ಮೋದಿ ಸೋಲಿಸಲು ಹೋಗಿ ಸಿದ್ದರಾಮಯ್ಯ ಸೋತಿದ್ದಾರೆ ಅಷ್ಟೇ...
Recommended Video

ಬೆಳಗಾವಿ, ಜೂ 30: ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭಾರೀ ಅಂತರದಿಂದ ಸೋಲಿಸಿದ್ದ ಉನ್ನತ ಶಿಕ್ಷಣ ಖಾತೆಯ ಸಚಿವ ಜಿ ಟಿ ದೇವೇಗೌಡ, ಈಗ ಸಿದ್ದು ಪರ ಹೇಳಿಕೆ ನೀಡಿದ್ದಾರೆ.
ಧರ್ಮಸ್ಥಳ ಶಾಂತಿವನದ ಸಿದ್ದರಾಮಯ್ಯನವರ ವಿಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಿದ್ದ ಜಿಟಿಡಿ, ಸಮ್ಮಿಶ್ರ ಸರಕಾರದಲ್ಲಿ ಯಾವುದೇ ಗೊಂದಲವಿಲ್ಲ. ನಾನು ಸಿದ್ದರಾಮಯ್ಯನವರನ್ನು ಸೋಲಿಸಲಿಲ್ಲ, ಮೋದಿ ಜೊತೆ ಯುದ್ದ ಮಾಡಲು ಹೋಗಿ ಅವರು ಸೋತಿದ್ದಾರೆಂದು ಸಚಿವರು ಹೇಳಿದ್ದಾರೆ.
ಉನ್ನತ ಶಿಕ್ಷಣ ಖಾತೆಯ ವಿಚಾರದಲ್ಲಿ ನನಗೆ ಯಾವುದೇ ತಕರಾರು ಇಲ್ಲ, ಕೊಟ್ಟ ಜವಾಬ್ದಾರಿಯನ್ನು ಅಧಿಕಾರಿಗಳ ಸಹಾಯದಿಂದ ಸಮರ್ಥವಾಗಿ ನಿಭಾಯಿಸುತ್ತೇನೆ ಎನ್ನುವ ವಿಶ್ವಾಸ ನನ್ನಲ್ಲಿದೆ ಎಂದು ಜಿ ಟಿ ದೇವೇಗೌಡ ಹೇಳಿದ್ದಾರೆ.

ನಾವಾಗಿ ಸಮ್ಮಿಶ್ರ ಸರಕಾರ ರಚಿಸಲು ಕಾಂಗ್ರೆಸ್ ಮನೆಬಾಗಿಲಿಗೆ ಹೋಗಿರಲಿಲ್ಲ. ಕಾಂಗ್ರೆಸ್ ಮುಕ್ತ್ ಭಾರತ್ ಮಾಡಬೇಕು ಎನ್ನುವ ಗುರಿಯನ್ನು ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೊಂದಿದ್ದರಿಂದ ಅವರನ್ನು ಹಣೆಯಲು ಕಾಂಗ್ರೆಸ್ಸಿನವರು ನಮ್ಮಲ್ಲಿಗೆ ಬಂದರು.
ಅತಂತ್ರ ಅಸೆಂಬ್ಲಿ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೇ, ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ದೇವೇಗೌಡರನ್ನು ಸಂಪರ್ಕಿಸಿದರು. ಸಮ್ಮಿಶ್ರ ಸರಕಾರದ ಪ್ರಸ್ತಾವನೆಯನ್ನು ಸಲ್ಲಿಸಿದರು. ಕುಮಾರಸ್ವಾಮಿಯೇ ಮುಖ್ಯಮಂತ್ರಿ ಎಂದರು, ಇದಕ್ಕೆ ಗೌಡ್ರು ಸಮ್ಮತಿಸಿದರು ಎಂದು ಜಿ ಟಿ ದೇವೇಗೌಡ ಹೇಳಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ ಟಿ ದೇವೇಗೌಡ, ಸಿದ್ದರಾಮಯ್ಯನವರನ್ನು 36,042 ಮತಗಳ ಅಂತರದಿಂದ ಸೋಲಿಸಿದ್ದರು. ಕರ್ನಾಟಕ ರಾಜ್ಯ ಅಸೆಂಬ್ಲಿ ಚುನಾವಣೆಯ ಹೈವೊಲ್ಟೇಜ್ ಕ್ಷೇತ್ರಗಳಲ್ಲಿ ಇದೊಂದಾಗಿತ್ತು.












Click it and Unblock the Notifications