಯ ಪ್ರಜ್ಞೆ ಹೋರಾಟ ಮನೋಭಾವವಿದೆ. ನನ್ನಲ್ಲಿರುವ ತಂತ್ರಗಳಿಂದ ಪಕ್ಷ ಅಧಿಕಾರಕ್ಕೆ ತಂದಿದ್ದೇನೆ, ಇಷ್ಟು ಸಾಕು ನನಗೆ ಎಂದು ಹೇಳಿದ ಅವರು, ನನಗೆ ಹೊಟ್ಟೆಯಲ್ಲಿ ಸಮಸ್ಯೆಯಾಗಿ ಉರಿ ಪ್ರಾರಂಭವಾಗಿದೆ.
ಡಾಕ್ಟರ್ ಬರ್ತಾ ಇದ್ದಾರೆ, ನನಗೆ ರೆಸ್ಟ್ ಬೇಕು ಎಂದು ಹೇಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇತ್ತ ಡಿ ಕೆ ಶಿವಕುಮಾರ್ ದೆಹಲಿಗೆ ಹೋಗುವುದು ಅನುಮಾನ ಎನ್ನಲಾಗಿದ್ದು, ಡಿ ಕೆ ಶಿವಕುಮಾರ್ ಸಹೋದರ ಹಾಗೂ ಸಂಸದ ಡಿ ಕೆ ಸುರೇಶ್ ದೆಹಲಿಗೆ ತೆರಳಿದ್ದಾರೆ.
ಸಿದ್ದರಾಮಯ್ಯ ಸಿಎಂ!? ಹೈಕಮಾಂಡ್ ನಾಯಕರ ಲೆಕ್ಕಾಚಾರವೇನು?
1. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಹಿಂದ ಮತಬ್ಯಾಂಕ್ ನಿರ್ವಹಣೆ ಮಾಡಬೇಕು.
2. ಈ ಹಿಂದೆ 5 ವರ್ಷಗಳ ಕಾಲ ಸಿಎಂ ಆಗಿ ಉತ್ತಮ ಆಡಳಿತ ನೀಡಿದ್ದು, ಹಲವು ಜನಪರ ಕಾರ್ಯಕ್ರಮಗಳನ್ನ ನೀಡುವ ಮೂಲಕ ರಾಜ್ಯದ ಜನರ ಮೆಚ್ಚುಗೆಗೆ ಕಾರಣರಾಗಿದ್ದಾರೆ.
3. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬರೀ ಹಳೇ ಮೈಸೂರಿಗಷ್ಟೇ ಸೀಮಿತವಾದ ನಾಯಕ, ಆದರೆ ಸಿದ್ದರಾಮಯ್ಯ ರಾಜ್ಯದ ಜನರಿಗೆ ಪರಿಚಿತ
4. ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲ್ಲು ಹೈಕಮಾಂಡ್ ನಾಯಕರು ಪ್ಲಾನ್ ಹಾಕಿಕೊಂಡಿದ್ದು, ಸಿದ್ದರಾಮಯ್ಯ ಸಿಎಂ ಸ್ಥಾನ ನೀಡುವುದರಿಂದ ಪಕ್ಷಕ್ಕೆ ಸಹಾಯಕವಾಗಲಿದೆ ಎನ್ನಲಾಗಿದೆ.
5.ಉತ್ತರ ಕರ್ನಾಟಕದ ಮತಕ್ಷೇತ್ರಗಳ ಹಿನ್ನೆಲೆಯಲ್ಲಿ ಸಿದ್ದರಾಮಯ್ಯಗೆ ಮಾನ್ಯತೆ ಕೊಡಬೇಕು.
6.ಈಗಾಗಲೇ ಆಡಳಿತ ನಡೆಸಿದ ಅನುಭವ ಮತ್ತು ಕ್ಲೀನ್ ಇಮೇಜ್ ಇರುವ ನಾಯಕ












Click it and Unblock the Notifications