'ಕಾಂಗ್ರೆಸ್ ಇತಿಶ್ರೀಗೆ ರಾಜ್ಯದಲ್ಲಿ ಒಬ್ಬ ಸಿದ್ದು, ಪಂಜಾಬ್ ನಲ್ಲೊಬ್ಬ ಸಿಧು'
ಬೆಂಗಳೂರು, ಮಾರ್ಚ್ 10: ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದೆ. ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆಯನ್ನು ಸಾಧಿಸಿದ್ದರೆ, ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಜಯದತ್ತ ಮುನ್ನುಗ್ಗುತ್ತಿದೆ. ಗೋವಾದಲ್ಲಿ ಬಹುಮತಕ್ಕೆ ಬಿಜೆಪಿಗೆ ಎರಡ್ಮೂರು ಸೀಟಿನ ಕೊರತೆ ಎದುರಾಗಬಹುದು.
ಚುನಾವಣೆಯಲ್ಲಿ ಬಿಜೆಪಿಯ ಸಾಧನೆಯ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ರಾಜ್ಯದಲ್ಲಿ ಒಬ್ಬ ಸಿದ್ದು (ಸಿದ್ದರಾಮಯ್ಯ) ಮತ್ತು ಪಂಜಾಬ್ ನಲ್ಲಿ ಒಬ್ಬ ಸಿದ್ದು ಸಾಕು ಕಾಂಗ್ರೆಸ್ಸಿಗೆ ಇತಿಶ್ರೀ ಹಾಡಲು ಎಂದು ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ.
ಪಂಜಾಬ್ ನಲ್ಲಿ ಕಾಂಗ್ರೆಸ್ ನಿರಾಶಾದಯಕ ಪ್ರದರ್ಶನವನ್ನು ಮಾಡಿದ್ದು, ಇತ್ತೀಚಿನ ಟ್ರೆಂಡ್ ಪ್ರಕಾರ, ಆಮ್ ಆದ್ಮಿ ಪಕ್ಷ 91, ಕಾಂಗ್ರೆಸ್ 17, ಶಿರೋಮಣಿ ಅಕಾಲಿದಳ 6 ಮತ್ತು ಇತರರು ಮೂರು ಸ್ಥಾನದಲ್ಲಿ ಮುನ್ನಡೆಯಲ್ಲಿದ್ದಾರೆ.

ಪಂಜಾಬ್ ಮತದಾರ ಕಾಂಗ್ರೆಸ್ ನಾಯಕರಿಗೆ ಬಿಸಿಮುಟ್ಟಿಸಿದ್ದು ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಮತ್ತು ಪಂಜಾಬ್ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹಿನ್ನಡೆಯಲ್ಲಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಿಧು ಪ್ರಕಟಿಸಿದ್ದಾರೆ.
"ನಾವು ನಿರೀಕ್ಷಿಸಿದ್ದಕ್ಕಿಂತ ಉತ್ತಮ ಫಲಿತಾಂಶ ಬಂದಿದೆ, ಪ್ರಧಾನಿ ಮೋದಿಯವರ ನೇತೃತ್ವವನ್ನು ಮತದಾರ ಒಪ್ಪಿಕೊಂಡಿದ್ದಾನೆ. ಈ ಚುನಾವಣೆಯ ನಂತರ ರಾಜ್ಯದಲ್ಲಿ ಅಂತಹ ಬದಲಾವಣೆ ಏನೂ ಆಗುವುದಿಲ್ಲ"ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಭಿಪ್ರಾಯ ಪಟ್ಟರು.
"ರಾಜ್ಯದಲ್ಲಿ ಒಬ್ಬ ಸಿದ್ದು, ಪಂಜಾಬ್ ನಲ್ಲಿ ಒಬ್ಬ ಸಿದ್ದು, ಇವರಿಬ್ಬರು ಆಯಾಯ ರಾಜ್ಯದಲ್ಲಿ ಕಾಂಗ್ರೆಸ್ ಮುಗಿಸಲು ಸಾಕು. ಕಾಂಗ್ರೆಸ್ಸಿನ ಪಾದಯಾತ್ರೆಯ ಕಣ್ಣುಕಟ್ಟಿನ ರಾಜಕೀಯವನ್ನು ನಂಬುವವರು ಯಾರೂ ಇಲ್ಲ. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಮುಗಿಸುತ್ತಾರೆ"ಎಂದು ಜಗದೀಶ್ ಶೆಟ್ಟರ್ ಹೇಳಿದರು.












Click it and Unblock the Notifications